ರಾಮನಗರ: ‘ಸುಮಾರು 170ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿರುವ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ನ್ಯೂನತೆಗಳನ್ನು ಸರಿಪಡಿಸದಿದ್ದರೆ, ಟೋಲ್ ಸಂಗ್ರಹಿಸಲು ಬಿಡುವುದಿಲ್ಲ’ ಎಂದು ಸಂಸದ ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಹೆದ್ದಾರಿ ಪೂರ್ಣಗೊಳಿಸದೆ ಸಂಚಾರಕ್ಕೆ ಮುಕ್ತಗೊಳಿಸಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಕಾಲಮಿತಿಯೊಳಗೆ ನ್ಯೂನತೆ ಸರಿಪಡಿಸದಿದ್ದರೆ ರಾಮನಗರ, ಮಂಡ್ಯ ಸೇರಿದಂತೆ ಎಲ್ಲಿಯೂ ಟೋಲ್ ಸಂಗ್ರಹಕ್ಕೆ ಬಿಡುವುದಿಲ್ಲ’ ಎಂದು ಹೇಳಿದರು.
‘ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಯಲು ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ, ವರದಿ ನೀಡಬೇಕು’ ಎಂದು ತಿಳಿಸಿದರು.
ಪ್ರತಿಯೊಬ್ಬರ ಜೀವ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಹೆದ್ದಾರಿಯಲ್ಲಿ ಅಪಘಾತದ ಸ್ಥಳಗಳನ್ನು ಗುರುತಿಸಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ವೇಗವಾಗಿ ಚಲಿಸುವ ವಾಹನಗಳ ಮೇಲೆ ನಿಗಾ ಇಟ್ಟು ದಂಡ ವಿಧಿಸಬೇಕು’ ಎಂದರು.
ಕೆರೆ ದುರಸ್ತಿಗೊಳಿಸಿ: ‘ಹೆದ್ದಾರಿ ನಿರ್ಮಾಣ ಮಾಡುವಾಗ ಹಲವು ಕೆರೆಗಳು ಹಾಳಾಗಿದ್ದು, ಅವುಗಳನ್ನು ಪ್ರಾಧಿಕಾರದಿಂದ ದುರಸ್ತಿ ಮಾಡಬೇಕು. ಹೆದ್ದಾರಿ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಸಮರ್ಪಕವಾಗಿ ನಿರ್ಮಿಸಬೇಕು’ ಎಂದು ಹೇಳಿದರು.
‘ರಾಮನಗರ ಸುತ್ತಮುತ್ತಲಿನ ವಡೇರಹಳ್ಳಿ, ಬೂದಯ್ಯನದೊಡ್ಡಿ, ಅಚಲು, ಪಾದರಹಳ್ಳಿ, ಬಿದರಹಳ್ಳಿ ಕಟ್ಟೆ, ಗೊಲ್ಲರದೊಡ್ಡಿ ಸೇರಿದಂತೆ ಪ್ರಮುಖ 25 ಅಪಘಾತ ಸ್ಥಳಗಳನ್ನು ಗುರುತಿಸಿದ್ದು ಈ ಸ್ಥಳಗಳಲ್ಲಿ ಅಪಘಾತ ಸಂಭವಿಸದಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಕ್ರಮ ವಹಿಸಬೇಕು. ರಾಮನಗರದಲ್ಲಿ ಹದಗೆಟ್ಟಿರುವ ರಸ್ತೆ ಮತ್ತು ಚರಂಡಿಗಳನ್ನು ಸಹ ದುರಸ್ತಿ ಮಾಡಬೇಕು’ ಎಂದು ತಿಳಿಸಿದರು.
ಜಂಕ್ಷನ್ ಸರಿಪಡಿಸಿ: ‘ಬಿಡದಿ, ಹಾರೋಹಳ್ಳಿ, ರಾಮನಗರ, ಕನಕಪುರ ಹಾಗೂ ಚನ್ನಪಟ್ಟಣಗಳ ಮುಖ್ಯರಸ್ತೆಯಲ್ಲಿ ಜಂಕ್ಷನ್‌ಗಳು ಇದ್ದರೂ, ಸಮರ್ಪಕವಾಗಿರುವುದಿಲ್ಲ. ಇವುಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಹೆದ್ದಾರಿಯಲ್ಲಿ ಬಸ್ ಸೇರಿದಂತೆ ಭಾರಿ ವಾಹನಗಳು ಬಲಭಾಗದಲ್ಲಿ ಸಂಚರಿಸುತ್ತಿದ್ದು, ಪಥ ನಿಯಮ ಪಾಲನೆ ಮಾಡುವಂತೆ ಸೂಚನೆ ನೀಡಬೇಕು’ ಎಂದರು.
‘ಜಿಲ್ಲೆಯಲ್ಲಿ ಸಂಭವಿಸುವ ಅಪಘಾತಗಳಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು. ಘಟನೆ ಸಂಭವಿಸಿದ ಒಂದು ಗಂಟೆ ಗೋಲ್ಡನ್ ಅವರ್ ಆಗಿದ್ದು, ಆಗ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಪ್ರಾಣ ಉಳಿಯುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ, ಜಿಲ್ಲಾಸ್ಪತ್ರೆಯಲ್ಲಿ ಟ್ರಾಮಾ ಕೇಂದ್ರ ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಉಪ ವಿಭಾಗಾಧಿಕಾರಿ ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
‘ಅಧಿವೇಶನದಲ್ಲೂ ಪ್ರಸ್ತಾಪಿಸುವೆ’
‘ಎಕ್ಸ್‌ಪ್ರೆಸ್ ವೇ ಲೋಪದೋಷಗಳ ಕುರಿತು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೂ ತಿಳಿಸಿದ್ದೆ. ಪರಿಶೀಲನೆಗಾಗಿ ಒಂದು ತಂಡ ಕಳಿಸುವುದಾಗಿ ಹೇಳಿದ್ದರು. ಆದರೆ ಯಾವುದೇ ತಂಡ ಬಂದಿಲ್ಲ. ಜುಲೈ 20ರಿಂದ ಲೋಕಸಭೆಯ ಅಧಿವೇಶನ ಪ್ರಾರಂಭವಾಗಲಿದ್ದು ಆಗ ಎಕ್ಸ್‌ಪ್ರೆಸ್ ವೇ ವಿಷಯವನ್ನು ಪ್ರಸ್ತಾಪ ಮಾಡುವೆ’ ಎಂದು ಡಿ.ಕೆ. ಸುರೇಶ್ ಹೇಳಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪೊಲೀಸರು ಮಾಡುವ ಕೆಲಸ ಬಿಟ್ಟು ಬೇರೆಯದ್ದನ್ನು ಮಾಡುತ್ತಿದ್ದಾರೆ. ಗುಣಮಟ್ಟದ ರಸ್ತೆಯನ್ನು ಮೊದಲು ನಿರ್ಮಿಸಬೇಕು. ಅದು ಬಿಟ್ಟು ದಂಡ ಹಾಕುತ್ತಿದ್ದಾರೆ. ಹೆದ್ದಾರಿ ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸುತ್ತಿದ್ದಾರೆ’ಎಂದರು. ‘ದೇಶದಲ್ಲಿ ಎಷ್ಟೋ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಿವೆ. ಎಲ್ಲೂ ಇಷ್ಟು ಅಪಘಾತಗಳು ಸಂಭವಿಸಿಲ್ಲ. ಇದನ್ನು ಯಾರೂ ಸಮರ್ಥನೆ ಮಾಡಬಾರದು. ಸಮರ್ಥಿಸಿಕೊಂಡವರು ಬಹುಶಃ ಜನರ ಸಾವನ್ನು ಬಯಸುತ್ತಾರೆ ಅನ್ನಿಸುತ್ತೆ’ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.
- ‘ಬಿಜೆಪಿಗೆ ಬೇರೆ ಕೆಲಸವಿಲ್ಲ’ ‘
ರಾಜಕೀಯ ಮಾಡಲು ಬಿಜೆಪಿಯವರಿಗೆ ಬೇರೆ ವಿಷಯಗಳಿಲ್ಲ. ಅದಕ್ಕಾಗಿಯೇ ಜೈನ ಮುನಿ ಹಾಗೂ ವೇಣುಗೋಪಾಲ್ ಕೊಲೆ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎನ್ನುತ್ತಿದ್ದಾರೆ. ಪ್ರಕರಣಗಳ ವಿಷಯದಲ್ಲಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಬಿಜೆಪಿ ಅವಧಿಯ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಈ ರೀತಿಯ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲರಿಗೂ ರಕ್ಷಣೆ ಇದೆ. ಕಾನೂನು ಸುವ್ಯವಸ್ಥೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ’ ಎಂದು ಬಿಜೆಪಿಗೆ ತಿರುಗೇಟು ನೀಡಿದರು. ‘ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಅಥವಾ ಗ್ರಾಮಾಂತರ ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದರ ಕುರಿತು ಇನ್ನೂ ತೀರ್ಮಾನಿಸಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.