ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ದನಗಳ ಪರಿಷೆಗೆ ಚಾಲನೆ

ರೈತರಿಗೆ ಮಾಸ್ಕ್‌, ಸ್ಯಾನಿಟೈಜ್‌ ವಿತರಿಸಿದ ಶಾಸಕ
Last Updated 15 ಏಪ್ರಿಲ್ 2021, 3:13 IST
ಅಕ್ಷರ ಗಾತ್ರ

ಮಾಗಡಿ: ‘ರೈತರು ಜಾತ್ರೆಯಲ್ಲಿ ಕಡ್ಡಾಯವಾಗಿ ಕೋವಿಡ್‌ ಮಾರ್ಗಸೂಚಿ ಪಾಲಿಸಬೇಕು’ ಎಂದು ಶಾಸಕ ಎ. ಮಂಜುನಾಥ ತಿಳಿಸಿದರು.

ರಂಗನಾಥಸ್ವಾಮಿ ದನಗಳ ಜಾತ್ರೆಯಲ್ಲಿ ರೈತರಿಗೆ ಮಾಸ್ಕ್ ಮತ್ತು ಸ್ಯಾನಿಟೈಸ್ ವಿತರಿಸಿ ಅವರು ಮಾತನಾಡಿದರು.

ಪಾರಂಪರಿಕ ದನಗಳ ಜಾತ್ರೆ ನಿಲ್ಲಿಸಬಾರದು. ರೈತರ ಅನುಕೂಲಕ್ಕಾಗಿ ದನಗಳ ಜಾತ್ರೆ ನಡೆಸಲಾಗುತ್ತಿದೆ. ರೈತರು ಸಾಕಿರುವ ರಾಸುಗಳಿಗೆ ಗುಣಮಟ್ಟದ ಬೆಲೆ ದೊರೆಯಬೇಕು. ರೈತರಿಗೆ ಅನುಕೂಲವಾಗಲಿ ಎಂದು ರಾಸುಗಳನ್ನು ಸಾಕಿರುವ ರೈತರ ಒತ್ತಾಯದ ಮೇರೆಗೆ ಜಾತ್ರೆ ನಡೆಸಲಾಗುತ್ತಿದೆ ಎಂದರು.

ಪಟ್ಟಣದ ಜನತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜಾತ್ರೆಯಲ್ಲಿ ಸೇರಿರುವ ರೈತರಿಗೆ ಪಶುಪಾಲನಾ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಗಳಿಂದ ಅನುಕೂಲ ಮಾಡಿಕೊಡಲಾಗುತ್ತಿದೆ. ಜಾತ್ರೆಯಲ್ಲಿ ಸೇರಿರುವ ರೈತರಿಗೆ ಊಟದ ವ್ಯವಸ್ಥೆ ಮಾಡುವ ಬಗ್ಗೆ ಜುಟ್ಟನಹಳ್ಳಿ ಜಯರಾಮಯ್ಯ ಮತ್ತು ಇತರರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಪ್ರಗತಿಪರ ರೈತ ಜುಟ್ಟನಹಳ್ಳಿ ಜಯರಾಮಯ್ಯ ಮಾತನಾಡಿ, ತಾಲ್ಲೂಕಿನ ವಿವಿಧೆಡೆಯಲ್ಲಿ ದೇಸಿ ಹಸು, ಕರುಗಳನ್ನು ಸಾಕುವ ಬಹುಸಂಖ್ಯಾತ ರೈತರು ರಂಗನಾಥಸ್ವಾಮಿ ದನಗಳ ಜಾತ್ರೆಯಲ್ಲಿ ರಾಸುಗಳನ್ನು ಮಾರಾಟಕ್ಕೆ ತರುವುದು ವಾಡಿಕೆ. ರೈತರು ಸಾಕಿರುವ ರಾಸುಗಳನ್ನು ಮನೆಯ ಮುಂದೆ ಖರೀದಿಸಿದರೆ ಕಡಿಮೆ ಬೆಲೆಯಿರುತ್ತದೆ. ಜಾತ್ರೆಯಲ್ಲಿ ಪ್ರದರ್ಶನಕ್ಕಿಟ್ಟರೆ ರೈತರಿಗೆ ಅಧಿಕ ಲಾಭವಾಗಲಿದೆ ಎಂದು ಹೇಳಿದರು.

ಜಾತ್ರೆಯಲ್ಲಿ ಮಾರುವವರು ದಕ್ಷಿಣ ಮೈಸೂರು ಭಾಗದ ರೈತರು. ಕೊಳ್ಳುವವರು ಉತ್ತರ ಕರ್ನಾಟಕದ ರೈತರು. ಮಾಗಡಿ ರಂಗನಾಥಸ್ವಾಮಿ ಜಾತ್ರೆ ನಮ್ಮ ಜೀವಿತದ ಅವಧಿಯಲ್ಲಿಯೇ ಕಣ್ಮರೆಯಾಗಬಾರದು ಎಂಬ ಉದ್ದೇಶದಿಂದ ಕೊರೊನಾ ಸೋಂಕಿನ ನಡುವೆಯೂ ಸುರಕ್ಷತಾ ಕ್ರಮಗಳೊಂದಿಗೆ ಜಾತ್ರೆ ನಡೆಸುತ್ತಿದ್ದೇವೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ನೆರವಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ ನಾರಾಯಣಪ್ಪ, ಸದಸ್ಯರಾದ ಕಾಂತರಾಜು, ರಂಗಹನುಮಯ್ಯ, ಸದಸ್ಯೆ ಹೇಮಲತಾ, ಎಂ.ಎಂ. ಮಂಜು, ಕೆ.ವಿ. ಬಾಲು, ಉಪಾಧ್ಯಕ್ಷ ರಹಮತ್ ಉಲ್ಲಾ ಖಾನ್, ದಲಿತ ಮುಖಂಡ ಕಲ್ಕೆರೆ ಶಿವಣ್ಣ, ಕುಂಚಿಟಿಗರ ಸಂಘದ ಮುಖಂಡ ಜಯಕುಮಾರ್ ದನಗಳ ಜಾತ್ರೆ ಬಗ್ಗೆ ಮಾತನಾಡಿದರು.

ಜಾತ್ರೆಯಲ್ಲಿ ಸೇರಿರುವ ರೈತರ ಅನುಕೂಲಕ್ಕಾಗಿ ಸಮಾಜ ಸೇವಕ ಕೆ. ಬಾಗೇಗೌಡ ಮತ್ತು ಶಾಸಕರ ಬೆಂಬಲಿಗರು ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರಿಗೆ ಅನುಕೂಲ ಮಾಡಿದ್ದಾರೆ. ರೈತರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT