ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಚಿನ್ನದ ಕ್ಯಾರೆಟ್ ಮೌಲ್ಯದಲ್ಲಿ ವಂಚನೆ: ಪರಿಹಾರಕ್ಕೆ ಆದೇಶ

Published 6 ಜುಲೈ 2024, 6:30 IST
Last Updated 6 ಜುಲೈ 2024, 6:30 IST
ಅಕ್ಷರ ಗಾತ್ರ

ರಾಮನಗರ: ಗ್ರಾಹಕರೊಬ್ಬರಿಂದ ಖರೀದಿಸಿದ್ದ 24 ಕ್ಯಾರೆಟ್ ಚಿನ್ನವನ್ನು 22 ಕ್ಯಾರೆಟ್ ಚಿನ್ನವೆಂದು ತಪ್ಪಾಗಿ ಮೌಲ್ಯಮಾಪನ ಮಾಡಿ ವಂಚಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ನಷ್ಟದ ಮೊತ್ತದ ಜೊತೆಗೆ ಪರಿಹಾರ ಪಾವತಿಸುವಂತೆ ಕನಕಪುರದ ಧನಲಕ್ಷ್ಮಿ ಜ್ಯುವೆಲರ್ಸ್‌ ಮಳಿಗೆಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶ ನೀಡಿದೆ.

ಪಿರ್ಯಾದಿ ರಾಜೇಂದ್ರ ಪ್ರಸಾದ್ ಅವರಿಗೆ ಮಳಿಗೆಯವರು ವ್ಯತ್ಯಾಸದ ₹14,025 ಮೊತ್ತವನ್ನು ವಾರ್ಷಿಕ ಶೇ 12ರ ಬಡ್ಡಿಯಂತೆ ಪಾವತಿಸಬೇಕು. ಸೇವಾ ನ್ಯೂನತೆಗೆ ₹5 ಸಾವಿರ ಪರಿಹಾರ, ಮಾನಸಿಕ ಹಿಂಸೆಗೆ ₹3 ಸಾವಿರ ಪರಿಹಾರ ಹಾಗೂ ಪ್ರಕರಣಕ್ಕೆ ತಗುಲಿದ ಖರ್ಚು ₹3 ಸಾವಿರವನ್ನು ಆದೇಶ ಪ್ರಕಟವಾದ (ಜೂನ್ 29) 45 ದಿನದೊಳಗೆ ಪಾವತಿಸುವಂತೆ ಆಯೋಗ ಸೂಚಿಸಿದೆ.

ಏನಿದು ಪ್ರಕರಣ: ಕನಕಪುರ ತಾಲ್ಲೂಕಿನ ವೀರೇಗೌಡನದೊಡ್ಡಿಯ ರಾಜೇಂದ್ರ ಪ್ರಸಾದ್, ಕನಕಪುರದ ಎಂ.ಜಿ. ರಸ್ತೆಯಲ್ಲಿರುವ ಧನಲಕ್ಷ್ಮಿ ಜ್ಯುವೆಲ್ಲರ್ಸ್‌ನಲ್ಲಿ 2023ರ ಆಗಸ್ಟ್ 8ರಂದು ₹4,06,495 ಮೌಲ್ಯದ 22 ಕ್ಯಾರೆಟ್‌ನ 66.820 ಗ್ರಾಂ ಚಿನ್ನಾಭರಣ ಖರೀದಿಸಿದ್ದರು. ಅದಕ್ಕಾಗಿ, ರಾಜೇಂದ್ರ ಅವರು ತಮ್ಮಲ್ಲಿದ್ದ ಹಳೆಯ 34 ಗ್ರಾಂ ಚಿನ್ನವನ್ನು ಅದೇ ಮಳಿಗೆಗೆ ಮಾರಾಟ ಮಾಡಿದ್ದರು.

ಮಳಿಗೆಯವರು ಖರೀದಿಸಿದ್ದ ಚಿನ್ನದಲ್ಲಿ ಶೇ 20ರಷ್ಟು ಕಾಪರ್ ಮತ್ತು ಕೂಳೆಯನ್ನು ಕಳೆದುಕೊಂಡು 26.715 ಗ್ರಾಂ ಚಿನ್ನಕ್ಕೆ ₹1,43,647 (ಪ್ರತಿ ಗ್ರಾಂಗೆ ₹5,377ರಂತೆ) ದರ ನಿಗದಿ ಮಾಡಿದ್ದರು. ಇದರಿಂದಾಗಿ ಪಿರ್ಯಾದಿಯ ಹಳೆಯ ಚಿನ್ನಕ್ಕೆ ಪಾವತಿಸಬೇಕಾಗಿದ್ದ ₹14,318 ಮೊತ್ತ ವ್ಯತ್ಯಾಸವಾಗಿತ್ತು. ಈ ಕುರಿತು ಮಳಿಗೆಯವರನ್ನು ಪ್ರಶ್ನಿಸಿದಾಗ, ಅವಾಚ್ಯವಾಗಿ ನಿಂದಿಸಿ ಅಪಮಾನ ಮಾಡಿದ್ದರು ಎಂದು ಪಿರ್ಯಾದಿ ಆಯೋಗಕ್ಕೆ ದೂರು ಕೊಟ್ಟಿದ್ದರು.

ತಮ್ಮ ಹಳೆ ಚಿನ್ನಕ್ಕೆ ಸಿಗಬೇಕಾದ ₹14,318 ಮೊತ್ತದ ಜೊತೆಗೆ, ಸೇವಾ ನ್ಯೂನತೆ ಮತ್ತು ಮಾನಸಿಕ ಹಿಂಸೆಗೆ ಪರಿಹಾರವಾಗಿ ₹2 ಲಕ್ಷ ಹಾಗೂ ಪ್ರಕರಣದ ಖರ್ಚು ₹50 ಸಾವಿರವನ್ನು ಮಳಿಗೆಯವರಿಂದ ಭರಿಸಿ ಕೊಡಬೇಕು ಎಂದು ಪಿರ್ಯಾದಿ ಆಯೋಗವನ್ನು ಕೋರಿದ್ದರು.

ಪಿರ್ಯಾದಿಯ ಆರೋಪವನ್ನು ಅಲ್ಲಗಳೆದಿದ್ದ ಮಳಿಗೆಯವರು, ಪಿರ್ಯಾದಿಯ ಹಳೆ ಆಭರಣವನ್ನು ಖರೀದಿಸಿದ್ದನ್ನು ಮತ್ತು ಹೊಸ ಆಭರಣ ಮಾರಾಟ ಮಾಡಿದ್ದನ್ನು ಒಪ್ಪಿಕೊಂಡಿದ್ದರು. ತಮ್ಮ ವಿರುದ್ಧ ಸುಳ್ಳು ಹಾಗೂ ಕ್ಷುಲ್ಲಕ ಪ್ರಕರಣ ದಾಖಲಿಸಲಾಗಿದ್ದು, ಮಳಿಗೆಯ ಖ್ಯಾತಿಗೆ ಚ್ಯುತಿ ತಂದಿದ್ದಾರೆ. ಹಾಗಾಗಿ, ಪ್ರಕರಣವನ್ನು ವಜಾ ಮಾಡಬೇಕು ಎಂದು ಕೋರಿದ್ದರು.

ಎರಡೂ ಕಡೆಯವರನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಎಚ್‌. ಚನ್ನೇಗೌಡ ಮತ್ತು ಸದಸ್ಯ ವೈ.ಎಸ್. ತಮ್ಮಣ್ಣ ಅವರಿದ್ದ ಪೀಠ, ಪಿರ್ಯಾದುದಾರರು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿ ಅವರ ಆರೋಪವನ್ನು ಪುರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT