ಭಾನುವಾರ, ಜನವರಿ 17, 2021
22 °C
ಸೋನಿ ಕಂಪನಿಯ ಸ್ಟಿಕ್ಕರ್‍ ಅಂಟಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳು

ನಕಲಿ ಟಿ.ವಿ. ಮಾರಾಟ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ನಕಲಿ ಟಿ.ವಿ.ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಕುದೂರು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶದವರಾದ ಶಹರ್‌ಯಾರ್‍ ಖಾನ್‌ (27) ಹಾಗೂ ಶಾರುಖ್‌ ಖಾನ್‌ (19) ಬಂಧಿತರು. ಮತ್ತೊಬ್ಬ ಆರೋಪಿ ನಾಸಿರ್‌ ಖಾನ್‌ (19) ತಪ್ಪಿಸಿಕೊಂಡಿದ್ದಾರೆ. ಬಂಧಿತರಿಂದ 43 ಇಂಚಿನ 18 ಎಲ್‌ಇಡಿ ಟಿ.ವಿ.ಗಳು, ನಕಲಿ ಸ್ಟಿಕ್ಕರ್‌ಗಳು ಹಾಗೂ ಮಾರಾಟಕ್ಕೆ ಬಳಸಿದ ಒಂದು ಸ್ಕೂಟರ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರಾಗಿದ್ದು ಹೇಗೆ?: ಇದೇ ತಿಂಗಳ 17ರಂದು ಸಂಜೆ 4.30ರ ವೇಳೆಗೆ ಆರೋಪಿಗಳು ಕುದೂರು ಬೈಪಾಸ್‌ನಲ್ಲಿ ಕೃಷ್ಣಮೂರ್ತಿ ಎಂಬುವರಿಗೆ ಟಿ.ವಿ. ಮಾರಲು ಮುಂದಾಗಿದ್ದರು. ಸೋನಿ ಕಂಪನಿಯ 43 ಇಂಚು ಅಳತೆಯ ಟಿ.ವಿ.ಯನ್ನು ಕೇವಲ 8300ಕ್ಕೆ ಮಾರಾಟಕ್ಕೆ ಒಪ್ಪಿದ್ದನ್ನು ಕಂಡು ಅನುಮಾನಗೊಂಡ ಕೃಷ್ಣಮೂರ್ತಿ ಟಿ.ವಿ.ಯ ಲೇಬಲ್ ಮತ್ತಿತರೆ ವಸ್ತುಗಳನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ಗೊತ್ತಾಗಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸತ್ಯಾಂಶ ಹೊರಗೆ ಬಂದಿತು ಎಂದು ಜಿಲ್ಲಾ ಪೊಲೀ‌ಸ್‌ ವರಿಷ್ಟಾಧಿಕಾರಿ ಗಿರೀಶ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವ್ಯವಸ್ಥಿತ ಜಾಲ: ನಕಲಿ ಟಿ.ವಿ. ಮಾರಾಟದ ಹಿಂದೆ ದೊಡ್ಡದೊಂದು ವ್ಯವಸ್ಥಿತವಾದ ಜಾಲವೇ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಚೀನಾದಲ್ಲಿ ತಯಾರಾಗುವ ಹೈ-ಫೈ ಹೆಸರಿನ ಈ ಎಲ್‌ಇಡಿ ಟಿ.ವಿಗಳು ದೆಹಲಿಗೆ ಆಮದಾಗುತ್ತಿದ್ದವು. ನಂತರದಲ್ಲಿ ಇವುಗಳನ್ನು ಚೆನ್ನೈನಲ್ಲಿ ಇರುವ ಚೆನ್ನಿ ಖಾನ್‌ ಟ್ರೇಡರ್ಸ್‌ ಎಂಬಲ್ಲಿಗೆ ತರಿಸಿಕೊಳ್ಳಲಾಗುತಿತ್ತು. ಅಲ್ಲಿಂದ ಆರೋಪಿಗಳು ಕೊರಿಯರ್‍ ಮೂಲಕ ಟಿ.ವಿ.ಗಳನ್ನು ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದರು. ಅದಕ್ಕೆ ಸೋನಿ ಟಿ.ವಿ.ಯ ಹೆಸರು, ಲೋಗೊ ಮೊದಲಾದ ವಿನ್ಯಾಸಗಳನ್ನು ಬಳಸಿಕೊಂಡು ಅದೇ ಕಂಪನಿಯ ಉತ್ಪನ್ನ ಎಂಬಂತೆ ನಕಲು ಮಾಡಿ ಮಾರಾಟ ಮಾಡಲಾಗುತ್ತಿತ್ತು. ಉತ್ತರ ಪ್ರದೇಶದಿಂದ ಬಂದ ಆರೋಪಿಗಳು ನೆಲಮಂಗಲದಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದರು ಎಂದು ಗಿರೀಶ್‌ ಮಾಹಿತಿ ನೀಡಿದರು.

ದೊಡ್ಡ ಗಾತ್ರದ ಟಿ.ವಿ.ಗಳನ್ನು ನಕಲು ಮಾಡಿ ಮಾರಾಟ ಮಾಡಿದ ಜಾಲ ನಮ್ಮಲ್ಲಿ ಪತ್ತೆ ಆಗಿರುವುದು ಇದೇ ಮೊದಲು. ದೆಹಲಿ, ಚೆನ್ನೈನಲ್ಲಿ ಇನ್ನೂ ಸಾಕಷ್ಟು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರನ್ನೂ ಬಂಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಮಾಗಡಿ ಡಿವೈಎಸ್ಪಿ ಓಂಪ್ರಕಾಶ್‌ ನೇತೃತ್ವದಲ್ಲಿ ಪ್ರಕರಣವನ್ನು ಪತ್ತೆ ಮಾಡಿದ ಮಾಗಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಬಿ.ಎಸ್. ಮಂಜುನಾಥ್‌, ಕುದೂರು ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಎಚ್‌.ಟಿ. ಮಂಜುನಾಥ್‌, ಸಿಬ್ಬಂದಿಯಾದ ಗುರುಮೂರ್ತಿ, ಲಕ್ಷ್ಮಿಕಾಂತ್‌, ಶಿವಕುಮಾರ್‌, ಲವಕುಮಾರ, ಪುರುಷೋತ್ತಮ, ಸುಭಾಷ್‌ ನಾಗೂರ್‌ ಮತ್ತು ತಂಡದವರನ್ನು ಅವರು ಅಭಿನಂದಿಸಿದರು.

ಹಳ್ಳಿಗರೇ ಟಾರ್ಗೆಟ್
ಗ್ರಾಮೀಣ ಜನರ ಮುಗ್ದತೆಯನ್ನೇ ಬಂಡವಾಳವಾಗಿಸಿರಿಸಿಕೊಂಡಿದ್ದ ಆರೋಪಿಗಳು ಅಂತಹವರನ್ನೇ ಹುಡುಕಿ ಟಿ.ವಿ. ಮಾರಾಟ ಮಾಡುತ್ತಿದ್ದರು. ನಗರ ಪ್ರದೇಶಗಳ ನಿವಾಸಿಗಳು ಕಂಡುಹಿಡಿಯಬಹುದು ಎಂಬ ಕಾರಣಕ್ಕೆ ಗ್ರಾಮೀಣ ಪ್ರದೇಶಗಳನ್ನಷ್ಟೇ ಟಿ.ವಿ. ಮಾರಾಟಕ್ಕೆ ಮುಂದಾಗಿದ್ದರು. ಮೇಲ್ನೋಟಕ್ಕೆ ಈ ಉತ್ಪನ್ನಗಳು ಬ್ರಾಂಡೆಡ್‌ ಕಂಪನಿಯ ಉತ್ಪನ್ನದಂತೆಯೇ ಇದ್ದವು. ಹೀಗಾಗಿ ರೈತರು, ಜನಸಾಮಾನ್ಯರಿಗೆ ಇದರ ಅರಿವು ಇರುತ್ತಿರಲಿಲ್ಲ. 50-60 ಸಾವಿರ ಮೌಲ್ಯದ ಟಿ.ವಿ.ಗಳನ್ನು 15ರಿಂದ 20 ಸಾವಿರದವರೆಗೂ ಮಾರಾಟ ಮಾಡುತ್ತಿದ್ದರು. ಅದಾದ ಕೆಲ ನಿಮಿಷಗಳಲ್ಲಿಯೇ ಅಲ್ಲಿಂದ ತೆರಳುತ್ತಿದ್ದರು. ಮತ್ತೆ ಅತ್ತ ಧಾವಿಸುತ್ತಿರಲಿಲ್ಲ ಎಂದು ಎಸ್ಪಿ ಗಿರೀಶ್‌ ಮಾಹಿತಿ ನೀಡಿದರು.

ಕಡಿಮೆ ಬೆಲೆಗೆ ಮಾರುತ್ತಾರೆಂದು ಅಪರಿಚಿತರಿಂದ ಉತ್ಪನ್ನ ಖರೀದಿ ಮಾಡಬಾರದು. ಅಧಿಕೃತ ಮಾರಾಟ ಮಳಿಗೆಗಳಲ್ಲಿ ಖರೀದಿಸುವುದು ಒಳಿತು
-ಗಿರೀಶ್‌
ಎಸ್ಪಿ, ರಾಮನಗರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.