ಬುಧವಾರ, ಸೆಪ್ಟೆಂಬರ್ 22, 2021
23 °C
ರೈತ ಮುಖಂಡ ಲಕ್ಷ್ಮಣಸ್ವಾಮಿ ಅವರಿಗೆ ಶ್ರದ್ದಾಂಜಲಿ, ವಿಚಾರ ಸಂಕಿರಣ ಕಾರ್ಯಕ್ರಮ

ತಿದ್ದುಪಡಿ ಕಾಯ್ದೆಗಳ ವಿರುದ್ಧ ಹೋರಾಟ: ಕೋಡಿಹಳ್ಳಿ ಚಂದ್ರಶೇಖರ್‍

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಲಾಕ್‌ಡೌನ್‌ ನೆಪದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಜನವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಇದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುವ ಅಗತ್ಯ ಇದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‍ ಹೇಳಿದರು.

ನಗರದ ಎಪಿಎಂಸಿಯಲ್ಲಿನ ಸಭಾಂಗಣದಲ್ಲಿ ಮಂಗಳವಾರ ರೈತ ಮುಖಂಡ ಕೆ.ಎಸ್‌. ಲಕ್ಷ್ಮಣಸ್ವಾಮಿ ಅವರಿಗೆ ಶ್ರದ್ದಾಂಜಲಿ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಸರ್ಕಾರ ಭೂ ಸ್ವಾಧೀನ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ವಿದ್ತುಚ್ಛಕ್ತಿ ಕಾಯ್ದೆ, ಕೇಂದ್ರದಲ್ಲಿ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಇಷ್ಟು ದೊಡ್ಡ ವೈರಾಣು ಹಾವಳಿ ದೇಶದೆಲ್ಲೆಡೆ ಇರುವಾಗ ಇಂತಹ ಘನಂದಾರಿ ಕೆಲಸ ಏಕೆ ಬೇಕಿತ್ತು? ಲಾಕ್‌ಡೌನ್‌ ನೆಪದಲ್ಲಿ ಸುಗ್ರಿವಾಜ್ಞೆ ತಂದಿದ್ದು ಎಷ್ಟರ ಮಟ್ಟಿಗೆ ಸರಿ? ದೇಶವೇ ಆರ್ಥಿಕವಾಗಿ ದಿವಾಳಿ ಆಗಿರುವಾಗ ಇದರ ಅಗತ್ಯ ಏನಿತ್ತು?’ ಎಂದು ಪ್ರಶ್ನಿಸಿದರು.

ರೈತ ಸಮುದಾಯದ ಬದುಕು ಇಂದು ಬೀದಿಗೆ ಬೀಳುವ ಸನ್ನಿವೇಶ ಎದುರಾಗಿದೆ. ಭೂಸ್ವಾಧೀನ ಮತ್ತು ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳು ಬಹುರಾಷ್ಟ್ರೀಯ ಕಂಪನಿಗಳಿಗೆ ದೇಶವನ್ನು ಮಾರುವ ಹುನ್ನಾರವಾಗಿದೆ. ಎಪಿಎಂಸಿ ಕಾಯ್ದೆಯೂ ರೈತ ವಿರೋಧಿ ಆಗಿದೆ. ಸದಾ ಮಣ್ಣಿನ ಮಕ್ಕಳು ಎಂದೆನಿಸಿಕೊಳ್ಳುವ ದೇವೇಗೌಡರ ಕುಟುಂಬದವರು ಇದರ ವಿರುದ್ಧ ಏಕೆ ಧ್ವನಿ ಎತ್ತುತ್ತಿಲ್ಲ’ ಎಂದು ಕೇಳಿದರು.

ಲಕ್ಷ್ಮಣಸ್ವಾಮಿ ಅವರೊಂದಿನ ತಮ್ಮ ಒಡನಾಟವನ್ನು ನೆನೆದ ಚಂದ್ರಶೇಖರ್‍ "ಅವರೊಬ್ಬ ಕ್ರಿಯಾಶೀಲ ಹೋರಾಟಗಾರ. ಯಾವುದನ್ನೂ ಕೆಚ್ಚೆದೆಯಿಂದ ವಿರೋಧಿಸುವ, ಸಂಘಟನಾತ್ಮಕವಾಗಿ ಹೋರಾಟ ರೂಪಿಸುವ ಶಕ್ತಿ ಹೊಂದಿದ್ದರು. ಅವರ ನಿಧನದಿಂದ ರೈತ ಸಂಘ ಬಡವಾಗಿದೆ’ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಅನಸೂಯಮ್ಮ ಮಾತನಾಡಿ "ರೈತರ ಹಕ್ಕು ಕಸಿದುಕೊಳ್ಳುವ ಅಧಿಕಾರ ಯಾವ ಸರ್ಕಾರಗಳಿಗೂ ಇಲ್ಲ. ಈಗ ತಂದಿರುವ ತಿದ್ದುಪಡಿ ಕಾನೂನುಗಳ ವಿರುದ್ಧ ನಾವೆಲ್ಲ ಬೀದಿಗಿಳಿದು ಹೋರಾಟ ನಡೆಸಬೇಕಿದೆ. ಇನ್ನೊಂದು ಬಲಿದಾನಕ್ಕೆ ಸಿದ್ಧರಾಗಬೇಕಿದೆ. ನಗರಕ್ಕೆ ವಲಸೆ ಹೋಗಿದ್ದ ಅಸಂಖ್ಯ ಕಾರ್ಮಿಕರನ್ನು ಲಾಕ್‌ಡೌನ್ ಮತ್ತೆ ಹಳ್ಳಿಗಳಿಗೆ ಕಳುಹಿಸಿದೆ. ಇಂತಹವರು ತುಂಡು ಜಮೀನಿನಲ್ಲೇ ಕೃಷಿ ಕೈಗೊಂಡಿದ್ದು, ಅದು ಮುಂದುವರಿಯಬೇಕಿದೆ’ ಎಂದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ಪ ಮಾತನಾಡಿ "ಲಕ್ಷ್ಮಣಸ್ವಾಮಿ ಅವರ ಹೋರಾಟದ ಹಾದಿ ಮುಂದುವರಿಯಬೇಕು. ರೈತ ಸಂಘ ಇನ್ನಷ್ಟು ಬಲಿಷ್ಟ ಆಗಬೇಕು ಎನ್ನುವ ಅವರ ಆಶಯ ಈಡೇರಬೇಕು’ ಎಂದರು.

ಲಕ್ಷ್ಮಣಸ್ವಾಮಿ ಅವರ ಪುತ್ರ ಅನಿಲ್‌ ಮಾತನಾಡಿ "ತಂದೆ ಹೋರಾಟಗಳಿಗಾಗಿಯೇ ತಮ್ಮ ಬದುಕು ಮುಡಿಪಿಟ್ಟಿದ್ದರು. ಅಂತಹವರ ಸಂಖ್ಯೆ ಜಿಲ್ಲೆಯಲ್ಲಿ ಇನ್ನಷ್ಟು ಹೆಚ್ಚಬೇಕು. ನಮ್ಮಂತ ಯುವಜನರು ಹಿರಿಯರ ಮಾರ್ಗದರ್ಶನದಲ್ಲಿ ಸಂಘಟಿತವಾಗಿ ಅನ್ಯಾಯಗಳ ವಿರುದ್ಧ ಹೋರಾಟ ಮುಂದುವರಿಸಬೇಕು’ ಎಂದು ಆಶಿಸಿದರು.

ರೈತ ಮುಖಂಡ ಆನಂದ ಪಟೇಲ್‌, ರಾಮನಗರ ಎಪಿಎಂಸಿ ಅಧ್ಯಕ್ಷ ರಮೇಶ್‌, ಕಾರ್ಮಿಕ ಮುಖಂಡ ಪ್ರಸನ್ನ ಮತ್ತಿತರರು ಮಾತನಾಡಿದರು. ಲಕ್ಷ್ಮಣಸ್ವಾಮಿ ಅವರ ಪತ್ನಿ ಗೌರಮ್ಮ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್‌. ಬೈರೇಗೌಡ, ಕಾರ್ಯಾಧ್ಯಕ್ಷ ಚಂದ್ರಶೇಖರ್‍, ಕಾರ್ಯದರ್ಶಿ ಶ್ರೀನಿವಾಸ್‌, ಮಹಿಳಾ ಘಟಕದ ಅಧ್ಯಕ್ಷೆ ನಾಗಮ್ಮ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಕೃಷ್ಣಪ್ಪ, ಗೋವಿಂದರಾಜು, ಅನಂತರಾಮು, ರಮೇಶ್‌ ಇದ್ದರು.

*****

ಭೂಮಿ ನಮ್ಮೆಲ್ಲರ ಅನ್ನದ ಬಟ್ಟಲು. ಸರ್ಕಾರಗಳು ಇದನ್ನು ವ್ಯವಹಾರಿಕ ವಸ್ತು ಎಂದು ಭಾವಿಸದೇ ತಾಯಿಯಂತೆ ಕಾಣಬೇಕು
ಕೋಡಿಹಳ್ಳಿ ಚಂದ್ರಶೇಖರ್‌
ಅಧ್ಯಕ್ಷ, ರಾಜ್ಯ ರೈತ ಸಂಘ

ಲಕ್ಷ್ಮಣಸ್ವಾಮಿ ಜಿಲ್ಲೆಯಲ್ಲಿನ ಅಸಂಖ್ಯ ರೈತಪರ ಹೋರಾಟಗಳಿಗೆ ಸಾಕ್ಷಿಯಾದವರು. ಅವರು ಯುವಪೀಳಿಗೆಗೆ ಮಾದರಿ
ಅನಸೂಯಮ್ಮ
ರಾಜ್ಯ ಉಪಾಧ್ಯಕ್ಷೆ, ರೈತ ಸಂಘ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.