ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷ ಆಡಳಿತ ಮಾಡಿದವರಿಂದ ಆಗದ ಅಭಿವೃದ್ಧಿ

ಪ್ರಚಾರ ಕಾರ್ಯದಲ್ಲಿ ಡಿ.ಕೆ. ಸುರೇಶ್ ದೂರು
Published 17 ಏಪ್ರಿಲ್ 2024, 7:37 IST
Last Updated 17 ಏಪ್ರಿಲ್ 2024, 7:37 IST
ಅಕ್ಷರ ಗಾತ್ರ

ಹಾರೋಹಳ್ಳಿ: ‘25 ವರ್ಷ ಆಡಳಿತ ಮಾಡಿದವರು ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಮುಂದಿನ ದಿನಗಳಲ್ಲಿ ಹಾರೋಹಳ್ಳಿ ಸುಂದರ ಪಟ್ಟಣವಾಗಿ ನಿರ್ಮಾಣ ಆಗಲಿದೆ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹೇಳಿದರು.

ಪಟ್ಟಣದ ಮುಖ್ಯ ಸರ್ಕಲ್ ಬಳಿ ಮಂಗಳವಾರ ಮತಯಾಚನೆ ಮಾಡಿ, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರದಲ್ಲಿ ನಾನು ಸಾಕಷ್ಟು ಓಡಾಡಿದ್ದೇನೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಜನರ ಕಷ್ಟಸುಖ ಕೇಳಿದ್ದೇನೆ. 25 ವರ್ಷ ಆಡಳಿತ ಮಾಡಿದವರಿಗೆ ಹಾರೋಹಳ್ಳಿ ಮೇಲೆ ಪ್ರೀತಿ ಇಲ್ಲ. ಮಾಜಿ ಪ್ರಧಾನಿ ಆಗಿದ್ದರೂ, ಮಾಜಿ ಸಿಎಂ ಆಗಿದ್ದರೂ ಇಲ್ಲಿ ಅಭಿವೃದ್ಧಿ ಆಗಿರಲಿಲ್ಲ. ಅವರಿಗೆ ಅವರ ಕುಟುಂಬಕ್ಕೆ ಒಳ್ಳೆಯದಾದರೆ ಸಾಕಾಗಿತ್ತು. ಜನರಿಗೆ ಒಳ್ಳೆಯದು ಮಾಡಬೇಕು ಅಂತ ಅವರಿಗೆ ಭಾವನೆ ಇಲ್ಲ’ ಎಂದು ಪರೋಕ್ಷವಾಗಿ ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ದೂರಿದರು.

‘ಹಾರೋಹಳ್ಳಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ ರಾಜ್ಯದಲ್ಲಿ ಅಭಿವೃದ್ಧಿ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಹೊಸ ಹಾರೋಹಳ್ಳಿ ತಾಲ್ಲೂಕು ಕಚೇರಿಗೆ ಈಗಾಗಲೇ 3 ಎಕರೆ ಜಾಗವನ್ನು ಮಂಜೂರಾತಿ ಮಾಡಿಸಿ, ಸುಮಾರು ₹ 17 ಕೋಟಿ ಅನುದಾನ ನೀಡಲಾಗಿದೆ. ಪಟ್ಟಣ ಪಂಚಾಯಿತಿ ಕಟ್ಟಡಕ್ಕೆ ಜಾಗ ಇರಲಿಲ್ಲ ಪಟ್ಟಣದ ಸಮೀಪದಲ್ಲಿ ಒಂದೂವರೆ ಎಕರೆ ಜಾಗ ಗುರುತಿಸಲಾಗಿದೆ. ದೊಡ್ಡಕೆರೆ ಅಭಿವೃದ್ಧಿಗೆ ₹ 10 ಕೋಟಿ ಅನುದಾನ ಹಾಗೆಯೇ ಪಟ್ಟಣದ ಒಳ ಚರಂಡಿಗಳ ಅಭಿವೃಧ್ದಿಪಡಿಸಲು ₹ 33 ಕೋಟಿ ಅನುದಾನ ನೀಡಲಾಗಿದೆ. ತಾಲ್ಲೂಕಿನ ಗ್ರಾಮಗಳಿಗೆ ಕಾವೇರಿ ನೀರು ಕೊಡಲು ಸುಮಾರು ₹ 300 ಕೋಟಿ ಅನುದಾನ ಮೀಸಲಿಡಲಾಗಿದೆ. ಈಗಾಗಲೇ ಸುಮಾರು 50 ಎಕರೆ ಮೀನನ್ನು ವಶಕ್ಕೆ ಪಡೆದು ಪಟ್ಟಣದ ಬಡವರಿಗೆ, ಕೂಲಿ ಕಾರ್ಮಿಕರಿಗೆ ಒಂದು ವರ್ಷದೊಳಗೆ 4-5 ಸಾವಿರ ನಿವೇಶನ ಹಂಚಲಾಗುವುದು’ ಎಂದು ಭರವಸೆ ನೀಡಿದರು.

‘ಕಳೆದ 25 ವರ್ಷಗಳಿಂದ ಇಲ್ಲಿ ಆಡಳಿತ ನಡೆಸಿದವರು ಈಗ ರಾಮನಗರ, ಮಂಡ್ಯದ ಕಡೆ ಮುಖ ಮಾಡಿದ್ದಾರೆ. ಹಾಸನದಿಂದ ಜನಗಳನ್ನು ಕರೆಸಿ ಇಲ್ಲಿನ ಜನರನ್ನು ಕೂಲಿ ಆಳುಗಳನ್ನಾಗಿ ಮಾಡುತ್ತಾ, ಜನರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದ್ದಾರೆ. ಇದಕ್ಕೆಲ್ಲ ತಕ್ಕ ಪಾಠ ಕಲಿಸುವ ಕಾಲ ಬಂದಿದೆ’ ಎಂದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಹಾರೋಹಳ್ಳಿ ನೂತನವಾಗಿ ತಾಲ್ಲೂಕಾಗಿದ್ದು, ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ. ಕಾಂಗ್ರೆಸ್ ಸರ್ಕಾರ ಈಗಾಗಲೇ ಐದು ಗ್ಯಾರಂಟಿಗಳನ್ನು ಪ್ರತಿ ಮನೆಗಳಿಗೂ ತಲುಪಿಸಿದೆ. ಮುಂದೆಯೂ ಅಭಿವೃದ್ಧಿ ಕೆಲಸಗಳ ಮುಂದುವರೆಯಲು ಪಟ್ಟಣದ ಅಭಿವೃದ್ಧಿಗಾಗಿ ಕಾಂಗ್ರೆಸ್ ಅನ್ನು ಬಹುಮತದಿಂದ ಗೆಲ್ಲಿಸಬೇಕಿದೆ’ ಎಂದು ತಿಳಿಸಿದರು.

ಬಮುಲ್ ನಿರ್ದೆಶಕ ಹರೀಶ್ ಕುಮಾರ್, ಜೆಸಿಬಿ ಅಶೋಕ್, ಈಶ್ವರ್, ಕೇಬಲ್ ರವಿ, ರಾಮಕೃಷ್ಣ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT