ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡು ಬಾರಿ ಸಿಎಂ, ಇದೀಗ ಸಚಿವ: ಕೆಂಗಲ್ ಹನುಮಂತಯ್ಯ ಹಾದಿಯಲ್ಲಿ ಎಚ್‌ಡಿಕೆ

ಮುಖ್ಯಮಂತ್ರಿ ಹುದ್ದೆ ಅಲಂಕರಿಸಿ ಕೇಂದ್ರ ಸಚಿವರಾದ ರಾಮನಗರ ಜಿಲ್ಲೆಯ ಎರಡನೇ ರಾಜಕಾರಣಿ
Published 10 ಜೂನ್ 2024, 4:49 IST
Last Updated 10 ಜೂನ್ 2024, 4:49 IST
ಅಕ್ಷರ ಗಾತ್ರ

ರಾಮನಗರ: ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಯ ರಾಜಕಾರಣಿ, ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ, ಜಿಲ್ಲೆಯ ಹೆಮ್ಮೆಯ ರಾಜಕಾರಣಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರ ಹಾದಿಯಲ್ಲಿ ಎಚ್‌ಡಿಕೆ ಸಾಗಿದ್ದಾರೆ.

ಹೌದು. ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ, ಎಚ್‌ಡಿಕೆ ಮತ್ತು ಹನುಮಂತಯ್ಯ ಅವರ ರಾಜಕೀಯ ಹಾದಿಯಲ್ಲಿ ಸ್ವಲ್ಪಮಟ್ಟಿಗೆ ಸಾಮ್ಯತೆ ಎದ್ದು ಕಾಣುತ್ತದೆ. ರಾಮನಗರವನ್ನು ತಮ್ಮ ರಾಜ್ಯ ರಾಜಕೀಯದ ಕರ್ಮಭೂಮಿ ಮಾಡಿಕೊಂಡು ಶಾಸಕರಾಗಿ ಆಯ್ಕೆಯಾಗಿದ್ದ ಇಬ್ಬರೂ, ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದವರು. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಇಬ್ಬರೂ, ಮೂರು ಸಲ ಸಂಸತ್ ಪ್ರವೇಶಿಸಿ ಕೇಂದ್ರ ಸಚಿವರಾದರು.

ಒಮ್ಮೆ ಸಿ.ಎಂ, ಎರಡು ಸಲ ಸಚಿವ: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಾಂಗ್ರೆಸ್‌ ಕಟ್ಟಾಳುವಾಗಿದ್ದ ಕೆಂಗಲ್ ಹನುಮಂತಯ್ಯ ಅವರು, 1952ರಲ್ಲಿ ಪ್ರಥಮ ಬಾರಿಗೆ ನಡೆದ ಚುನಾವಣೆಯಲ್ಲಿ ಅಂದಿನ ಮೈಸೂರು ಶಾಸನಸಭೆಗೆ ರಾಮನಗರದಿಂದ ಆಯ್ಕೆಯಾದರು. ಪ್ರಭಾವಿ ನಾಯಕರೂ ಆಗಿದ್ದ ಅವರು ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ವಿಧಾನಸೌಧದ ನಿರ್ಮಾತೃ ಎಂದೇ ಜನಪ್ರಿಯವಾಗಿರುವ ಅವರು, 1956ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು, 1957ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾದರು. ನಂತರ ಕೇಂದ್ರ ರಾಜಕಾರಣದತ್ತ ಹೊರಳಿದರು.

1962ರಲ್ಲಿ ಹನುಮಂತಯ್ಯ ಅವರು ಬೆಂಗಳೂರು ನಗರ ಲೋಕಸಭಾ ಕ್ಷೇತ್ರದಿಂದ ಮೊದಲ ಸಲ ಗೆದ್ದು ಸಂಸತ್ ಪ್ರವೇಶಿಸಿದರು. 1967ರಲ್ಲಿ ಮರು ಆಯ್ಕೆಯಾದ ಅವರು, 1970ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರದಲ್ಲಿ ಕಾನೂನು ಮತ್ತು ಸಮಾಜ ಕಲ್ಯಾಣ ಖಾತೆ ಸಚಿವರಾಗಿ ಜವಾಬ್ದಾರಿ ನಿಭಾಯಿಸಿದರು. 1971ರ ಚುನಾವಣೆಯಲ್ಲಿ ಗೆದ್ದು ಮೂರನೇ ಸಲ ಲೋಕಸಭೆ ಪ್ರವೇಶಿಸಿದ ಅವರು, ಮತ್ತೆ ಇಂದಿರಾ ಸಂಪುಟದಲ್ಲಿ ರೈಲ್ವೆ ಸಚಿವರಾದರು. ತುರ್ತು ಪರಿಸ್ಥಿತಿ ಘೋಷಣೆ ಬಳಿಕ 1977ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸೋಲನುಭವಿಸಿದರು.

ಎರಡು ಸಲ ಸಿ.ಎಂ, ಇದೀಗ ಸಚಿವ: 1996ರಲ್ಲಿ ಹಿಂದಿನ ಕನಕಪುರ (ಈಗ ಬೆಂಗಳೂರು ಗ್ರಾಮಾಂತರ) ಲೋಕಸಭಾ ಕ್ಷೇತ್ರದಿಂದ ತಮ್ಮ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲ್ಲುವುದರೊಂದಿಗೆ, ಎಚ್‌.ಡಿ. ಕುಮಾರಸ್ವಾಮಿ ಚುನಾವಣಾ ರಾಜಕೀಯ ಪ್ರವೇಶಿಸಿದರು. ಆಗ ಇವರ ತಂದೆ ಎಚ್‌.ಡಿ. ದೇವೇಗೌಡ ಅವರು ದೇಶದ ಅತ್ಯುನ್ನತ ಪ್ರಧಾನಿ ಹುದ್ದೆ ಅಲಂಕರಿಸಿದ್ದರು.

ರಾಜ್ಯ ರಾಜಕಾರಣದ ಭಾಗವಾಗಿ ತಮ್ಮ ತಂದೆ ಪ್ರತಿನಿಧಿಸುತ್ತಿದ್ದ ರಾಮನಗರದಿಂದ 2004ರಲ್ಲಿ ಸ್ಪರ್ಧಿಸಿ ಗೆಲುವುದರೊಂದಿಗೆ, ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ ಬಂದರು. ಆಗ ಅಸ್ತಿತ್ವದಲ್ಲಿದ್ದ ಎನ್. ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಅಸ್ತಿತ್ವಕ್ಕೆ ಬಂದ ಜೆಡಿಎಸ್–ಬಿಜೆಪಿ ನೇತೃತ್ವದಲ್ಲಿ 20 ತಿಂಗಳು ಮುಖ್ಯಮಂತ್ರಿಯಾಗಿದ್ದರು. ನಂತರ, 2008ರಲ್ಲಿ ಬೆಂಗಳೂರು ಗ್ರಾಮಾಂತರ (ಹಿಂದಿನ ಕನಕಪುರ) ಲೋಕಸಭಾ ಕ್ಷೇತ್ರದಿಂದ ಮತ್ತೆ ಸಂಸತ್‌ ಪ್ರವೇಶಿಸಿದರು.

ನಂತರ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾದ ಎಚ್‌ಡಿಕೆ, 2018ರಲ್ಲಿ ರಾಮನಗರ ಮತ್ತು ಚನ್ನಪಟ್ಟಣದಿಂದ ಸ್ಪರ್ಧಿಸಿ ಗೆದ್ದು ಚನ್ನಪಟ್ಟಣ ಉಳಿಸಿಕೊಂಡರು. ಆಗ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎರಡನೇ ಸಲ ಮುಖ್ಯಮಂತ್ರಿ ಹುದ್ದೆಗೇರಿದರು. 2023ರಲ್ಲಿ ಚನ್ನಪಟ್ಟಣದಿಂದ ಆಯ್ಕೆಯಾದ ಅವರು, ಶಾಸಕರಾಗಿದ್ದುಕೊಂಡೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಇದೀಗ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಕೆಂಗಲ್ ಹನುಮಂತಯ್ಯ
ಕೆಂಗಲ್ ಹನುಮಂತಯ್ಯ
ಮೋದಿ ಸಂಪುಟದಲ್ಲಿ ಮಾಜಿ ಪ್ರಧಾನಿ ಪುತ್ರ
ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಪುತ್ರನಾದ ಎಚ್.ಡಿ. ಕುಮಾರಸ್ವಾಮಿ ಅವರು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದಾರೆ. 1994ರಲ್ಲಿ ರಾಮನಗರದಿಂದ ಗೆದ್ದು ಮುಖ್ಯಮಂತ್ರಿ ಹುದ್ದೆಗೇರಿದ್ದ ದೇವೇಗೌಡರು 1996ರಲ್ಲಿ ದೇಶದ ಅತ್ಯುನ್ನತ ಪ್ರಧಾನಿ ಹುದ್ದೆ ಅಲಂಕರಿಸಿದರು. 11 ತಿಂಗಳು ಪ್ರಧಾನಿಯಾಗಿದ್ದ ಅವರು ನಂತರ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ 2002ರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಸಂಸತ್ ಪ್ರವೇಶಿಸಿದ್ದರು. ತಂದೆ ನೆರಳಿನಲ್ಲಿ ರಾಜಕಾರಣಕ್ಕೆ ಬಂದ ಕುಮಾರಸ್ವಾಮಿ ಅವರು ತಂದೆ ಪ್ರಧಾನಿಯಾಗಿದ್ದಾಗಲೇ ಮೊದಲ ಸಲ ಸಂಸದರಾಗಿದ್ದರೂ ಸಚಿವ ಸಿಕ್ಕಿರಲಿಲ್ಲ. ಇದೀಗ ತಮ್ಮ ಪಕ್ಷ ಎನ್‌ಡಿಎ ಮೈತ್ರಿಕೂಟದ ಭಾಗವಾದ ಬಳಿಕ ಮಂಡ್ಯದಿಂದ ಗೆದ್ದಿರುವ ಕುಮಾರಸ್ವಾಮಿ ಮೊದಲ ಸಲ ಕೇಂದ್ರ ಸಚಿವ ಸ್ಥಾನ ಅಲಂಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT