ಶನಿವಾರ, ಅಕ್ಟೋಬರ್ 1, 2022
20 °C
ಬೀನ್ಸ್ , ಮೆಣಸಿನಕಾಯಿ ದುಬಾರಿ; ಅತಿ ಅಗ್ಗವಾದ ಟೊಮೆಟೊ

ಅತಿವೃಷ್ಟಿ; ತರಕಾರಿ ಬೆಲೆ ಏರಿಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ನಿರಂತರ ಮಳೆಯ ಪರಿಣಾಮ ಮಾರುಕಟ್ಟೆಗೆ ತರಕಾರಿ ಆವಕದಲ್ಲಿ ವ್ಯತ್ಯಯ ಆಗುತ್ತಿದ್ದು, ಧಾರಣೆಯಲ್ಲೂ ಏರಿಳಿತ ಕಾಣತೊಡಗಿದೆ.

ಟೊಮೆಟೊ ಧಾರಣೆ ಮತ್ತೆ ಪಾತಾಳಕ್ಕೆ ಇಳಿಯತೊಡಗಿದ್ದು, ಇದರಿಂದ ಗ್ರಾಹಕರು ಹಿಗ್ಗಿದರೆ ರೈತರು ನಷ್ಟ ಅನುಭವಿಸುವಂತೆ ಆಗಿದೆ. ಸಗಟು ದರದಲ್ಲಿ ಟೊಮೆಟೊ ಪ್ರತಿ ಕೆ.ಜಿ.ಗೆ ₹5ಕ್ಕೆ ಕುಸಿತ ಕಂಡಿದೆ. ಮಾರುಕಟ್ಟೆಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಉತ್ಪನ್ನ ಆವಕ ಆಗತೊಡಗಿದೆ.

ಬೀನ್ಸ್‌ ಅರ್ಥಾತ್‌ ಹುರುಳಿಕಾಯಿ ಧಾರಣೆಯು ಕಳೆದ ಕೆಲವು ವಾರಗಳಿಂದಲೂ ಗಗನಮುಖಿಯಾಗಿಯೇ ಇದ್ದು, ನಾಟಿ ಹಾಗೂ ಊಟಿ ಬೀನ್ಸ್ ಎರಡೂ ಬಗೆಯ ಉತ್ಪನ್ನ ಮಾರುಕಟ್ಟೆಗೆ ಬರುತ್ತಿದೆ. ಸ್ಥಳೀಯವಾಗಿ ಬೆಳೆಯುವ ನಾಟಿ ಹುರುಳಿಕಾಯಿ ಪ್ರತಿ ಕೆ.ಜಿ.ಗೆ ₹30–40ರವರೆಗೆ ಬೆಲೆ ಇದೆ.

ಶುಭ ಸಮಾರಂಭಗಳ ಹಿನ್ನೆಲೆಯಲ್ಲಿ ನುಗ್ಗೆ, ದಪ್ಪ ಮೆಣಸಿನಕಾಯಿಗೆ ಬೇಡಿಕೆ ಕುದುರಿದ್ದು, ನಿಧಾನವಾಗಿ ಬೆಲೆಯೂ ಏರತೊಡಗಿದೆ. ದಪ್ಪ ಮೆಣಸಿನಕಾಯಿ ಅರ್ಧ ಶತಕದಲ್ಲೇ ಮುಂದುವರಿದಿದ್ದು, ಗುಣಮಟ್ಟದ ಉತ್ಪನ್ನ ಮಾರುಕಟ್ಟೆಯಲ್ಲಿದೆ. ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಬೀಟ್‌ರೂಟ್, ಬೆಂಡೆ, ಮೂಲಂಗಿ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ.

ಸೊಪ್ಪಿನ ದರ ಏರಿಕೆ ಸಾಧ್ಯತೆ: ನಿರಂತರ ಮಳೆಯ ಕಾರಣಕ್ಕೆ ಗುಣಮಟ್ಟದ ಸೊಪ್ಪು ಮಾರುಕಟ್ಟೆಗೆ ಬರುತ್ತಿಲ್ಲ. ಸದ್ಯ ಬೆಲೆ ಅಗ್ಗವಾಗಿಯೇ ಇದೆ. ಮಳೆ ಮುಂದುವರಿದಲ್ಲಿ ಧಾರಣೆ ಏರುವ ಸಾಧ್ಯತೆ ಇದೆ. ಸದ್ಯ ಕೊತ್ತಂಬರಿ ಫಾರಂ ಪ್ರತಿ ಕಂತೆಗೆ (ದಪ್ಪ) ₹10, ನಾಟಿ ಕೊತ್ತಂಬರಿ–20, ಮೆಂತ್ಯ–20, ಸಬ್ಬಸ್ಸಿಗೆ, ಕೀರೆ, ಕಿಲ್‌ಕೀರೆ, ದಂಟು ₹10ರಂತೆ ಮಾರಾಟ ನಡೆದಿದೆ.

ಮಳೆಯಿಂದಾಗಿ ತರಕಾರಿ ಧಾರಣೆಯಲ್ಲೂ ವ್ಯತ್ಯಾಸ ಆಗುತ್ತಿದೆ. ಟೊಮೆಟೊ ಅತ್ಯಂತ ಅಗ್ಗವಾಗಿದ್ದು, ಉಳಿದವುಗಳ ಬೆಲೆಯಲ್ಲಿ ಅಲ್ಪ ವ್ಯತ್ಯಾಸವಾಗಿದೆ
ರಮೇಶ್‌
ತರಕಾರಿ ವರ್ತಕ, ರಾಮನಗರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು