ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ‘ಖಾಲಿ ಹುದ್ದೆ ಭರ್ತಿ, ನಿರುದ್ಯೋಗಿಗಳ ಭತ್ಯೆಗೆ ಹೋರಾಟ’

Published 28 ಮೇ 2024, 14:37 IST
Last Updated 28 ಮೇ 2024, 14:37 IST
ಅಕ್ಷರ ಗಾತ್ರ

ರಾಮನಗರ: ‘ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಜೊತೆಗೆ ಎಲ್ಲಾ ರೀತಿಯ ಪದವೀಧರ ನಿರುದ್ಯೋಗಿಗಳಿಗೆ ಬದುಕಿಗೆ ಉದ್ಯೋಗ ಸಿಗುವವರೆಗೆ ಸರ್ಕಾರದಿಂದ ಭತ್ಯೆ ಸಿಗಬೇಕು. ಈ ನಿಟ್ಟಿನಲ್ಲಿ ನಾನು ದನಿ ಎತ್ತುತ್ತಾ ಬಂದಿದ್ದೇನೆ. ಪದವೀಧರರ ಪ್ರತಿನಿಧಿಯಾಗಿ ಆಯ್ಕೆಯಾದರೆ ಈ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಹೋರಾಡುವೆ’ ಎಂದು ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂ.ಪಿ. ಕರಬಸಪ್ಪ ಹೇಳಿದರು.

‘ಪ್ರಾಂಶುಪಾಲನಾಗಿ ಕೆಲಸ ಮಾಡಿ ನಿವೃತ್ತನಾಗಿರುವ ನಾನು ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಾಂಶುಪಾಲರ ಸಂಘ ಮತ್ತು ರಾಜ್ಯ ಅನುದಾನಿತ ಶಾಲಾ– ಕಾಲೇಜುಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷನಾಗಿ ಸಲ್ಲಿಸುತ್ತಿದ್ದೇನೆ. ಪದವೀಧರರ ಸಮಸ್ಯೆಗಳ ಅರಿವಿದ್ದು, ಅವುಗಳ ಪರಿಹಾರಕ್ಕೆ ಶ್ರಮಿಸುತ್ತೇನೆ’ ಎಂದು ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘2006ರ ಏಪ್ರಿಲ್ 1ರ ನಂತರ ಸೇವೆಗೆ ಸೇರಿದ ಸರ್ಕಾರಿ ಮತ್ತು ಅನುದಾನಿತ ನೌಕರಿಗೆ ಹಳೇ ಪಿಂಚಣಿ ಮಂಜೂರಾತಿ, ಶಾಶ್ವತ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಿ ಸೇವಾ ಭದ್ರತೆಗೆ ಒದಗಿಸುವುದು, ಸರ್ಕಾರಿ ನೌಕರರಿಗೆ ನಿಗದಿತ ಸಮಯದೊಳಗಾಗಿ ಬಡ್ತಿ, ವರ್ಗಾವಣೆ ನೀತಿ ಸರಳೀಕರಣ ಕುರಿತು ದನಿ ಎತ್ತುವೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಹಿತದೃಷ್ಟಿಯಿಂದ ಹಿಂದಿನಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಹೆಸರು ಹಾಗೂ ಪರೀಕ್ಷಾ ಮಂಡಳಿಯ ಅಸ್ತಿತ್ವವನ್ನು ಮುಂದುವರೆಸಬೇಕು. ಸರ್ಕಾರಿ ನೌಕರರಿಗಿರುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ - ಅನುದಾನ ರಹಿತ ಶಾಲಾ ಕಾಲೇಜುಗಳ ನೌಕರರಿಗೆ ನೀಡಬೇಕು. ಈ ಕುರಿತು ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.

ಮುಖಂಡರಾದ ಚಂದ್ರೇಗೌಡ, ಭಾನುಮೂರ್ತಿ, ಲಿಂಗಯ್ಯ, ಆದಿನಾರಾಯಣ ರೆಡ್ಡಿ, ಸುಭಾಷ್ , ಚನ್ನಬಸಪ್ಪ ಹಾಗೂ ದೇವರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT