ಮಂಗಳವಾರ, ಆಗಸ್ಟ್ 9, 2022
20 °C
ರಸ್ತೆಯಲ್ಲೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು; ಎಚ್ಚೆದ್ದ ಅಧಿಕಾರಿಗಳಿಂದ ಕ್ರಮ

ಸ್ಮಶಾನ ಜಾಗ ಸಮಸ್ಯೆಗೆ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಇಟ್ಟಮಡು ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಜಾಗದ ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯ ತಾಳಿದ ಅಧಿಕಾರಿಗಳ ಧೋರಣೆಯಿಂದ ಬೇಸತ್ತ ಗ್ರಾಮಸ್ಥರು ರಸ್ತೆಯಲ್ಲಿಯೇ ಶವಸಂಸ್ಕಾರ ಮಾಡುವ ನಿರ್ಧಾರ ಕೈಗೊಂಡರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ತಕ್ಷಣವೇ ಹದ್ದುಬಸ್ತು ಗುರುತಿಸಿ ಶವಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು.

ಸಾರ್ವಜನಿಕ ಸ್ಮಶಾನದ ಜಾಗವನ್ನು ಅಳತೆ ಮಾಡಿ ಹದ್ದುಬಸ್ತು ಗುರುತಿಸಲು ತಾಲೂಕು ಆಡಳಿತ ವಿಳಂಬ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರುತ್ತಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅನಾರೋಗ್ಯ
ದಿಂದ ಮಂಗಳವಾರ ಮೃತಪಟ್ಟಿದ್ದ ಮಹಿಳೆಯರನ್ನು ಮುಖ್ಯರಸ್ತೆಯಲ್ಲಿಯೇ ಸಂಸ್ಕಾರ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದರು. ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ ಕೂಡಲೇ ಸಾರ್ವಜನಿಕ ಸ್ಮಶಾನದ ಅಳತೆ ಮಾಡುವ ಕ್ರಮಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿತು.

ತಾಲೂಕು ತಹಶೀಲ್ದಾರ್ ನರಸಿಂಹಮೂರ್ತಿ, ಸರ್ವೆ ಇಲಾಖೆ ಸಿಬ್ಬಂದಿ ಹಾಗೂ ಬಿಡದಿ ಪುರಸಭೆ ಅಧಿಕಾರಿಗಳು ಉದ್ದೇಶಿತ ಸ್ಮಶಾನದ ಜಾಗ ಹದ್ದುಬಸ್ತು ಗುರುತಿಸಿ ಕೊಟ್ಟು ಶವಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು. ಸ್ಮಶಾನದ ಜಾಗದ ಸಂಪರ್ಕ ರಸ್ತೆಗೆ ಎರಡು ಗುಂಟೆ ಜಮೀನು ಖರೀದಿಸಲು ಬಿಡದಿ ಪುರಸಭೆ ಮುಂದೆ ಬಂದ ಹಿನ್ನೆಲೆಯಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಾರ್ವಜನಿಕ ಸ್ಮಶಾನದ ಸಮಸ್ಯೆ ಇತ್ಯರ್ಥಗೊಂಡಿತು.

ವಿವಾದಿತ ಜಮೀನಿನ ಹದ್ದುಬಸ್ತು ಗುರುತಿಸಲು ಅಧಿಕಾರಿಗಳು ಆಗಮಿಸುತ್ತಿದ್ದಂತೆ ಸ್ಥಳದಲ್ಲಿ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪುರಸಭೆ ಅಧಿಕಾರಿಗಳು ಜೆಸಿಬಿ ಮೂಲಕ ಸ್ಮಶಾನಕ್ಕೆ ನಿಗದಿಯಾಗಿದ್ದ ಜಾಗದಲ್ಲಿ ಸಂಸ್ಕಾರ ಕಾರ್ಯವನ್ನು ಸುಗಮವಾಗಿ ನಡೆಯಲು ಅನುವು ಮಾಡಿಕೊಟ್ಟರು.

ಹಿನ್ನೆಲೆ: ಇಟ್ಟಮಡು ಸಮೀಪದ ತೊರೆದೊಡ್ಡಿ ಗ್ರಾಮದಲ್ಲಿ ಸರ್ಕಾರ ಸಾರ್ವಜನಿಕ ಸ್ಮಶಾನಕ್ಕೆ ಹೆಗ್ಗಡಗೆರೆ ಸರ್ವೆ ನಂಬರ್ 257ರಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1966 ನಿಯಮ ಅಡಿಯಲ್ಲಿ 2.5 ಎಕರೆ ಜಮೀನನ್ನು ಮಂಜೂರು ಮಾಡಿದೆ. 2005-06ರಲ್ಲಿ ಸ್ಮಶಾನಕ್ಕೆ ಮಂಜೂರಾದ ಜಮೀನನ್ನು ಸಂಬಂಧಿಸಿದ ಅಧಿಕಾರಿಗಳು ಅಳತೆ ಮಾಡಿ ಗುರುತಿಸದ ಕಾರಣ ಇಡೀ ಜಮೀನು ಒತ್ತುವರಿ ಒಳಗಾಗಿತ್ತು. ಸ್ಮಶಾನಕ್ಕೆ ನಿಗದಿಯಾದ ಸ್ಥಳದಲ್ಲಿ ಒತ್ತುವರಿಯಾದರೂ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸದ ಕಾರಣ ಗ್ರಾಮಸ್ಥರು ಹಳ್ಳ ಕೊಳ್ಳಗಳಲ್ಲಿ ಶವ ಸಂಸ್ಕಾರ ಮಾಡುವ ಪರಿಸ್ಥಿತಿ ಎದುರಾಗಿತ್ತು.

ಇಟ್ಟಮಡು ತೊರೆದೊಡ್ಡಿ ಮತ್ತು ಹೆಗ್ಗಡಗೆರೆ ಗ್ರಾಮಗಳಿಗೆ ಸಾರ್ವಜನಿಕ ಸ್ಮಶಾನಕ್ಕಾಗಿ ತೊರೆದು ಸಮೀಪವಿದ್ದ ಸರ್ಕಾರಿ ಖರಾಬು ಜಾಗವನ್ನು ಮಂಜೂರು ಮಾಡಿಕೊಡುವಂತೆ 2005-06ರಲ್ಲಿ ಅಂದಿನ ಶಾಸಕರಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಪತ್ರ ಬರೆದಿದ್ದರು. ಇದರ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ, ಹೆಗ್ಗಡಗೆರೆ ಸರ್ವೆ ನಂಬರ್ 111ರಲ್ಲಿ 33 ಗುಂಟೆ ಹಾಗೂ ಸರ್ವೆ ನಂಬರ್ 157 ರಲ್ಲಿ 2.20 ಎಕರೆ ಜಮೀನನ್ನು ಮಂಜೂರು ಮಾಡಿ ಆದೇಶ ಹೊರಡಿಸಿದ್ದರು.

ಆದರೆ ಅಂದಿನಿಂದ ಕಾರ್ಯನಿರ್ವಹಿಸಿದ ತಹಶೀಲ್ದಾರರು ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ನಕ್ಷೆಯ ಪ್ರಕಾರ ಅಧಿಕಾರ ವಾದ ಸ್ಥಳವನ್ನು ಗುರುತಿಸುವ ಕಾರಣ ಸ್ಥಳೀಯ ಮುಖಂಡ ಸೋಮಣ್ಣ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೀಗಾಗಿ ತಕ್ಷಣವೇ ಸಾರ್ವಜನಿಕ ಸ್ಮಶಾನ ಜಮೀನು ಸರ್ವೆ ಮಾಡಿ ಹದ್ದುಬಸ್ತು ಗುರುತಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದರೂ ಕೆಲವು ಪ್ರಭಾವಿಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು ಸಬೂಬುಗಳನ್ನು ಹೇಳಿ ಜಾರಿಕೊಳ್ಳುವ ಚಾಲು ಮುಂದುವರೆದಿತ್ತು.

2016ರಿಂದ ಐದಾರು ಬಾರಿ ಜಮೀನು ಅಳತೆ ಮಾಡಲು ಬಂದ ಹಲವು ಸರ್ವೇಯರ್‌ಗಳು ಎಡವಟ್ಟು ಮಾಡಿ ರೈತರಲ್ಲಿಯೇ ಗೊಂದಲವನ್ನು ಸೃಷ್ಟಿಸಿದ್ದರು. ಅಲ್ಲದೆ ಸದರಿ ಜಮೀನಿಗೆ ಸಂಪರ್ಕ ರಸ್ತೆ ಇಲ್ಲದ ಕಾರಣ ಸ್ಮಶಾನ ಜಾಗದ ಸಮಸ್ಯೆ ಇತ್ಯರ್ಥವಾಗದೆ ಸಮಸ್ಯೆ ಜಟಿಲವಾಗಿತ್ತು. ಹೀಗಾಗಿ ಸ್ಥಳೀಯ ಪುರಸಭೆ ಸದಸ್ಯೆ ವೈಶಾಲಿ ಚೆನ್ನಪ್ಪ ಅವರ ಒತ್ತಾಯದ ಮೇರೆಗೆ ಸಾರ್ವಜನಿಕ ಸ್ಮಶಾನದ ಸಂಪರ್ಕ ರಸ್ತೆಗೆ ಅಗತ್ಯವಿರುವ ಜಾಗವನ್ನು ಖರೀದಿಸಿ ಸ್ವಾಧೀನಪಡಿಸಿಕೊಳ್ಳಲು ಒತ್ತಾಯಿಸಿದ್ದರು. 2021ರ ಜನವರಿ 15ರಂದು ಬಿಡದಿ ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಆಗಿತ್ತು.

ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಕಾರಣ ಶವಸಂಸ್ಕಾರಕ್ಕೆ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಶವಗಳನ್ನು ಹಳ್ಳ-ಕೊಳ್ಳ ಕೆರೆಕಟ್ಟೆ ಮತ್ತು ರಸ್ತೆಬದಿಯಲ್ಲೇ ಸಂಸ್ಕಾರ ಮಾಡಿಲಾಗಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅಂತಿಮವಾಗಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳು ಆದಿಯಾಗಿ ತಹಶೀಲ್ದಾರ್‌,  ಡಿ. ಡಿ.ಎಲ್ .ಆರ್ ಮತ್ತು ಎ.ಡಿ.ಎಲ್.ಆರ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸ್ಮಶಾನದ ಜಾಗ ಶೀಘ್ರ ಹದ್ದುಬಸ್ತು ಗುರುತಿಸುವಂತೆ ಒತ್ತಾಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.