ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೂಟಿಕೋರರ ಪರ ಸರ್ಕಾರದ ಸಂದೇಶ: ಎಚ್‌.ಡಿ. ಕುಮಾರಸ್ವಾಮಿ

Published 25 ನವೆಂಬರ್ 2023, 4:03 IST
Last Updated 25 ನವೆಂಬರ್ 2023, 4:03 IST
ಅಕ್ಷರ ಗಾತ್ರ

ರಾಮನಗರ: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆದ ಸರ್ಕಾರ ತಾನು ಲೂಟಿ ಹೊಡೆಯವವರ ಪರ ಎಂಬ ಸಂದೇಶ ನೀಡಿದೆ’ ಎಂದು ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಕೀಲಿಕೆ ಮಾಡಿದವರ ಹಾಗೂ ಉಪನ್ಯಾಸ ನೀಡಿದವರ ನೇತೃತ್ವದ ಸರ್ಕಾರ ಕೈಗೊಂಡಿರುವ ನಿರ್ಧಾರವಿದು. ಕಾನೂನಿಗಿಂತ ಸರ್ಕಾರವೇ ದೊಡ್ಡದು ಎಂಬುದನ್ನು ಪ್ರದರ್ಶಿಸಿದೆ’ ಎಂದರು.

‘ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳು ಕಣ್ಣ ಮುಂದಿವೆ. ಸಿಬಿಐ ತನಿಖೆ ರದ್ದು ಕೋರಿ ಶಿವಕುಮಾರ್ ಎರಡು ಸಲ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿಲ್ಲ. ಮುಖ್ಯಮಂತ್ರಿಗೆ ಇದು ಗೊತ್ತಿಲ್ಲವೆ? ಇಂತಹ ಸೂಕ್ಷ್ಮ ವಿಚಾರ ಕೋರ್ಟ್‌ನಲ್ಲಿದ್ದರೂ ಸರ್ಕಾರ ಏಕಾಏಕಿಯಾಗಿ ನಿರ್ಧಾರ ಕೈಗೊಂಡಿದ್ದು ತಪ್ಪು’ ಎಂದು ಪ್ರತಿಕ್ರಿಯಿಸಿದರು.

‘ಶಿವಕುಮಾರ್ ಈ ವಿಷಯದಲ್ಲಿ ದೊಡ್ಡತನ ತೋರಿದ್ದಾರೆ. ಸಂಪುಟ ಸಭೆಯಲ್ಲಿ ಅವರಿಗೆ ಸಂಬಂಧಿಸಿದ ಈ ವಿಷಯ ಚರ್ಚೆಗೆ ಬರುತ್ತದೆ ಎಂದು ಸಭೆಗೆ ಹೋಗಿಲ್ಲ. ಅವರ ಸಹಕಾರಕ್ಕೆ ಅಭಿನಂದಿಸಲೇಬೇಕು’ ಎಂದು ವ್ಯಂಗ್ಯವಾಡಿದರು.

‘ಮೂರು ದಿನದ ಹಿಂದೆಯೇ ಹಿರಿಯ ವಕೀಲರ ಕರೆದು, ಮುಂದೆ ಯಾವ ರೀತಿ ರಕ್ಷಣೆ ಪಡೆಯಬೇಕು ಎಂದು ಚರ್ಚಿಸಲಾಗಿದೆ. ಆಗಲೇ ಇದು, ನನ್ನ ಗಮನಕ್ಕೆ ಬಂದಿತ್ತು. ಈ ವಿಷಯ ರಾಷ್ಟ್ರಮಟ್ಟದಲ್ಲಿ, ಕಾನೂನು ತಜ್ಞರ ಮಟ್ಟದಲ್ಲಿ ಚರ್ಚೆಯಾಗಲಿದೆ’ ಎಂದು ತಿಳಿಸಿದರು.

‘ಹಿಂದಿನ ಸರ್ಕಾರವು ಸಿಬಿಐ ತನಿಖೆಗೆ ವಹಿಸಲು ಸ್ಪೀಕರ್ ಅನುಮತಿ ಪಡೆದಿರಲಿಲ್ಲ ಎನ್ನುವುದಾದರೆ, ಈಗ ವಾಪಸ್ ಪಡೆಯಲು ಸ್ಪೀಕರ್ ಅನುಮತಿ ಪಡೆದಿದ್ದಾರೆಯೇ? ಇದೆಲ್ಲಾ ಕೇವಲ ಸಬೂಬು’ ಎಂದು ಹೇಳಿದರು.

ಸಿದ್ದರಾಮಯ್ಯ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತ ರದ್ದು ಮಾಡಿ ಎಸಿಬಿ ರಚಿಸಿ ಆಗಿನ ಸರ್ಕಾರದ ಎಲ್ಲಾ ಅಕ್ರಮಗಳನ್ನು ಮುಚ್ಚಿ ಹಾಕಿದರು. ಅದರಲ್ಲಿ ನಿಪುಣರಾಗಿರುವ ಅವರು ಈಗ ಕಾನೂನು ವ್ಯವಸ್ಥೆಯಲ್ಲಿ ಹೊಸ ಹೆಜ್ಜೆ ಇಡುತ್ತಿದ್ದಾರೆ.
ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT