ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ವಿಸರ್ಜನೆ: ನಿಯಮ ಪಾಲಿಸಿ

Last Updated 12 ಸೆಪ್ಟೆಂಬರ್ 2021, 5:11 IST
ಅಕ್ಷರ ಗಾತ್ರ

ಕನಕಪುರ: ‘ಗಣೇಶ ಮೂರ್ತಿಯನ್ನು ಸರ್ಕಾರ ನಿಗದಿಪಡಿಸಿರುವ ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಐದು ದಿನದೊಳಗೆವಿಸರ್ಜನೆ ಮಾಡಬೇಕು’ ಎಂದು ಡಿವೈಎಸ್‌ಪಿ ರಮೇಶ್‌ ತಾಕೀತು ಮಾಡಿದರು.

ಇಲ್ಲಿನ ರೋಟರಿ ಭವನದಲ್ಲಿ ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ, ನಗರಸಭೆ, ಪೊಲೀಸ್‌ ಇಲಾಖೆಯಿಂದ ನಡೆದ ಶಾಂತಿ ಮತ್ತು ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಕೋವಿಡ್‌ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದ ರಾಜ್ಯ ಸರ್ಕಾರ ಗೌರಿ, ಗಣೇಶ ಹಬ್ಬವನ್ನು ಸರಳವಾಗಿ ಮತ್ತು ಕೋವಿಡ್‌ ಮಾರ್ಗಸೂಚಿಯಡಿ ಆಚರಣೆ ಮಾಡಲು ಅವಕಾಶ ನೀಡಿದೆ. ಅದಕ್ಕೆ ಬದ್ಧರಾಗಿ ಸಾರ್ವಜನಿಕರು ಹಬ್ಬ ಆಚರಣೆ ಮಾಡಬೇಕಿದೆ ಎಂದು ಎಚ್ಚರಿಸಿದರು.

ಆಯಾ ಗ್ರಾಮ ಪಂಚಾಯಿತಿ, ನಗರಸಭೆಯಲ್ಲೂ ಅನುಮತಿ ಪಡೆದು ವಿಸರ್ಜನೆ ಮಾಡುವ ದಿನವನ್ನು ತಿಳಿಸಬೇಕು. ಬೆಳಿಗ್ಗಿನ ಸಮಯದಲ್ಲಿ ಮಾತ್ರ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಿದ್ದು ಮೆರವಣಿಗೆ, ಅನ್ನದಾಸೋಹ ನಡೆಸುವಂತಿಲ್ಲ. ಹೆಚ್ಚು ಜನರು ಗುಂಪು ಗೂಡುವಂತಿಲ್ಲ ಎಂದು
ತಿಳಿಸಿದರು.

ನಗರಸಭೆ ಅಧ್ಯಕ್ಷ ಮುಕ್ಬೂಲ್‌ ಪಾಷ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ನಗರಸಭೆಯಿಂದಲೇ ಸ್ಥಳಾವಕಾಶ ಮಾಡಿಕೊಡಲಾಗಿದೆ. ನಗರದಲ್ಲಿ ಗಣೇಶ ಮೂರ್ತಿ ಇಟ್ಟಿರುವವರು ಅಲ್ಲಿಯೇ ವಿಸರ್ಜನೆ ಮಾಡಬೇಕು. ನಿಮ್ಮ ಸಹಾಯಕ್ಕೆ ನಗರಸಭೆ ಸಿಬ್ಬಂದಿ ಇರುತ್ತಾರೆ. ಅವರ ನೆರವು ಪಡೆದುಕೊಳ್ಳಬೇಕು ಎಂದು ಹೇಳಿದರು.

ನಗರಸಭೆ ಅಧಿಕಾರಿ ಪಾರ್ವತಿ ಮಾತನಾಡಿ, ಗಣೇಶ ಮೂರ್ತಿ ಕೂರಿಸುವ, ವಿಸರ್ಜನೆ ಮಾಡುವ ಬಗ್ಗೆ ಈಗಾಗಲೇ ನಗರಸಭೆಯಿಂದ ಆಟೊ ಪ್ರಚಾರ ಮಾಡಲಾಗಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕು. ಸಂಜೆ 4 ರಿಂದ 6 ಗಂಟೆವರೆಗೆ ವಿಸರ್ಜನೆಗೆ ಸಮಯ ನಿಗದಿಪಡಿಸಲಾಗಿದೆ. ನಾಗರಿಕರು ಈ ಸಮಯದಲ್ಲೇ ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.

ಶಾಂತಿ ಕಾಪಾಡುವುದು ಎಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಎಲ್ಲರೂ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಕೋರಿದರು.

ಸಭೆಯಲ್ಲಿ ಗ್ರೇಡ್‌ -2 ತಹಶೀಲ್ದಾರ್‌ ಶಿವಕುಮಾರ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃ‍ಷ್ಣ, ಸಬ್‌ ಇನ್‌ಸ್ಪೆಕ್ಟರ್‌ ಉಷಾನಂದಿನಿ, ನಗರಸಭೆ ಸದಸ್ಯರು, ವಿವಿಧ ಪಕ್ಷದ ರಾಜಕೀಯ ಮುಖಂಡರು, ನಾಗರಿಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT