ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಜಿಲ್ಲೆಯಲ್ಲಿ ತುಘಲಕ್ ಆಡಳಿತ: ಎಚ್‌ಡಿಕೆ

Published 25 ನವೆಂಬರ್ 2023, 8:01 IST
Last Updated 25 ನವೆಂಬರ್ 2023, 8:01 IST
ಅಕ್ಷರ ಗಾತ್ರ

ರಾಮನಗರ: ‘ಕನಕಪುರ ತಾಲ್ಲೂಕಿಗೆ ಸಂಬಂಧಿಸಿದ ಕಂದಾಯ ಇಲಾಖೆಯ ಮೇಲ್ಮನವಿ ಪ್ರಕರಣಗಳನ್ನು ರಾಮನಗರದ ಉಪ ವಿಭಾಗಾಧಿಕಾರಿ ಕೋರ್ಟ್‌ ಬದಲು, ಕನಕಪುರದಲ್ಲೇ ವಿಚಾರಣೆ ನಡೆಸಲು ಅಲ್ಲಿ ಎ.ಸಿ ಕೋರ್ಟ್ ಆರಂಭಿಸಿರುವುದು ಸರಿಯಲ್ಲ. ಈ ತೀರ್ಮಾನ ಜಿಲ್ಲೆಯಲ್ಲಿರುವ ತುಘಲಕ್ ಆಡಳಿತಕ್ಕೆ ಸಾಕ್ಷಿಯಾಗಿದೆ’ ಎಂದು ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು..

ಕೋರ್ಟ್ ವಿರುದ್ಧ ದನಿ ಎತ್ತಿ ಪ್ರತಿಭಟನೆಗಿಳಿದಿದ್ದ ಜಿಲ್ಲಾ ವಕೀಲರ ಸಂಘದವರನ್ನು ಶುಕ್ರವಾರ ಸಂಘದ ಕಚೇರಿಯಲ್ಲಿ ಭೇಟಿ ನೀಡಿ ಮಾತನಾಡಿದ ಅವರು, ‘ಕಾನೂನು ವ್ಯಾಪ್ತಿ ಮೀರಿದ ಇಂತಹ ಸ್ವೇಚ್ಛಾಚಾರದ ನಿರ್ಧಾರದಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು, ಕಡಿಮೆಯಾಗುವುದಿಲ್ಲ. ಈ ಕುರಿತು, ನೀವು ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸುವೆ. ನಿಮ್ಮ ಹೋರಾಟಕ್ಕೆ ಜೊತೆಯಾಗಿ ನಿಲ್ಲುವೆ’ ಎಂದರು.

‘ರಾಜ್ಯದಲ್ಲಿ ಎಲ್ಲೂ ತೆಗೆದುಕೊಳ್ಳದ ನಿರ್ಧಾರವನ್ನು ಇಲ್ಲಿ ಮಾತ್ರ ತೆಗೆದುಕೊಳ್ಳಲು ಕಾರಣ ಯಾರು? ಇದೇನು ಸರ್ಕಾರದ ಆದೇಶವೇ? ಜಿಲ್ಲಾಧಿಕಾರಿ ಅಥವಾ ಉಪ ವಿಭಾಗಾಧಿಕಾರಿ ಆದೇಶವೋ ಎಂಬುದು ಇಲ್ಲಿ ಸ್ಪಷ್ಟವಿಲ್ಲ. ಹೀಗಾದರೆ, ಮುಂದೆ ಬೇರೆ ತಾಲ್ಲೂಕಿನವರು ಸಹ ತಮ್ಮಲ್ಲಿ ಕೋರ್ಟ್ ಆರಂಭಿಸುವಂತೆ ಬೇಡಿಕೆ ಇಡಬಹುದು. ಆಗ ಏನು ಮಾಡುತ್ತೀರಿ?’ ಎಂದು ಪ್ರಶ್ನಿಸಿದರು.

‘ಕೋರ್ಟ್ ಅನ್ನು ಈ ರೀತಿ ತಾಲ್ಲೂಕು ಮಟ್ಟದಲ್ಲಿ ಆರಂಭಿಸುವುದು ಕಂದಾಯ ಇಲಾಖೆಯ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಒಂದು ವೇಳೆ ಮಾಡಿದರೂ, ರಾಜ್ಯದಾದ್ಯಂತ ಮಾಡಬೇಕಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಈಗಾಗಲೇ ದಾಖಲೆಗಳು ಕಳ್ಳತನವಾಗುತ್ತಿವೆ ಎಂಬ ಆರೋಪಗಳಿವೆ. ಇದರ ನಡುವೆ ರಾಮನಗರದಿಂದ ಕನಕಪುರಕ್ಕೆ ಭೂ ದಾಖಲೆಗಳನ್ನು ಹೊತ್ತುಕೊಂಡು ತಿರುಗುವುದರಿಂದ ದಾಖಲೆಗಳು ಕಥೆ ಏನಾಗಲಿದೆಯೊ’ ಎಂದು ಅನುಮಾನ ವ್ಯಕ್ತಪಡಿಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ಖಜಾಂಚಿ ಮಂಜೇಶ್‍ಗೌಡ, ಹಿರಿಯ ವಕೀಲ ಸುಬ್ಬಾಶಾಸ್ತ್ರಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT