ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ | ಹಣ ಪಡೆದು ಮನೆ ಮಾಲೀಕನಿಂದ ವಂಚನೆ, ಬೀದಿಗೆ ಬಿದ್ದ ಭೋಗ್ಯದಾರರು

Last Updated 21 ಜನವರಿ 2023, 6:16 IST
ಅಕ್ಷರ ಗಾತ್ರ

ಕನಕಪುರ: ಮನೆ ಮಾಲೀಕರ ವಂಚನೆಯಿಂದ ನಾಲ್ಕು ಕುಟುಂಬಗಳು ಬೀದಿಗೆ ಬಂದಿದ್ದು, ಅತ್ತ ಮನೆಯೂ ಇಲ್ಲದೆ ಇತ್ತ ಕೊಟ್ಟ ಹಣವೂ ಇಲ್ಲದೆ ಗೋಳಾಡುವ ಸ್ಥಿತಿ ರಂಗನಾಥ ಬಡಾವಣೆಯಲ್ಲಿ ಶುಕ್ರವಾರ ನಡೆಯಿತು.

ತಾಲ್ಲೂಕಿನ ಹಾರೋಹಳ್ಳಿ ರಂಗನಾಥ ಬಡಾವಣೆಯಲ್ಲಿ ಜ್ಯೋತಿ ರಮೇಶ್ ಎಂಬುವರು ಕಟ್ಟಿಸಿರುವ ಜ್ಯೋತಿ ನಿಲಯ ಮನೆಯಲ್ಲಿ 4 ಕುಟುಂಬಗಳು ಮನೆಯನ್ನು ಭೋಗ್ಯಕ್ಕೆ ಪಡೆದು ವಾಸಿಸುತ್ತಿದ್ದವು.

ಶುಕ್ರವಾರ ಬೆಳಿಗ್ಗೆ ಪೊಲೀಸರೊಂದಿಗೆ ಬಂದ ಶ್ರೀರಾಮ ಫೈನಾನ್ಸ್ ಸಿಬ್ಬಂದಿ ಏಕಾಏಕಿ ಕೋರ್ಟ್‌‌ನಿಂದ ಆದೇಶ ಮಾಡಿಸಿದ್ದೇವೆ ಎಂದು ಹೇಳಿ ಮನೆಯಲ್ಲಿದ್ದವರನ್ನು ಆಚೆಗೆ ಕಳುಹಿಸಿ ಮನೆಗೆ ಬೀಗ ಹಾಕಿದರು.

ಮನೆ ಕಟ್ಟಿದಾಗಿನಿಂದ ನಾಲ್ಕೂ ಕುಟುಂಬದ ಸದಸ್ಯರು ಇದೇ ಮನೆಯಲ್ಲಿ ಭೋಗ್ಯದಾರರಾಗಿ ವಾಸಿಸುತ್ತಿದ್ದರು. ನಾಲ್ಕು ಕುಟುಂಬಗಳು ಸುಮಾರು ₹14 ಲಕ್ಷವನ್ನು ಮನೆಯ ಮಾಲೀಕ ಜ್ಯೋತಿ ರಮೇಶ್ ಅವರಿಗೆ ನೀಡಿರುವುದಾಗಿ ತಿಳಿಸಿದ್ದಾರೆ.

ಆದರೆ, ಶ್ರೀರಾಮ್ ಫೈನಾನ್ಸ್‌ನವರು ಮಾಲೀಕರು ಮನೆಯನ್ನು ತಮ್ಮ ಬಳಿ ಅಡಮಾನವಿಟ್ಟು ಸಾಲ ಪಡೆದಿದ್ದಾರೆ. ಹಣ ಕಟ್ಟದೆ ವಂಚನೆ ಮಾಡಿರುವುದರಿಂದ ನಾವು ಮನೆಗೆ ಪೊಲೀಸರು ಸಮ್ಮುಖದಲ್ಲಿ ಬೀಗ ಹಾಕುತ್ತಿದ್ದೇವೆ ಎಂದು
ತಿಳಿಸಿದ್ದಾರೆ.

‘ನಾವು ಹಣ ಕೊಟ್ಟು ಮನೆಯನ್ನು ಭೋಗ್ಯ ಮಾಡಿಕೊಂಡಿದ್ದೇವೆ. ನಮಗೆ ಹಣ ವಾಪಸ್‌ ಕೊಟ್ಟಿದ್ದರೆ ನಾವೇ ಮನೆ ಖಾಲಿ ಮಾಡಿಕೊಂಡು ಹೊರಗೆ ಹೋಗುತ್ತಿದ್ದೆವು. ಆದರೆ ಈಗ ಮನೆಯಿಂದ ಹೊರ ಹಾಕಿದ್ದಾರೆ. ನಮಗೆ ಹಣ ಕೊಡುವವರು ಯಾರು. ಶಾಲೆಗೆ ಹೋಗಿರುವ ಮಕ್ಕಳು ಬಂದ ಮೇಲೆ ನಾವು ಎಲ್ಲಿಗೆ ಹೋಗಬೇಕು’ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

ಮನೆ ಮಾಲೀಕರು ಮೋಸ ಮಾಡುವ ಉದ್ದೇಶದಿಂದಲೇ ತಮ್ಮಿಂದ ಹಣ ಪಡೆದುಕೊಂಡಿದ್ದಾರೆ. ಅಲ್ಲದೇ, ಇಬ್ಬರು ಖಾಸಗಿ ವ್ಯಕ್ತಿಗಳ ಬಳಿ ಹಣ ಪಡೆದು ಅವರಿಗೆ ಮನೆಯನ್ನು ಅಗ್ರಿಮೆಂಟ್ ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ. ನಮಗೆ ಹಣ ವಾಪಸ್‌ ಕೊಡದೆ ಸತಾಯಿಸುತ್ತಿದ್ದರಿಂದ ವಿಧಿಯಿಲ್ಲದೆ ಮನೆಯಲ್ಲಿ ಇರಬೇಕಾಯಿತು. ಈಗ ನೋಡಿದರೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು.

ಸಾಲ ಕಟ್ಟದಿದ್ದರೆ ಮನೆ ಮಾಲೀಕರ ಆಸ್ತಿಯನ್ನು ಮುಟ್ಟುಗೊಲು ಹಾಕಿಕೊಳ್ಳುವ ಮುನ್ನ ನಮಗೆ ಬರಬೇಕಾದ ಭೋಗ್ಯದ ಹಣ ಪಾವತಿಸಿ ಆ ನಂತರ ಮನೆಯನ್ನು ಖಾಲಿ ಮಾಡಿಸಬೇಕಿತ್ತು. ಏಕಾಏಕಿ ಮನೆಯನ್ನು ಸೀಜ್‌ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಮನೆ ಮಾಲೀಕರ ವಿರುದ್ಧ ಭೋಗ್ಯದಾರರಾದ ಅಕ್ಷಯ್ ರಾವ್, ನರಸಿಂಹಯ್ಯ, ಅಲ್ತಾಫ್, ನಾಗರತ್ನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT