ಶುಕ್ರವಾರ, ಆಗಸ್ಟ್ 12, 2022
27 °C
ಗಂಡ ಹೆಂಡತಿ ನಡುವಿನ ಜಗಳದಿಂದಾಗಿ ಡ್ರಗ್‌ ಮಾಫಿಯಾ ಬಯಲು: ಇನ್ನಷ್ಟು ಚುರುಕಾದ ಪೊಲೀಸ್‌ ಪಡೆ

ರಾಮನಗರ: ಗಾಂಜಾ ಮಾರಾಟಗಾರರ ಮೇಲೆ ಕಣ್ಣು!

ಆರ್‌. ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ನೆರೆಯ ಬೆಂಗಳೂರು ನಗರದಲ್ಲಿ ಬೃಹತ್ತಾದ ಮಾದಕ ವಸ್ತು ಮಾರಾಟ ಜಾಲ ಪತ್ತೆಯಾದ ಬೆನ್ನಲ್ಲೇ ಜಿಲ್ಲೆಯಲ್ಲಿ ಪೊಲೀಸರು ಚುರುಕಾಗಿದ್ದು, ಗಾಂಜಾ ಪೂರೈಕೆ ಜಾಲದ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ.

ರಾಜಧಾನಿಗೆ ಹತ್ತಿರದಲ್ಲೇ ಇರುವ ರಾಮನಗರ ಜಿಲ್ಲೆಯಲ್ಲೂ ಡ್ರಗ್ ಮಾರಾಟ ದಂಧೆ ನಡೆಯುತ್ತಲೇ ಇದೆ. ಅದರಲ್ಲೂ ಗಾಂಜಾ ಮಾರಾಟ ನಿರಂತರವಾಗಿದೆ. ಅದನ್ನು ಬಗ್ಗುಬಡಿಯಲು ಪೊಲೀಸರು ನಾನಾ ತಂತ್ರ ಅನುಸರಿಸುತ್ತಿದ್ದಾರೆ. ಬೆಂಗಳೂರು ಪ್ರಕರಣ ಹಿನ್ನೆಲೆಯಲ್ಲಿ ಹಳೆಯ ಮಾದಕ ವಸ್ತು ಮಾರಾಟಗಾರರ ಚಟುವಟಿಕೆಗಳ ಮೇಲೆ ನಿಗಾ ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್‌ ಶೆಟ್ಟಿ ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಜನನಿಬಿಡ ಪ್ರದೇಶಗಳಲ್ಲೇ ಮಾರಾಟ: ರೈಲು ನಿಲ್ದಾಣವೂ ಸೇರಿದಂತೆ ಜನನಿಬಿಡ ಪ್ರದೇಶಗಳು ಹಾಗೂ ಕೆಲವು ಬಡಾವಣೆಗಳಲ್ಲಿ ಚಿಲ್ಲರೆ ರೂಪದಲ್ಲಿ ಗಾಂಜಾ ಮಾರಾಟವಾಗುತ್ತಿದೆ ಎಂಬ ಆರೋಪಗಳು ಆಗಿನಿಂದಲೂ ಇವೆ. 50 ಗ್ರಾಂನ ಸಣ್ಣ ಪ್ಯಾಕೆಟ್‌ಗಳಲ್ಲಿ ಚಿಲ್ಲರೆ ಲೆಕ್ಕದಲ್ಲಿ ಕೆಲವು ಅಂಗಡಿಗಳಲ್ಲಿಯೂ ಮಾರಾಟ ನಡೆದಿತ್ತು. ಕಳೆದೊಂದು ವರ್ಷದಿಂದ ಇದಕ್ಕೆ ಕಡಿವಾಣ ಬಿದ್ದಿತ್ತು. ಆದರೆ ಲಾಕ್‌ಡೌನ್‌ ತೆರವಾಗುತ್ತಿದ್ದಂತೆ ಮತ್ತೆ ದಂಧೆ ಕೂಡ ಚುರುಕಾಗ ತೊಡಗಿದೆ. ಮಂಗಳವಾರ ಚನ್ನಪಟ್ಟಣದ ಯಾರಬ್‌ ನಗರದ ಬಿಸ್ಮಿಲ್ಲಾ ಮಸೀದಿ ಮುಂಭಾಗ ಬಯಲಿನಲ್ಲಿ ಸಾರ್ವಜನಿಕರಿಗೆ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ ಇಮ್ರಾನ್‌ ಹಾಗೂ ಕೃಷ್ಣಪ್ಪ ಎಂಬು
ವರನ್ನು ಪೊಲೀಸರು ಬಂಧಿಸಿದ್ದು, 30ಸಣ್ಣ ಪ್ಯಾಕೆಟ್‌ಗಳಲ್ಲಿದ್ದ ಗಾಂಜಾ ವಶಕ್ಕೆ ಪಡೆದಿದ್ದಾರೆ.

ವ್ಯವಸ್ಥಿತ ಜಾಲ: ಕಳೆದ ವರ್ಷ ರಾಮನಗರದ ಐಜೂರು ಠಾಣೆ ಪೊಲೀಸರು ಗಾಂಜಾ ಮಾರಾಟದ ದೊಡ್ಡ ಜಾಲವೊಂದನ್ನು ಬೇಧಿಸಿದ್ದು, ಒಮ್ಮೆಲೆ ಬರೋಬ್ಬರಿ ₹4.4 ಲಕ್ಷ ಮೌಲ್ಯದ 44 ಕೆ.ಜಿ.ಯಷ್ಟು ಉತ್ಪನ್ನವನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದು ಜಿಲ್ಲೆಯಲ್ಲಿ ಪ್ರಕರಣವೊಂದರಲ್ಲಿ ವಶಪಡಿಸಿಕೊಳ್ಳಲಾದ ದೊಡ್ಡ ಮೊತ್ತದ ಮಾದಕ ವಸ್ತುವಾಗಿತ್ತು. ಜನನಿಬಿಡ ವಸತಿ ಪ್ರದೇಶವೊಂದರ ಮನೆಯಲ್ಲಿಯೇ 20 ಕೆ.ಜಿ.ಗೂ ಹೆಚ್ಚು ಗಾಂಜಾ ಸಂಗ್ರಹಿಸಿದ್ದು. ಗಂಡ ಹೆಂಡತಿ ನಡುವಿನ ಜಗಳದಿಂದಾಗಿ ಪ್ರಕರಣ ಬೆಳಕಿಗೆ ಬಂದಿತ್ತು. ಜಿಲ್ಲೆಯಲ್ಲಿ ಗಾಂಜಾ ಮಾರಾಟದ ಬೇರೆ ಬೇರೆ ಜಾಲಗಳು ಸಕ್ರಿಯವಾಗಿವೆ. ಆಂಧ್ರಪ್ರದೇಶ, ತಮಿಳುನಾಡು ಮೂಲದಿಂದಲೂ ಇಲ್ಲಿಗೆ ಗಾಂಜಾ ಬರುತ್ತಿದೆ. ಬೆಂಗಳೂರು ಮಾರ್ಗವಾಗಿ ಒಂದು ಜಾಲ ಕಾರ್ಯ ನಿರ್ವಹಿಸಿದರೆ, ಕೋಡಿಹಳ್ಳಿ ಗಡಿಭಾಗದಲ್ಲಿ ಮತ್ತೊಂದಿಷ್ಟು ಆರೋಪಿಗಳು ಸಕ್ರಿಯರಾಗಿದ್ದಾರೆ.

'ಗಾಂಜಾ ಮಾರಾಟ ಮೊದಲಾದ ಚಟುವಟಿಕೆಗಳ ಮೇಲೆ ಮೊದಲಿನಿಂದಲೂ ನಿಗಾ ವಹಿಸಿದ್ದೇವೆ. ಬೆಂಗಳೂರು ಡ್ರಗ್‌ ಜಾಲ ಬಯಲಾದ ಮೇಲೆ ಈ ಬಗ್ಗೆ ಇನ್ನಷ್ಟು ಚುರುಕಾಗುವಂತೆ ನಮ್ಮೆಲ್ಲ ಸಿಬ್ಬಂದಿಗೆ ಸೂಚಿಸಿದ್ದೇನೆ. ಅದರಲ್ಲೂ ಹಲವು ವರ್ಷಗಳಿಂದ ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಪರಾಧಿಗಳ ಮೇಲೆ ಕಣ್ಣಿಟ್ಟಿದ್ದೇವೆ. ಮಾರಾಟ ಜಾಲಗಳನ್ನು ಪತ್ತೆ ಮಾಡಿ ಅಂತಹವರನ್ನು ಬಂಧಿಸುವ ಕಾರ್ಯ ನಡೆದಿದೆ’ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನೂಪ್‌ ಶೆಟ್ಟಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು