ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ತರಿಗೆ ಸೌಲಭ್ಯ ಕಲ್ಪಿಸಿ

ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ
Last Updated 21 ಜನವರಿ 2020, 16:07 IST
ಅಕ್ಷರ ಗಾತ್ರ

ಮಾಗಡಿ: ಶರಣರ ವಚನ ಕ್ರಾಂತಿಯಲ್ಲಿ ತಮ್ಮದೇ ಛಾಪು ಮೂಡಿಸಿದವರು ನಿಜಶರಣ ಅಂಬಿಗರ ಚೌಡಯ್ಯ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ನಾಡಹಬ್ಬಗಳ ಆಚರಣಾ ಸಮಿತಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಂಗಳವಾರ ನಡೆದ ಅಂಬಿಗರ ಚೌಡಯ್ಯ 900ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುನ್ನುಡಿ ಬರೆದವರು 12ನೇ ಶತಮಾನದ ಬಸವಾದಿ ಶರಣರು. ಪ್ರಜೆಗಳಿಗೆ ಪರಮಾಧಿಕಾರ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಮಾನತೆಯೆಂಬ ಕನ್ನಡಿ ಹಿಡಿದರು. ಅಂದು ವಚನಗಳ ಮೂಲಕ ಶರಣರು ಸಾರಿದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಸಂಸಾರ ಸಾಗರ ದಾಟಿ ಮೋಕ್ಷ ಸಾಗರದಲ್ಲಿ ದೋಣಿ ನಡೆಸಿದ ಅಂಬಿಗರ ಚೌಡಯ್ಯ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಸರ್ವರೂ ಗೌರವಿಸಬೇಕು. ಅವರ ತತ್ವಾದರ್ಶ ಅಧ್ಯಯನ ಮಾಡಬೇಕು. ಮಕ್ಕಳಿಗೆ ವಚನ ಸಾರ ತಿಳಿಸಬೇಕು ಎಂದರು.

ಬೆಸ್ತ ಸಮುದಾಯ ಸಂಘಟಿತವಾಗಬೇಕು. ಸವಲತ್ತು ನೀಡಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿದೆ. ಏಕತೆ ಸಾಧಿಸಲು ಎಲ್ಲರೂ ಒಂದಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಮುಂದಾಗಬೇಕು ಎಂದು ಹೇಳಿದರು.

ರಾಜ್ಯ ಬೆಸ್ತರ ಸಂಘದ ಉಪಾಧ್ಯಕ್ಷ ಪಿ.ವಿ.ಸೀತಾರಾಮ್ ಮಾತನಾಡಿ, ಅಂಬಿಗರ ಚೌಡಯ್ಯ ಅವರ ವಚನಗಳು ಅಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿಯಾಗಿದ್ದವು. ಬೆಸ್ತ ಸಮುದಾಯಕ್ಕೆ ಅನುಕೂಲ ಮಾಡಿಕೊಡಲು ಶಾಸಕರು ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರಗತಿಪರ ಹೋರಾಟಗಾರ ಸಿ.ಜಯರಾಮು ಮಾತನಾಡಿ, ನುಡಿದಂತೆ ನಡೆದ ಅಂಬಿಗರ ಚೌಡಯ್ಯ ಅವರ ವಚನಗಳನ್ನು ಮಕ್ಕಳಿಗೆ ಬೋಧಿಸಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಮಹೇಶ್, ನಿವೃತ್ತ ಮುಖ್ಯಶಿಕ್ಷಕ ವಿ.ನರಸಿಂಹಯ್ಯ, ತಾಲ್ಲೂಕು ಅಗ್ನಿಶಾಮಕ ದಳದ ಅಧಿಕಾರಿ ರೇವಣ್ಣ, ಶಿರಸ್ತೇದಾರ್ ಜಗದೀಶ್ ಮಾತನಾಡಿದರು.

ಟ್ರಸ್ಟ್‌ನ ಗೌರವಾಧ್ಯಕ್ಷ ಕೆ.ಸಿ.ರೇವಣ್ಣ, ಖಜಾಂಚಿ ಪಿ.ವಿ.ಶಾಂತರಾಜು, ಉಪಾಧ್ಯಕ್ಷ ಮಾರಣ್ಣ, ಕಾರ್ಯದರ್ಶಿ ಟಿ.ಎಸ್.ಗಂಗಯ್ಯ, ತಿರುಮಲೆ ಜಯರಾಮ್, ಯುವ ಮುಖಂಡ ಚಂದ್ರಕಾಂತ್, ಕೆಡಿಪಿ ಸದಸ್ಯ ಗುಡೇಮಾರನಹಳ್ಳಿ ನಾಗರಾಜು, ಪಿ.ಸಿ.ಪಾಳ್ಯದ ಶಿವಕುಮಾರ್, ಶಿವಣ್ಣ, ಕುದೂರು ಗ್ರಾಮ ಪಂಚಾಯಿತಿ ಸದಸ್ಯರಾದ ಹೊನ್ನರಾಜು, ಸಿದ್ದರಾಜು, ಕುದೂರಿನ ಬೆಸ್ತ ಸಮಾಜದ ಮುಖಂಡರಾದ ಹೇಮಂತ್, ಪರಮೇಶ್, ಕೆ.ಆರ್.ಸಿದ್ದರಾಜು. ಸಿದ್ದಭೈರಪ್ಪ, ಜ್ಯೋತಿಪಾಳ್ಯ ರಾಮಣ್ಣ, ಹೊಸಪೇಟೆ ವೆಂಕಟೇಶ್, ಬೋರಯ್ಯ, ಕಲ್ಯದ ವಿವಿಧೋದ್ದೇಶ ಮೀನುಗಾರರ ಸಂಘದ ಅಧ್ಯಕ್ಷ ಸಿದ್ದರಾಜು, ಗಂಗಭೈರಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT