ಸೋಮವಾರ, ಮಾರ್ಚ್ 8, 2021
22 °C
ಕನಕಪುರ ವೃತ್ತದ ಬಳಿ ಪಕ್ಷದ ಕಚೇರಿ ನಿರ್ಮಾಣಕ್ಕೆ ಭೂಮಿಪೂಜೆ

‘ವೋಟು ಮೋದಿಗೆ, ಕೆಲಸಕ್ಕೆ ನಾವಾ?’| ಮುಖ್ಯಮಂತ್ರಿ ಹೇಳಿಕೆಗೆ ಬಿಜೆಪಿ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: 'ವೋಟು ಮೋದಿಗೆ, ಕೆಲಸಕ್ಕೆ ನಾವಾ?' ಎನ್ನುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಮುಖಂಡರು ತಿರುಗೇಟು ನೀಡಿದರು.

ಇಲ್ಲಿನ ಕನಕಪುರ ವೃತ್ತದಲ್ಲಿ ಗುರುವಾರ ಬಿಜೆಪಿ ಕಚೇರಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತಮಾಡಿದ ಪಕ್ಷದ ಮುಖಂಡ ಸಿ.ಪಿ. ಯೋಗೇಶ್ವರ್ 'ಮುಖ್ಯಮಂತ್ರಿಗಳ ವರ್ತನೆ ಬಾಲಿಶವಾಗಿದೆ. ಅವರಿಗೆ ಉತ್ತರ ಕರ್ನಾಟಕಕ್ಕೆ ಹೋಗಲು ಮನಸ್ಸಿರಲಿಲ್ಲ. ಜನರ ಪ್ರತಿಭಟನೆ ಎದುರಿಸಲು ಆಗಲಿಲ್ಲ. ಹೀಗಾಗಿ ಇಂತಹ ಹೇಳಿಕೆ ನೀಡಿದ್ದಾರೆ. ಅವರು ರಾಜ್ಯವನ್ನು ಮುನ್ನಡೆಸುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ' ಎಂದು ಟೀಕಿಸಿದರು.

‘ಚನ್ನಪಟ್ಟಣದಲ್ಲಿ ಶಾಸಕರಾದ ಒಂದು ವರ್ಷದ ನಂತರದ ಬಂದು ಜನರ ಸಮಸ್ಯೆ ಕೇಳಿದ್ದಾರೆ. ಮತ್ತೆ ಯಾವಾಗ ಬರುತ್ತಾರೋ ಗೊತ್ತಿಲ್ಲ. ಅವರಿಗೆ ಅಧಿಕಾರ ಕಳೆದುಕೊಳ್ಳುವ ಭಯ ಇದೆ’ ಎಂದರು.

ಪಕ್ಷದ ಯುವ ಮುಖಂಡ ಬಿ.ವೈ. ವಿಜಯೇಂದ್ರ ಮಾತನಾಡಿ 'ಮುಖ್ಯಮಂತ್ರಿಗಳ ಹೇಳಿಕೆ ದುರಂಹಕಾರದ್ದಾಗಿದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋಲು, ಮಗನ ಸೋಲು ಹಾಗೂ ಅದಕ್ಕಿಂತ ಮುಖ್ಯವಾಗಿ ಹಾಸನದಲ್ಲಿ ರೇವಣ್ಣನ ಮಗನ ಗೆಲುವಿನಿಂದ ಅವರು ಹತಾಶರಾಗಿದ್ದಾರೆ' ಎಂದು ಲೇವಡಿ ಮಾಡಿದರು.

'ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ 25 ಕ್ಷೇತ್ರದಲ್ಲಿ ನಮ್ಮ ಪಕ್ಷ ಜಯಗಳಿಸಿದೆ. ಹೀಗಾಗಿ ಜನರ ಆಶೀರ್ವಾದ ಬಿಜೆಪಿಯ ಕಡೆಗೆ ಇದೆ. ನೀವು ಕೇವಲ ಅದೃಷ್ಟದಿಂದ, ಕುತಂತ್ರದಿಂದ ಮುಖ್ಯಮಂತ್ರಿ ಆಗಿದ್ದೀರಿ ಹೊರತು ಜನಾಶೀರ್ವಾದದಿಂದ ಅಲ್ಲ. ಆ ಸ್ಥಾನದ ಗೌರವ ಕಳೆಯಬೇಡಿ. ದೂರು ಹೇಳಿದವರ ಮೇಲೆ ಲಾಠಿ ಚಾರ್ಜ್‌ ಮಾಡಿಸುವ ದರ್ಪ ತೋರಬೇಡಿ. ಬಿಜೆಪಿ ಕಾರ್ಯಕರ್ತರು ನಿಮಗೆ ಜೈಕಾರ ಹಾಕಬೇಕಿತ್ತಾ? ಎಂದು ಪ್ರಶ್ನಿಸಿದರು.  ‘ನಿಮ್ಮ ತವರು ಜಿಲ್ಲೆ ಉಗ್ರರ ಅಡಗು ತಾಣವಾಗಿದ್ದು, ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ' ಎಂದು ಆಗ್ರಹಿಸಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ನಾಗರಾಜು ಮಾತನಾಡಿ ‘ಅಮಿತ್‌ ಶಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಚೇರಿಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ. ಅಂತೆಯೇ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ತನ್ನದೇ ಸ್ವಂತ ಕಚೇರಿಯಲ್ಲಿ ಕೆಲಸ ಮಾಡಬೇಕು ಎನ್ನುವುದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಶಯವಾಗಿದೆ. ಎಲ್ಲ ಜಿಲ್ಲೆಗಳಲ್ಲಿ ನಿವೇಶನ ಖರೀದಿ ಮಾಡಿದ್ದು, ಎರಡನೇ ಜಿಲ್ಲೆಯಾಗಿ ರಾಮನಗರದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕಾರ್ಯಕರ್ತರ ಶ್ರದ್ದಾ ಕೇಂದ್ರವಾಗಿ ಈ ಕಟ್ಟಡ ನಿರ್ಮಾಣ ಆಗಲಿದ್ದು, ಪಕ್ಷದ ಸಂಘಟನೆಗೆ ಅನುಕೂಲ ಆಗಲಿದೆ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌, ವಕ್ತಾರ ಅಶ್ವತ್ಥ್‌ನಾರಾಯಣ ಇದ್ದರು.

‌ಸಿಎಂ ತವರಲ್ಲೇ ಉಗ್ರ ಚಟುವಟಿಕೆ
‘ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಉಗ್ರ ಚಟುವಟಿಕೆಗಳು ನಡೆದಿರುವುದು ಆಘಾತಕಾರಿ ಸಂಗತಿ. ಇದಕ್ಕೆ ಗೃಹ ಸಚಿವರೇ ಹೊಣೆ’ ಎಂದು ಬಿಜೆಪಿ ವಕ್ತಾರ ಅಶ್ವತ್ಥ್‌ ನಾರಾಯಣ ಹೇಳಿದರು.

‘ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಭಯೋತ್ಪಾದಕರ ಅಡಗು ತಾಣಗಳಾಗಿದ್ದು, ಪೊಲೀಸರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದ್ದು, ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ. ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಕೈಬಿಟ್ಟು ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

**
ಚನ್ನಪಟ್ಟಣ ನೀರಾವರಿ ಯೋಜನೆಯಲ್ಲಿ ಯಾವ ಕಳಪೆ ಕಾಮಗಾರಿಯೂ ನಡೆದಿಲ್ಲ. ಮುಖ್ಯಮಂತ್ರಿಗಳು ಏನು ಬೇಕಾದರೂ ಹೇಳಬಹುದು. ಅದಕ್ಕೆ ಜನರೇ ಉತ್ತರಿಸುತ್ತಾರೆ
-ಸಿ.ಪಿ. ಯೋಗೇಶ್ವರ್‌, ಬಿಜೆಪಿ ಮುಖಂಡ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು