ಮಂಗಳವಾರ, ಡಿಸೆಂಬರ್ 6, 2022
21 °C
ಮಾತಿನ ಚಕಮಕಿ, ಪ್ರತಿಭಟನೆ

ರೈತ ಸಂಘದವರಿಗೆ ಕೈಗಾರಿಕೆ ಅಸೋಸಿಯೇಷನ್‌ನಿಂದ ಬೆದರಿಕೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ಕೈಗಾರಿಕೆ ಅಸೋಸಿಯೇಷನ್‌ನವರ ನಡುವೆ ಮಾತಿನ ಚಕಮಕಿ ನಡೆದು ಸಂಘದ ಕಚೇರಿ ಮುಂಭಾಗ ರೈತರು ದಿಢೀರ್‌ ಪ್ರತಿಭಟನೆ ನಡೆಸಿದ್ದು ಬುಧವಾರ ನಡೆಯಿತು.

‘ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆ ತೆರೆದಿರುವವರು ಪರಿಸರದ ಕಾಳಜಿ ವಹಿಸುತ್ತಿಲ್ಲ, ಕೆಐಡಿಬಿ ನಿಯಮಗಳನ್ನು ಪಾಲಿಸುತ್ತಿಲ್ಲ. ತ್ಯಾಜ್ಯವನ್ನು ರೈತರ ಜಮೀನು ಮತ್ತು ಕೆರೆಗಳಿಗೆ ಬಿಡುತ್ತಿದ್ದು ಅದನ್ನು ತಡೆಗಟ್ಟಬೇಕು’ ಎಂದು ರೈತ ಸಂಘದವರು ಮನವಿ ಸಲ್ಲಿಸಿದರು. ಇದಕ್ಕೆ ಯಾವುದೇ ಉತ್ತರ ಬಾರದ ಕಾರಣ ರೈತ ಸಂಘದವರು ಬುಧವಾರ ಕೈಗಾರಿಕಾ ಸಂಘದ ಅಧ್ಯಕ್ಷರನ್ನು ಭೇಟಿ ಮಾಡಲು ಹೋದಾಗ, ಅವಕಾಶಕ್ಕೆ ನಿರಾಕರಣೆ ಮಾಡಿದ್ದು ಸಂಘರ್ಷಕ್ಕೆ ಕಾರಣವಾಯಿತು.

ರೈತ ಸಂಘದ ಪದಾಧಿಕಾರಿಗಳು ‘ಇದುವರೆಗೂ ನಾವು ಮಾಡಿದ ಮನವಿಗೆ ವರ್ಷ ಕಳೆದರೂ ನಿಮ್ಮಿಂದ ಉತ್ತರ ಬಂದಿಲ್ಲ, ನಿಮ್ಮ ಸಂಘದ ಅಧ್ಯಕ್ಷರೊಂದಿಗೆ ಮಾತನಾಡಲು ಬಂದಿದ್ದೇವೆ’ ಎಂದು ಹೇಳಿದಾಗ, ‘ಇಲ್ಲಿಗೆ ನೀವು ಬರುವ ಆಗಿಲ್ಲ, ಈ ರೀತಿ ಮಾಡಿದರೆ ನಾವು ನಮ್ಮ ಕೆಲಸವನ್ನು ಮಾಡಬೇಕಾಗುತ್ತದೆ. ನಿಮ್ಮನ್ನು ಇಲ್ಲಿಂದ ಕಳಿಸುವುದು ನಮಗೆ ಗೊತ್ತು’ ಎಂದು ಬೆದರಿಕೆ ಹಾಕಿದ್ದು ಪದಾಧಿಕಾರಿಗಳನ್ನು ಕೆರಳಿಸಿತು.

‘ನಾವು ಸೌಹಾರ್ದಯುತವಾಗಿ ಅಧ್ಯಕ್ಷರನ್ನು ಭೇಟಿ ಮಾಡಿ ಅವರೊಂದಿಗೆ ಮಾತನಾಡಲು ಬಂದಿದ್ದೇವೆ. ನೀವು ಬೆದರಿಕೆ ಹಾಕುವುದಾದರೆ ನಾವು ಇಲ್ಲಿಂದ ಹೋಗುವುದಿಲ್ಲ. ನಮ್ಮ ಬೇಡಿಕೆಗೆ ಈಡೇರಿಕೆಗಾಗಿ ನಾವು ಇಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಪ್ರತಿಭಟನೆಗೆ ಮುಂದಾದರು.

ಕೈಗಾರಿಕೆ ಸಂಘದವರು ಹಾರೋಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದಾಗ, ಸಬ್‌ ಇನ್‌ಸ್ಪೆಕ್ಟರ್‌ ಮುರಳಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿದರು. ‘ಕೈಗಾರಿಕೆ ಸಂಘದವರಿಗೆ ರೈತರೊಂದಿಗೆ ನೀವು ಈ ರೀತಿಯಾಗಿ ವರ್ತಿಸುವುದು ಸರಿಯಲ್ಲ, ಮುಖಂಡರೊಂದಿಗೆ ನೀವು ಮಾತನಾಡಿ, ಅವರ ಸಮಸ್ಯೆಗಳನ್ನು ಹೇಳಲು ಅವಕಾಶ ಮಾಡಿಕೊಡಿ’ ಎಂದು ತಿಳಿಸಿದರು.

ಅಂತಿಮವಾಗಿ ಕೈಗಾರಿಕೆ ಸಂಘದವರು ರೈತ ಸಂಘದವರೊಂದಿಗೆ ಮಾತುಕತೆ ನಡೆಸಲು ಮುಂದಿನ 15 ದಿನಗಳಲ್ಲಿ ಸಮಯ ನಿಗದಿಮಾಡಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೈಗಾರಿಕೆಗಳ ಉದ್ಯಮಿಗಳ ಸಮಕ್ಷಮ ಸಭೆಯನ್ನು ಆಯೋಜನೆ ಮಾಡಿ, ಮಾತನಾಡಲು ಅವಕಾಶ ಕೊಡುವುದಾಗಿ ಒಪ್ಪಿಗೆ ನೀಡಿದ್ದರಿಂದ ರೈತ ಸಂಘದ ಪದಾಧಿಕಾರಿಗಳು
ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

ರೈತ ಸಂಘದ ಒತ್ತಾಯಗಳು: ಕೈಗಾರಿಕೆಗಳು ತಮ್ಮ ತ್ಯಾಜ್ಯವನ್ನು ಕೆರೆ ಮತ್ತು ರೈತರ ಜಮೀನಿಗೆ ಬಿಡಬಾರದು, ಕೈಗಾರಿಕೆಗಳು ಸುರಕ್ಷಿತ ಕ್ರಮಗಳನ್ನು ಕೈಗಾರಿಕೆಗಳಲ್ಲಿ ಅಳವಡಿಸಬೇಕು ಎಂದು ರೈತ ಸಂಘದವರು ಒತ್ತಾಯಿಸಿದರು.

ಜಮೀನು ಕಳೆದುಕೊಂಡ ರೈತರ ಮಕ್ಕಳಿಗೆ ಕೆಲಸ ಕೊಡಬೇಕು. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಬೇಕು. ಸಿಎಸ್‌ಆರ್‌ ಪಂಡ್‌ನ್ನು ಸ್ಥಳೀಯವಾಗಿ ಖರ್ಚು ಮಾಡಬೇಕು, ಫ್ಯಾಕ್ಟರಿಯಲ್ಲಿ ಇಟಿಎಸ್‌ ಪ್ಲಾಂಟ್‌ನ್ನು ಕಡ್ಡಾಯವಾಗಿ ನಿರ್ಮಿಸಬೇಕು. ಕೆಐಡಿಬಿ ನಿಯಮಗಳನ್ನು ಚಾಚು ತಪ್ಪದೆ ಪಾಲನೆ ಮಾಡಬೇಕು. ಪರಿಸರ ಮಾಲಿನ್ಯದ ನಿಯಮ ಪಾಲನೆ ಮಾಡಬೇಕು.

ಕೈಗಾರಿಕೆ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆಯನ್ನು ತೆರೆಯಬೇಕು. ಇಲ್ಲಿಗೆ ಪದೇ ಪದೇ ಕೈಗಾರಿಕಾ ಸಚಿವರು ಬರುತ್ತಿದ್ದರೂ ಅಭಿವೃದ್ಧಿಯಾಗಲಿ ಸುರಕ್ಷತ ಕ್ರಮವಾಗಲಿ ತೆಗೆದುಕೊಳ್ಳುತ್ತಿಲ್ಲ. ರಸ್ತೆ ಸು‍ರಕ್ಷತಾ ಕ್ರಮ ಕೈಗೊಳ್ಳುತ್ತಿಲ್ಲ. ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮಗಳಲ್ಲಿ ಕ್ಯಾನ್ಸರ್‌ನಂತ ಮಾರಕ ಕಾಯಿಲೆ ಹಾಗೂ ಆರೋಗ್ಯ ಸಮಸ್ಯೆ ತಲೆದೋರುತ್ತಿದೆ. ನೀರಿನ ಕಲುಷಿತ ನೀರು ಮತ್ತು ಹೊಗೆಯಿಂದ ರೈತರ ಬೆಳೆ ನಾಶ, ಜಾನುವಾರುಗಳು ಸಾವನಪ್ಪುತ್ತಿವೆ. ಕೆರೆಗಳ ಜಲಚರಗಳು ಸಾಯುತ್ತಿವೆ. ಪಾರ್ಕ್‌ಗಳ ಅಭಿವೃದ್ಧಿಪಡಿಸಬೇಕು, ಒಳಚರಂಡಿ ವ್ಯವಸ್ಥೆ ಮಾಡಬೇಕು ಎಂಬುದು ರೈತ ಸಂಘದವರ ಒತ್ತಾಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು