ಶನಿವಾರ, ಸೆಪ್ಟೆಂಬರ್ 25, 2021
22 °C
ಮಾವು, ತರಕಾರಿ ಮಾರುಕಟ್ಟೆ ಸ್ಥಳಾಂತರ

ಮಾರ್ಗಸೂಚಿ ಉಲ್ಲಂಘಿಸಿದರೆ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್ ತಿಳಿಸಿದರು.

ಅವರು ಬುಧವಾರ ಅಧಿಕಾರಿಗಳೊಂದಿಗೆ ವರ್ಚುಯಲ್ ಸಭೆ ನಡೆಸಿ ಸೂಚನೆಗಳನ್ನು ನೀಡಿದರು.

ಮೇ 4ರವರೆಗೆ ರಾಜ್ಯದಾದ್ಯಂತ ರಾತ್ರಿ 9 ರಿಂದ ಬೆಳಗ್ಗೆ 6ರವರೆಗೆ ರಾತ್ರಿ ಕಫ್ಯೂ೯ ಹಾಗೂ ಶನಿವಾರ ಮತ್ತು ಭಾನುವಾರದಂದು ಇಡೀ ದಿನ ಕರ್ಫ್ಯು ವಿಧಿಸಿ ಸರ್ಕಾರ ಆದೇಶಿಸಿದೆ. ಈ ಸಂದರ್ಭದಲ್ಲಿ ಯಾವ್ಯಾವ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದೆಯೋ ಅವುಗಳನ್ನು ಮಾತ್ರ ಷರತ್ತುಬದ್ಧ ಅನುಮತಿಯೊಂದಿಗೆ ನಡೆಸಲು ಅವಕಾಶ ಮಾಡಿಕೊಡಿ ಎಂದು ಸೂಚನೆ ನೀಡಿದರು.

ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಪಾಲನೆ ಬಗ್ಗೆ ತಹಶೀಲ್ದಾರ್ ವಿಶೇಷ ನಿಗಾವಹಿಸಬೇಕು. ಕೈಗಾರಿಕೆಗಳು ಮತ್ತು ಕಾರ್ಖಾನೆಗಳಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಕಡ್ಡಾಯವಾಗಿ ಗುರುತಿನ ಚೀಟಿ ಇಟ್ಟುಕೊಂಡು ತೆರಳಬೇಕು. ಪೊಲೀಸರು ಪರಿಶೀಲಿಸಿ ತೆರಳಲು ಅವಕಾಶ ಮಾಡಿಕೊಡಬೇಕು ಎಂದರು.

ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇದರ ಪರಿಶೀಲನೆಗಾಗಿ ತಂಡಗಳನ್ನು ರಚಿಸಲಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಎಫ್ಐಆರ್ ದಾಖಲಿಸಿ ಎಂದರು.

ಹೆಚ್ಚಿನ ಜನಸಂದಣಿ ಉಂಟಾಗುವ ಮಾವು, ಹಣ್ಣು, ತರಕಾರಿ ಮಾರುಕಟ್ಟೆಗಳಿದ್ದಲ್ಲಿ ಅವುಗಳನ್ನು ಗುರುತಿಸಿ ತೆರೆದ ಆಟದ ಮೈದಾನಕ್ಕೆ ಸ್ಥಳಾಂತರ ಮಾಡಿ. ಗ್ರಾಮೀಣ ಪ್ರದೇಶದಲ್ಲೂ ಈ ಕೆಲಸವಾಗಬೇಕು ಎಂದರು.

ಕೋವಿಡ್ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆ‌ಲೆಯಲ್ಲಿ ತಾಲ್ಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಸಂಪರ್ಕದೊಂದಿಗೆ ಬೆಡ್‌ಗಳನ್ನು ಸಿದ್ಧಪಡಿಸಿಕೊಳ್ಳಿ. ಚನ್ನಪಟ್ಟಣದಲ್ಲಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡುವ ಕೆಲಸವನ್ನು ಆಸ್ಪತ್ರೆಗೆ ಹತ್ತಿರವಿರುವ ವ್ಯವಸ್ಥಿತ ಸ್ಥಳಕ್ಕೆ ಸ್ಥಳಾಂತರ ಮಾಡಿಕೊಂಡು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬೆಡ್ ಸಿದ್ಧಪಡಿಸಿಕೊಳ್ಳಿ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಆರ್.ಸಿ.ಎಚ್ ಅಧಿಕಾರಿ ಡಾ.ಪದ್ಮಾ, ತಾಲ್ಲೂಕುಗಳ ತಹಶೀಲ್ದಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು