ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ ಸವಾರರು ಹೆಲ್ಮೆಟ್ ಧರಿಸದೆ ಓಡಾಡಿದರೆ ದಂಡ ಖಾಯಂ ಎಚ್ಚರ!

ಜನರಲ್ಲಿ ಅರಿವು ಮೂಡಿಸಲು ರಸ್ತೆಗೆ ಇಳಿಯಲಿದ್ದಾರೆ ಪೊಲೀಸರು
Last Updated 13 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಇನ್ನು ಮುಂದೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೇ ಓಡಾಡುವಂತೆ ಇಲ್ಲ. ಮುಂಬದಿ, ಹಿಂಬದಿ ಸವಾರರಿಬ್ಬರಿಗೂ ಹೆಲ್ಮೆಟ್‌ ಧರಿಸುವುದು ಕಡ್ಡಾಯ ಆಗಲಿದ್ದು, ನಿಯಮ ಉಲ್ಲಂಘಿಸಿದವರಿಗೆ ದಂಡ ಬೀಳಲಿದೆ.

ಜಿಲ್ಲೆಗೆ ಹೊಸತಾಗಿ ಬಂದಿರುವ ಪೊಲೀಸ್‌ ವರಿಷ್ಠಾಧಿಕಾರಿ ಅನೂಪ್‌ ಶೆಟ್ಟಿ ಇಲ್ಲಿನ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಹಲವು ಬದಲಾವಣೆಗಳನ್ನು ತರುತ್ತಿದ್ದಾರೆ. ಅದರ ಭಾಗವಾಗಿ ಹೆಲ್ಮೆಟ್‌ ಕಡ್ಡಾಯ ನಿಯಮ ಅನುಷ್ಠಾನಗೊಳ್ಳುತ್ತಿದೆ.

ಸರ್ಕಾರವು ಈಗಾಗಲೇ ರಾಜ್ಯದಲ್ಲಿ ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಆದರೆ ಜಿಲ್ಲಾ ಕೇಂದ್ರವಾದ ರಾಮನಗರವೂ ಸೇರಿದಂತೆ ಇಲ್ಲಿ ಎಲ್ಲಿಯೂ ನಿಯಮ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಅಪಘಾತಗಳ ನಿಯಂತ್ರಣ: ಜಿಲ್ಲೆಯಲ್ಲಿ ಸಂಭವಿಸುವ ಬೈಕ್‌ ಅಪಘಾತಗಳ ಪೈಕಿ ಹೆಚ್ಚಿನ ಮಂದಿ ತಲೆ ಭಾಗಕ್ಕೆ ಏಟು ತಿಂದು ಮೃತಪಡುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸುಮಾರು 300 ಮಂದಿ ಇಂತಹ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಹೆಲ್ಮೆಟ್‌ ಧರಿಸದೇ ಸಾವಿಗೀಡಾದವರ ಸಂಖ್ಯೆ ಶೇ 40ರಷ್ಟು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ಪೊಲೀಸರು.

ಮೊದಲ ಪಾಠ, ನಂತರ ದಂಡ: ಮೊದಲಿಗೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಹೆಲ್ಮೆಟ್‌ ಬಳಕೆಯ ಪ್ರಯೋಜನ ಕುರಿತು ಪೊಲೀಸ್‌ ಸಿಬ್ಬಂದಿ ಅರಿವು ಮೂಡಿಸಲಿದ್ದಾರೆ. ಹಳ್ಳಿಗಳ ರಸ್ತೆಗಳಲ್ಲೂ ಕಾರ್ಯಾಚರಣೆ ನಡೆಸಿ ಬೈಕ್‌–ಸ್ಕೂಟರ್‌ ಸವಾರರಿಗೆ ತಿಳಿಹೇಳಲಿದ್ದಾರೆ. ನಂತರದಲ್ಲಿ ನಿಯಮ ಉಲ್ಲಂಘಿಸಿದವರಿಗೆ ದಂಡ ಬೀಳಲಿದೆ.

ಹೆಲ್ಮೆಟ್‌ ಧರಿಸದೇ ಸಿಕ್ಕಿಬೀಳುವವರಿಗೆ ಮೊದಲ ಬಾರಿಗೆ ಕನಿಷ್ಠ ದಂಡದೊಂದಿಗೆ ಅರಿವು ಮೂಡಿಸಲಿರುವ ಪೊಲೀಸರು ಪದೇ ಪದೇ ನಿಯಮ ಉಲ್ಲಂಘಿಸುವವರಿಗೆ ಹೆಚ್ಚಿನ ದಂಡದ ಜೊತೆಗೆ ವಾಹನ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲು ಶಿಫಾರಸು ಮಾಡಲಿದ್ದಾರೆ. ವಾಹನ ಸವಾರರು ಐಎಸ್‌ಐ ಗುಣಮಟ್ಟ ಮುದ್ರೆ ಹೊಂದಿರುವ ಹೆಲ್ಮೆಟ್‌ ಬಳಸುವುದು ಕಡ್ಡಾಯ ಆಗಲಿದೆ.

ಭ್ರಷ್ಟಾಚಾರ ನಿಯಂತ್ರಣಕ್ಕೆ ಒತ್ತು: ನೂತನ ಎಸ್ಪಿ ಅನೂಪ್‌ ಶೆಟ್ಟಿ ಪೊಲೀಸ್‌ ಇಲಾಖೆಯೊಳಗೂ ಕೆಲವು ಬದಲಾವಣೆಗಳನ್ನು ತರುತ್ತಿದ್ದಾರೆ.

ಇನ್ನು ಮುಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾರ್ಯಾಚರಣೆಗೆ ಇಳಿಯುವ ಪೊಲೀಸರು ತಮ್ಮಲ್ಲಿನ ಹಣವನ್ನು ಠಾಣೆಯಲ್ಲಿ ಇಟ್ಟು ಖಾಲಿ ಜೇಬಿನಲ್ಲಿ ರಸ್ತೆಗೆ ಇಳಿಯಬೇಕು. ಸಂಜೆ ಮನೆಗೆ ಹೋಗುವಾಗ ಹಣ ವಾಪಸ್ ಒಯ್ಯಬೇಕು. ನಡುವೆ ಜೇಬಿನಲ್ಲಿ ಹಣ ಇಟ್ಟುಕೊಳ್ಳುವಂತೆ ಇಲ್ಲ. ಪರಿಶೀಲನೆ ವೇಳೆ ಅವರಲ್ಲಿ ಹಣ ಕಂಡುಬಂದಲ್ಲಿ ಕ್ರಮ ಜರುಗಿಸುವುದಾಗಿಯೂ ಎಸ್ಪಿ ತಮ್ಮ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

**
ಬೀಳಲಿದೆ ಭಾರಿ ದಂಡ
ಮೋಟಾರ್‌ ವಾಹನ ಕಾಯ್ದೆ ತಿದ್ದುಪಡಿ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಈಗ ನಿಯಮ ಉಲ್ಲಂಘಿಸುವವರಿಗೆ ಭಾರಿ ದಂಡವೇ ಬೀಳಲಿದೆ.

ಪರವಾನಗಿ ಇಲ್ಲದೇ ವಾಹನ ಚಲಾಯಿಸುವವರಿಗೆ ವಿಧಿಸಲಾಗುವ ದಂಡವು ₹500ರಿಂದ ₹5 ಸಾವಿರಕ್ಕೆ ಏರಿದೆ. ಪರವಾನಗಿ ಅವಧಿ ಮುಗಿದಿದ್ದರೂ ಚಾಲನೆ ಮಾಡುವವರಿಗೆ ₹10 ಸಾವಿರದವೆಗೂ ದಂಡ ವಿಧಿಸಬಹುದಾಗಿದೆ. ವೇಗದ ಚಾಲನೆ ಮಾಡುವವರಿಗೆ ₹1ಸಾವಿರ, ಮದ್ಯ ಸೇವಿಸಿ ಚಾಲನೆ ಮಾಡುವವರಿಗೆ ₹10 ಸಾವಿರದವರೆಗೂ ದಂಡ ವಸೂಲಿ ಮಾಡಲು ಅವಕಾಶ ಇದೆ. ಅಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಡುವ ಪೋಷಕರಿಗೆ ಜೈಲು ಶಿಕ್ಷೆ ಕಾದಿದೆ.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT