ಶುಕ್ರವಾರ, ಆಗಸ್ಟ್ 6, 2021
23 °C
ಬೆಳಗುಂಬ ಗ್ರಾ.ಪಂ. ಸಭೆಯಲ್ಲಿ ವಿಲಕ್ಷಣ ಘಟನೆ

ಗ್ರಾ.ಪಂ ಸದಸ್ಯೆ ಕೈಕಚ್ಚಿದ ಜವಾನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ತಾಲ್ಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಜವಾನ ಮತ್ತವರ ಕುಟುಂಬದವರು ಗ್ರಾ.ಪಂ. ಸದಸ್ಯೆ ಯಶೋದಮ್ಮ ಬೈರಪ್ಪ ಅವರ ಬಲಗೈ ಕಚ್ಚಿ ಗಾಯಗೊಳಿಸಿದ್ದಾರೆ.

ಗ್ರಾ.ಪಂ. ಜವಾನರಾಗಿ ಕಾರ್ಯ ನಿರ್ವಹಿಸುತ್ತಿದ್ದ ನರಸಿಂಹಮೂರ್ತಿ ಎಂಬುವರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತು ಮಾಡುವಂತೆ ಕಳೆದ ಜೂನ್‌ 11ರಂದು ನಡೆದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಈ ಸಂಬಂಧ ನೌಕರನಿಗೂ ನೋಟಿಸ್‌ ನೀಡಲಾಗಿತ್ತು.

‘ಅಮಾನತುಗೊಂಡಿದ್ದ ಜವಾನ ಮತ್ತು ಆತನ ಅಕ್ಕ ಗೌರಮ್ಮ, ತಮ್ಮ ಗೋಪಿ ಇತರರು ಸಭೆಗೆ ನುಗ್ಗಿ ಬಂದರು. ಜಗಳ ತೆಗೆದು ಸಭೆಗೆ ಅಡ್ಡಿಪಡಿಸಿ, ನನ್ನ ಮೇಲೆ ಹಲ್ಲೆ ನಡೆಸಿದರು. ಗೌರಮ್ಮ ಎಂಬಾಕೆ ನನ್ನ ಬಲಕೈಗೆ ಕಚ್ಚಿ ಗಾಯಗೊಳಿಸಿದರು. ಬಿಡಿಸಲು ಬಂದ ನನ್ನ ಪತಿ ಭೈರಪ್ಪ ಅವರ ಮೇಲೂ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಧ್ಯಕ್ಷೆ ಇಂದ್ರಮ್ಮ ಶಿವಗಂಗಯ್ಯ, ಸದಸ್ಯರಾದ ಗೋಮತಿ ಹಾಗೂ ನನ್ನನ್ನು ಕಚೇರಿಯ ಒಳಗೆ ಕೂಡಿಹಾಕಿ ಬೀಗ ಹಾಕಿದರು. ನಂತರ ಪೊಲೀಸರು ಬಂದು ನಮ್ಮನ್ನು ಬಿಡಿಸಿದರು’ ಎಂದು ಯಶೋಧಮ್ಮ ಭೈರಪ್ಪ ಆರೋಪಿಸಿದ್ದಾರೆ.

ಪಿಡಿಒ ಧನಂಜಯ ಮಾತನಾಡಿ, ‘ಸರ್ವಸದಸ್ಯರ ಸಭೆಯಲ್ಲಿ ಅಮಾನತುಗೊಳಿಸುವ ಬಗ್ಗೆ ನಿರ್ಣಯ ಕೈಗೊಂಡಿದ್ದು, ಈ ಸಂಬಂಧ ಪತ್ರವನ್ನು ಅನಮೋದನೆಗಾಗಿ ಜಿ.ಪಂ.ಸಿಇಒ ಅವರಿಗೆ ಕಳಿಸಲಾಗಿತ್ತು’ ಎಂದರು.

ಪ್ರತ್ಯಾರೋಪ: ಜವಾನ ನರಸಿಂಹಮೂರ್ತಿ ಪ್ರತಿಕ್ರಿಯಿಸಿ, ‘ಅಮಾನತು ಮಾಡಿರುವ ವಿಷಯ ನನಗೆ ಗೊತ್ತಿಲ್ಲ. ಈ ಸಂಬಂಧ ನನಗೆ ನೋಟಿಸ್ ಸಹ ನೀಡಿಲ್ಲ. ಇದನ್ನು ಪ್ರಶ್ನಿಸಲು ಸಭೆಗೆ ಹೋಗಿದ್ದ ವೇಳೆ ಸದಸ್ಯೆ ಯಶೋಧಮ್ಮ ಅವರ ಪತಿ ಭೈರಪ್ಪ ನನ್ನ ಮುಖಕ್ಕೆ ಮುಷ್ಟಿಯಿಂದ ಗುದ್ದಿ ಗಾಯ ಗೊಳಿಸಿದರು. ನಮ್ಮ ಅಕ್ಕನ ಮೇಲೂ ಹಲ್ಲೆ ನಡೆಸಿದರು’ ಎಂದು ದೂರಿದರು.

ಮಾಗಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು–ಪ್ರತಿದೂರು ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು