ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ವೈದ್ಯಕೀಯ ಆಮ್ಲಜನಕಕ್ಕೆ ಭಾರಿ ಬೇಡಿಕೆ

ಜಿಲ್ಲೆಯ ಆಸ್ಪತ್ರೆಗಳಿಗೆ ಬಿಡದಿಯ ಕಾರ್ಖಾನೆಯೊಂದರಿಂದ ಸಿಲಿಂಡರ್‌ ಪೂರೈಕೆ
Last Updated 4 ಮೇ 2021, 5:02 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಕೋವಿಡ್‌ ರೋಗಿಗಳಿಗೆಂದು ಮೀಸಲಿಟ್ಟ 500 ಆಕ್ಸಿಜನ್‌ ಹಾಸಿಗೆಗಳೂ ಭರ್ತಿ ಆಗಿದ್ದು, ಆಮ್ಲಜನಕ ಸಿಲಿಂಡರ್‌ಗಳಿಗೆ ಭಾರಿ ಬೇಡಿಕೆ ಇದೆ.

ಜಿಲ್ಲೆಯ ರೋಗಿಗಳಿಗೆಂದು ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 600ಕ್ಕೂ ಹೆಚ್ಚು ಬೆಡ್‌ಗಳನ್ನು ಮೀಸಲಿಡಲಾಗಿತ್ತು. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸದ್ಯ ಈ ಸಂಖ್ಯೆಯನ್ನು 200ಕ್ಕೆ ಇಳಿಸಲಾಗಿದೆ. ಇಷ್ಟಕ್ಕೂ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ. ಇದಲ್ಲದೆ ಹಾರೋಹಳ್ಳಿಯ ದಯಾನಂದ ಸಾಗರ್ ಆಸ್ಪತ್ರೆಯ 130, ಜಿಲ್ಲಾ ಕೋವಿಡ್ ಆಸ್ಪತ್ರೆಯ 100 ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ 25–50 ಹಾಸಿಗೆಗಳಿಗೆ ಆಮ್ಲಜನಕ ವ್ಯವಸ್ಥೆ ಇದೆ.

ಕಂದಾಯ ಭವನದ ಕೋವಿಡ್ ರೆಫರಲ್‌ ಆಸ್ಪತ್ರೆಯಲ್ಲಿ ತಲಾ 8 ಸಿಲಿಂಡರ್‌ ಸಾಮರ್ಥ್ಯದ ಮೂರು ಆಕ್ಸಿಜನ್ ಟ್ಯಾಂಕರ್‌ಗಳಿವೆ. ಇದರಲ್ಲಿ ಭರ್ತಿಯಾದ ಒಂದು ಟ್ಯಾಂಕರ್‌ನಿಂದ ನಿರಂತರವಾಗಿ ರೋಗಿಗಳಿಗೆ ಆಮ್ಲಜನಕ ಪೂರೈಕೆ ಆಗುತ್ತಿರುತ್ತದೆ. ಉಳಿದೆರಡು ಟ್ಯಾಂಕರ್‌ಗಳಲ್ಲಿ ಒಂದು ಖಾಲಿಯಾಗುತ್ತದ್ದಂತೆ ಹೊಸ ಸಿಲಿಂಡರ್‌ಗಳಿಗೆ ಬೇಡಿಕೆ ಹೋಗುತ್ತದೆ. ಒಂದನ್ನು ಕಾಯ್ದಿರಿಸಲಾಗಿರುತ್ತದೆ. ದಿನಕ್ಕೆ ಇಂತಿಷ್ಟೇ ಸಿಲಿಂಡರ್‌ ಬಳಕೆ ಆಗುತ್ತದೆ ಎಂದು ಹೇಳಲು ಆಗದು ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು.

ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಗೆ ಹಾಗೂ ಹಾರೋಹಳ್ಳಿಯ ದಯಾನಂದ ಸಾಗರ್‌ ಆಸ್ಪತ್ರೆಗೆ ಬೆಂಗಳೂರಿನ ಖಾಸಗಿ ಕಂಪನಿಯೊಂದು ಲಿಕ್ವಿಡ್‌ ಆಕ್ಸಿಜನ್‌ ಪೂರೈಕೆ ಮಾಡುತ್ತಿದೆ. ಇನ್ನುಳಿದಂತೆ ರಾಮನಗರದ ಕೋವಿಡ್‌ ರೆಫರಲ್‌ ಆಸ್ಪತ್ರೆಗೆ ಸರಾಸರಿ 100 ಹಾಗೂ ಉಳಿದ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ 50ರಂತೆ ದಿನಕ್ಕೆ ಒಟ್ಟು 250–300 ಸಿಲಿಂಡರ್‌ಗಳ ಅಗತ್ಯ ಇದೆ.

ಬಿಡದಿಯಲ್ಲಿ ಇರುವ ಬೆನ್‌ಟ್ಲ್ಯೇ ಎಂಬ ಕಂಪನಿಯು ಆಕ್ಸಿಜನ್ ಸಿಲಿಂಡರ್‌ ಮರುಪೂರಣ ಕೆಲಸ ಮಾಡುತ್ತಿದೆ. ಇದು ದಿನವೊಂದಕ್ಕೆ 450ರಷ್ಟು ಸಿಲಿಂಡರ್‌ಗಳನ್ನು ರೀಫಿಲ್‌ ಮಾಡುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಜಿಲ್ಲೆಗೆ ನಿತ್ಯ 250 ಜಂಬೋ ಸಿಲಿಂಡರ್‌ಗಳನ್ನು ಒದಗಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಂಪನಿಯ ಉತ್ಪಾದನಾ ಚಟುವಟಿಕೆಗಳಿಗೆ ತೊಡಕಾಗದಂತೆ ಬೆಸ್ಕಾನಿಂದ ಪ್ರತ್ಯೇಕ ವಿದ್ಯುತ್‌ ಪೂರೈಕೆ ಸಂಪರ್ಕವನ್ನೂ ನೀಡಲಾಗಿದೆ.

‘ಪ್ರಸ್ತುತ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಆಕ್ಸಿನರೇಟರ್ ವ್ಯವಸ್ಥೆ ಇದೆ. ಜೊತೆಗೆ ಹೊಸತಾಗಿ ನಿರ್ಮಾಣ ಆಗುತ್ತಿರುವ ಜಿಲ್ಲಾ ಆಸ್ಪತ್ರೆಯಲ್ಲಿ 125 ಆಕ್ಸಿನರೇಟರ್ ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೆನ್‌ಟ್ಲ್ಯೇ ಕಂಪನಿ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡುತ್ತಿದ್ದು, ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ’ ಎನ್ನುತ್ತಾರೆ ಡಿಎಚ್‌ಒ ಡಾ.ನಿರಂಜನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT