ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಅಪೌಷ್ಟಿಕತೆ; ಸೂಕ್ತ ಕಾಳಜಿ ಅಗತ್ಯ

Published 25 ಮೇ 2023, 5:40 IST
Last Updated 25 ಮೇ 2023, 5:40 IST
ಅಕ್ಷರ ಗಾತ್ರ

ರಾಮನಗರ: ಅಪೌಷ್ಟಿಕತೆ ಮುಖ್ಯವಾದ ಆರೋಗ್ಯ ಸಮಸ್ಯೆಯಾಗಿದ್ದು. ಎಲ್ಲ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಲ್ಲೂಕು ಅರೋಗ್ಯಾಧಿಕಾರಿ ಡಾ. ಶಶಿಕಲಾ ತಿಳಿಸಿದರು.

ತಾಲ್ಲೂಕಿನ ತೆಂಗಿನಕಲ್ಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಬೆಂಗಳೂರಿನ ದಿ ಎಕ್ಸ್‌ಪರ್ಟ್‌ ವಿಜ್ಞಾನ ಕಾಲೇಜು ಆಶ್ರಯದಲ್ಲಿ ನಡೆದಿರುವ ಎನ್‌ಎಸ್‌ಎಸ್ ಶಿಬಿರದಲ್ಲಿ ಅಪೌಷ್ಟಿಕತೆ ಮಕ್ಕಳ ಪತ್ತೆ ಹಾಗೂ ಚಿಕಿತ್ಸೆ ನಿರ್ವಹಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಪೌಷ್ಟಿಕತೆ ನಿವಾರಿಸಲು ತಾಯಿ ಹುಟ್ಟಿದ ಅರ್ಥ ಗಂಟೆಯೊಳಗೆ ಎದೆ ಹಾಲು ನೀಡಬೇಕು. 6 ತಿಂಗಳವರೆಗೆ ಎದೆ ಹಾಲು ಮಾತ್ರ ಕುಡಿಸಬೇಕು. ಜೇನು ತುಪ್ಪ, ಸಕ್ಕರೆ ನೀರು, ಬಾಟಲ್ ಹಾಲು ಕೊಡಬಾರದು. 6 ತಿಂಗಳ ನಂತರ ಎದೆ ಹಾಲಿನ ಜೊತೆಗೆ ಪೂರಕ ಆಹಾರ ನೀಡಬೇಕು. ಕನಿಷ್ಠ 2 ವರ್ಷವರೆಗೆ ಎದೆ ಹಾಲು ನೀಡುವುದರಿಂದ ಮಗು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಎನ್ಎಸ್‌ಎಸ್ ಶಿಬಿರಾರ್ಥಿಗಳಾದ ನೀವು ಮನೆಮನೆಗೆ ಭೇಟಿ ಮಾಡುವ ಸಂದರ್ಭದಲ್ಲಿ ಮಕ್ಕಳ ಸಮೀಕ್ಷೆ ನಡೆಸಿ ಅವರಲ್ಲಿ ಎತ್ತರಕ್ಕೆ ತಕ್ಕಂತೆ ತೂಕ, ವಯಸ್ಸಿಗೆ ತಕ್ಕಂತೆ ಎತ್ತರ ಹಾಗೂ ಸಾರ್ವತ್ರಿಕ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಈಗಾಗಲೇ ಎನ್.ಆರ್.ಸಿ. ಕೇಂದ್ರಗಳಲ್ಲಿ 14 ದಿನಗಳ ವರೆಗೆ ಪೌಷ್ಟಿಕ ಆಹಾರ ಮತ್ತು ಚಿಕಿತ್ಸೆ ಸೌಲಭ್ಯ ನೀಡಲಾಗುತ್ತಿದೆ. ಮಗುವನ್ನು ನೋಡಿಕೊಳ್ಳುವ ಪೋಷಕರಿಗೆ ಪ್ರತಿದಿನಕ್ಕೆ ₹259ರಂತೆ ಕೂಲಿ ನೀಡಲಾಗುತ್ತಿದ್ದು, ಮಗುವನ್ನು ಅಪೌಷ್ಟಿಕತೆಯಿಂದ ರಕ್ಷಣೆ ಮಾಡಲಾಗುತ್ತಿದೆ. 5 ವರ್ಷದೊಳಗಿನ ಮಕ್ಕಳಲ್ಲಿ ನ್ಯುಮೊನಿಯ, ಅತಿಸಾರ ಬೇದಿ ಇನ್ನಿತರೆ ಕಾಯಿಲೆಗಳು ಕಂಡುಬರುತ್ತಿದ್ದು ಇವುಗಳ ನಿಯಂತ್ರಿಸಲು ನಿರಂತರವಾಗಿ ಇಲಾಖೆವತಿಯಿಂದ ಸೇವೆ ನೀಡಲಾಗುತ್ತಿದ್ದು. ತಾವುಗಳು ಮನೆ ಭೇಟಿ ವೇಳೆ ಪೋಷಕರಿಗೆ ಅಪೌಷ್ಠಿಕತೆ ನಿಯಂತ್ರಿಸಲು ಅನುಸರಿಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಮಾತನಾಡಿ, ಆರೋಗ್ಯವಂತ ಮಗು ಪಡೆಯಬೇಕಾದರೆ ಗರ್ಭ ಧರಿಸುವ ಮೊದಲ ಹಂತದಲ್ಲಿಯೇ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಗರ್ಭಿಣಿಯಾಗಿದ್ದ ಸಮಯದಲ್ಲಿ ಸ್ಥಳೀಯವಾಗಿ ದೊರೆಯುವ ಹಸಿರು ಸೊಪ್ಪು ತರಕಾರಿ, ಕಾಳು, ಹಾಲು, ಮೊಟ್ಟೆ, ಮಾಂಸ ಇತ್ಯಾದಿಗಳನ್ನು ಸಮರ್ಪಕವಾಗಿ ಸೇವಿಸಬೇಕು. ಮಕ್ಕಳ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ರುಕ್ಮಣಿ ಮಾತನಾಡಿ, ಇಲಾಖೆ ವತಿಯಿಂದ ತಾಯಿ ಕಾರ್ಡ್ ವಿತರಿಸಿ ನಿಯಮಾನುಸಾರ ಗರ್ಭಿಣಿ ತಪಾಸಣೆ, ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ರಕ್ತ ಹೀನತೆ ನಿಯಂತ್ರಿಸಲು ಕಬ್ಬಿಣಾಂಶದ ಮಾತ್ರೆ ನೀಡಲಾಗುತ್ತದೆ. ಮಕ್ಕಳಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಕಾಲ-ಕಾಲಕ್ಕೆ ಲಸಿಕೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಮನೆಗೆ ಭೇಟಿ ನೀಡುವ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಸೇವೆ ಪಡೆದುಕೊಳ್ಳುವಂತೆ ತಿಳಿಸಬೇಕು ಎಂದರು.

ವೈದ್ಯಾಧಿಕಾರಿ ಡಾ. ಸುನಿಲ್, ಎನ್.ಎಸ್.ಎಸ್. ಅಧಿಕಾರಿ ಪ್ರೊ. ಮರಿಸ್ವಾಮಿ, ಆರೋಗ್ಯ ನಿರೀಕ್ಷಣಾಧಿಕಾರಿ ರಾಜೇಶ್, ಆಶಾ ಕಾರ್ಯಕರ್ತೆ ಭಾಗ್ಯಮ್ಮ, ಎನ್‌ಎಸ್‌ಎಸ್‌ ಶಿಬಿರಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT