ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ, ಬನ್ನೇರುಘಟ್ಟದಲ್ಲಿ ಆನೆ ಕಾರ್ಯಪಡೆ: ಸಚಿವ ಈಶ್ವರ ಖಂಡ್ರೆ

ಕಾಡಾನೆ ನಿಯಂತ್ರಣಕ್ಕೆ ಕಾರ್ಯಪಡೆ ರಚನೆಗೆ ಸಚಿವ ಖಂಡ್ರೆ ಸೂಚನೆ
Published 4 ಜೂನ್ 2023, 16:41 IST
Last Updated 4 ಜೂನ್ 2023, 16:41 IST
ಅಕ್ಷರ ಗಾತ್ರ

ರಾಮನಗರ: ‘ಕಾಡಾನೆಗಳ ನಿಯಂತ್ರಿಸಿ ಮರಳಿ ಕಾಡಿಗೆ ಓಡಿಸುವುದಕ್ಕಾಗಿ ಬನ್ನೇರುಘಟ್ಟ ಮತ್ತು ರಾಮನಗರದಲ್ಲಿ ಆನೆ ಕಾರ್ಯಪಡೆಗಳನ್ನು ರಚಿಸಲಾಗುವುದು’ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದಲ್ಲಿರುವ ಅರಣ್ಯ ಭವನದಲ್ಲಿ ಭಾನುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಪ್ರಸ್ತುತ ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು ಹಾಗೂ ಚಾಮರಾಜನಗರದಲ್ಲಿ ಆನೆ ಕಾರ್ಯಪಡೆ ಕಾರ್ಯಾಚರಣೆ ಮಾಡುತ್ತಿವೆ’ ಎಂದರು. 

‘ನಾಡಿಗೆ ಬರುವ ಆನೆಗಳನ್ನು ತಡೆಯಲು ಸೌರ ವಿದ್ಯುತ್ ತಂತಿ ಬೇಲಿ ಮತ್ತು ನೇತಾಡುವ ಸೌರ ಬೇಲಿ ಸದ್ಯದ ಪರಿಹಾರವಾಗಿದೆ. ಆನೆ ಹಾವಳಿ ಹೆಚ್ಚಾಗಿ ಇರುವ ಪ್ರದೇಶದಲ್ಲಿ ಬೇಲಿ ಅಳವಡಿಸಲಾಗುವುದು’ ಎಂದರು.

ಶೀಘ್ರ ಮುಗಿಸಿ: ‘ಕಾವೇರಿ ವನ್ಯಜೀವಿ ತಾಣದ ಬಳಿ 132 ಕಿ.ಮೀ. ತಡೆಗೋಡೆ ಹಾಕುವ ಕಾರ್ಯ ನಡೆಯುತ್ತಿದ್ದು, ಈ ಪೈಕಿ 89 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ಶೀಘ್ರವೇ ಮುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಹಾಸನ ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಬನ್ನೇರುಘಟ್ಟ ಪ್ರದೇಶಗಳಲ್ಲಿ ಆನೆಗಳ ಕಾಟವಿವೆ. ಇಲ್ಲಿ ಜೀವಹಾನಿಯಾಗದ ರೀತಿಯಲ್ಲಿ ಕ್ರಮ ವಹಿಸುವಂತೆ ಸೂಚನೆ ನೀಡಿದ್ದೇನೆ’ ಎಂದರು.

‘ರಾಜ್ಯದಲ್ಲಿ 629 ಆನೆಗಳಿದ್ದರೂ, ಸಾವಿನ ಪ್ರಮಾಣ ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇದೆ. ಆದರೂ, ಮಾನವನ ಜೀವ ಅಮೂಲ್ಯವಾಗಿದ್ದು ಜೀವ ಹಾನಿ ತಪ್ಪಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

‘ಸೌರ ಬೇಲಿಗಳ ಬದಲು ದಪ್ಪ ಕಲ್ಲಿನ ತಡೆಗೋಡೆಗಳನ್ನು ನಿರ್ಮಿಸಿದರೆ, ಆನೆಗಳ ಹಾವಳಿ ತಪ್ಪಿಸಬಹುದು’ ಎಂದು ಸಂಸದ ಡಿ.ಕೆ. ಸುರೇಶ್ ಸಲಹೆ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಖಂಡ್ರೆ, ‘ರೈಲ್ವೆ ಬ್ಯಾರಿಕೇಡ್ ಮತ್ತು ಕಲ್ಲಿನ ತಡೆಗೋಡೆಗಳಿಂದಾಗುವ ಅನುಕೂಲ ಮತ್ತು ಅನಾನುಕೂಲದ ಕುರಿತು ವರದಿ ಸಲ್ಲಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಮನಗರ ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್. ರವಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಖಂಡ್ರೆ ಅವರನ್ನು ಸನ್ಮಾನಿಸಿದರು.

‘ಎಲ್ಲಾ ರೀತಿಯ ಬೆಳೆ ಹಾನಿಗೂ ಪರಿಹಾರ’

‘ಬೆಳೆ ಹಾನಿಗೆ ಸಮಾನವಾದ ಪರಿಹಾರ ಸಿಗಬೇಕು. ಕೆಲ ಪ್ರಾಣಿಗಳ ದಾಳಿಯಿಂದಾಗುವ ಬೆಳೆ ಹಾನಿಗೆ ಪರಿಹಾರ ಲಭಿಸುತ್ತಿಲ್ಲ. ಕೆಲ ಬೆಳೆಗಳ ಹಾನಿಗೂ ಪರಿಹಾರ ಸಿಗುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದ್ದು ಎಲ್ಲಾ ಬೆಳೆಗಳು ಹಾಗೂ ಕಾಡುಪ್ರಾಣಿಗಳ ಹಾನಿಗೆ ಪರಿಹಾರ ನೀಡುವ ಸಂಬಂಧ ಪರಿಶೀಲನೆ ನಡೆಸಲಾಗುವುದು’ ಎಂದು ಸಚಿವ ಖಂಡ್ರೆ ಭರವಸೆ ನೀಡಿದರು. ‘ರಾಮನಗರ ಸೇರಿದಂತೆ ಹಲವೆಡೆ ಚಿರತೆಗಳ ಹಾವಳಿ ಹೆಚ್ಚಾಗಿದೆ. ಚಿರತೆಗಳನ್ನು ಹಿಡಿದು ಕಾಡಿಗೆ ಕಳುಹಿಸಲು ಕ್ರಮ ವಹಿಸಬೇಕು. ಮಾನವನ ರಕ್ತದ ರುಚಿ ಕಂಡ ಚಿರತೆ ಮತ್ತು ಹುಲಿಗಳು ಆಗಾಗ ದಾಳಿ ಮಾಡುತ್ತವೆ. ಅವುಗಳನ್ನು ಪುನರ್ವಸತಿ ಕೇಂದ್ರಗಳಲ್ಲಿ ಪೋಷಿಸುವ ಅಗತ್ಯವಿದ್ದು ಈ ಕಾರ್ಯವನ್ನು ಇಲಾಖೆ ನಿರ್ವಹಿಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT