ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ | ಮಹಿಳೆಗೆ ಲೈಂಗಿಕ ಕಿರುಕುಳ: ಬಿಜೆಪಿ ಅಧ್ಯಕ್ಷನ ವಿರುದ್ಧ ಪ್ರಕರಣ

ಕೃತ್ಯದ ಬಳಿಕ ತಲೆ ಮರೆಸಿಕೊಂಡಿರುವ ಚನ್ನಪಟ್ಟಣ ಗ್ರಾಮಾಂತರ ಅಧ್ಯಕ್ಷ ಟಿ.ಎಸ್. ರಾಜು
Published : 9 ಸೆಪ್ಟೆಂಬರ್ 2024, 6:08 IST
Last Updated : 9 ಸೆಪ್ಟೆಂಬರ್ 2024, 6:08 IST
ಫಾಲೋ ಮಾಡಿ
Comments

ಚನ್ನಪಟ್ಟಣ: ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ, ಚನ್ನಪಟ್ಟಣ ಬಿಜೆಪಿ ಗ್ರಾಮಾಂತರ ಮಂಡಳದ ಅಧ್ಯಕ್ಷ ತೂಬಿನಕೆರೆಯ ಟಿ.ಎಸ್. ರಾಜು ವಿರುದ್ಧ ಭಾನುವಾರ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬೆನ್ನಲ್ಲೇ, ರಾಜು ತಲೆಮರೆಸಿಕೊಂಡಿದ್ದಾನೆ.

ಬೆಂಗಳೂರಿನಲ್ಲಿ ನೆಲೆಸಿರುವ ಮಹಿಳೆ, ಗಣೇಶ ಹಬ್ಬದ ಸಲುವಾಗಿ ತವರು ಮನೆಗೆ ಬಂದಿದ್ದರು. ಸೆ. 7ರಂದು ಗ್ರಾಮದಲ್ಲಿ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಸಲುವಾಗಿ ಮೆರವಣಿಗೆ ನಡೆಯುವಾಗ ಮಹಿಳೆ ರಾತ್ರಿ 11.40ರ ಸುಮಾರಿಗೆ ತಾಯಿಯೊಂದಿಗೆ ಮನೆ ಮುಂದೆ ನಿಂತಿದ್ದರು. ತಾಯಿ ಕಾರ್ಯನಿಮಿತ್ತ ಒಳಕ್ಕೆ ಹೋಗಿದ್ದರು. ಮಹಿಳೆ ಒಬ್ಬರೇ ಇದ್ದಿದ್ದನ್ನು ಗಮನಿಸಿ ಅವರತ್ತ ಬಂದಿದ್ದ ರಾಜು, ‘ಯಾವಾಗ ಬಂದೆ ಬೇಬಿ’ ಎಂದು ಕೇಳಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಮಹಿಳೆಯ ಹೆಗಲ ಮೇಲೆ ಕೈ ಹಾಕಿ ಎದೆ ಭಾಗವನ್ನು ಮುಟ್ಟುತ್ತಾ, ಕಾಮುಕ ದೃಷ್ಟಿಯಿಂದ ಕೈ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ. ಅಲ್ಲದೆ, ತನ್ನ ಮೊಬೈಲ್‌ ಫೋನ್‌ನಿಂದ ಮಹಿಳೆಯ ಫೋಟೊ ತೆಗೆದು ತನ್ನ ಸ್ನೇಹಿತರಿಗೆ ಕಳಿಸಿದ್ದ. ಈ ಕುರಿತು ಮಹಿಳೆ ಪ್ರಶ್ನಿಸಿದಾಗ, ‘ನನ್ನ ಮೊಬೈಲ್, ನನ್ನಿಷ್ಟ’ ಎಂದು ರಾಜು ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ.

ಆತನ ವರ್ತನೆಯಿಂದ ದಿಗ್ಬ್ರಮೆಗೊಂಡ ಮಹಿಳೆ ತಕ್ಷಣ ಒಳಗಿದ್ದ ತನ್ನ ಅಣ್ಣನಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ಪ್ರಶ್ನಿಸಿದಾಗ, ರಾಜು ತಬ್ಬಿಬ್ಬುಗೊಂಡಿದ್ದಾನೆ. ನಂತರ, ಕುಟುಂಬದವರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ, ಆತನ ಮೊಬೈಲ್ ಕಿತ್ತಕೊಂಡು ಇಟ್ಟುಕೊಂಡಿದ್ದು, ತನಿಖೆ ಸಂದರ್ಭದಲ್ಲಿ ಹಾಜರುಪಡಿಸುವೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ಹಿಂದೆಯೂ ರಾಜು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನನಗೆ ಕರೆ ಮಾಡಿ, ‘ಮೈಸೂರು ಕಾಫಿ ಡೇಗೆ ಹೋಗೋಣ. ನೀನೊಬ್ಬಳೇ ಬಾ. ಯಾರಿಗೂ ಹೇಳಬೇಡ’ ಎಂದಿದ್ದ. ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿರುವ ರಾಜು, ನನ್ನ ಗೌರವಕ್ಕೆ ಚ್ಯುತಿ ತಂದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಪಕ್ಷದಿಂದ ರಾಜು ಅಮಾನತು: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಜು ವಿರುದ್ಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಇತ್ತ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್. ಆನಂದಸ್ವಾಮಿ ಅವರು ಸೋಮವಾರ ರಾಜುನನ್ನು ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಸದ್ಯ ತಲೆ ಮರೆಸಿಕೊಂಡಿರುವ ಆರೋಪಿ ರಾಜು, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರ ಆಪ್ತನಾಗಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT