ಶುಕ್ರವಾರ, ಜನವರಿ 22, 2021
20 °C

ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ: ಎಚ್‌.ಡಿ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ‘ಯಾರನ್ನಾದರೂ ಮಂತ್ರಿ ಮಾಡಲಿ. ಅದಕ್ಕೆ ನಾನು ಹೆದರಿಕೊಳ್ಳುವ ವ್ಯಕ್ತಿಯಲ್ಲ. ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ’ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಮ್ಮ ಜಿಲ್ಲೆಯ ನಾಲ್ವರನ್ನು ಮಂತ್ರಿ ಮಾಡಲಿ. ಯಾರನ್ನು ಮಂತ್ರಿ ಮಾಡಬೇಡಿ ಎಂದು ಹೇಳುವಷ್ಟು ಕೀಳುಮಟ್ಟಕ್ಕೆ ನಾನು ಇಳಿಯುವುದಿಲ್ಲ’ ಎಂದರು.

‘ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ. ಯಾರನ್ನೋ ಮಂತ್ರಿ ಮಾಡಬೇಡಿ ಎಂದು ಹೇಳುವುದಕ್ಕಲ್ಲ. ಬಡವರ ಭೂಮಿ ಕಬಳಿಸಲು ಹೊರಟವರು ಮಂತ್ರಿಯಾಗಲು ಹೊರಟಿದ್ದಾರೆ. ಇಲ್ಲಿ ಯಾರೋ ಮಂತ್ರಿಯಾದರೆ ಹೆದರಿಕೊಂಡು ಹೋಗುವ ಜಾಯಮಾನ ನನ್ನದಲ್ಲ’ ಎಂದರು.

‘ನನ್ನ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆಗೊಳಿಸುವ ಸಂಬಂಧ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದೇನೆ. ಅದರ ಹೊರತು ರಾಜಕೀಯವಾಗಿ ಯಾವುದೇ ವಿಚಾರವನ್ನು ಚರ್ಚಿಸಿಲ್ಲ. ಮಂತ್ರಿ ಮಾಡಬೇಡಿ ಎಂದು ಹೇಳಲು ನಾನು ಭೇಟಿಯಾಗಿದ್ದೇನೆ ಎಂದು ಕೆಲವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಅವರು ಮಂತ್ರಿಯಾದರೇನು ಬಿಟ್ಟರೇನು. ನನ್ನ ಕೆಲಸ ನಾನು ಮಾಡುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರ ಹೆಸರು ಪ್ರಸ್ತಾಪಿಸದೆ ಹರಿಹಾಯ್ದರು.

ವಿವಾದಾತ್ಮಕ ವಿಚಾರಕ್ಕೆ ತಲೆಹಾಕುವುದಿಲ್ಲ

‘ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರ್ಪಡೆ ಮಾಡಲು ಶಿಫಾರಸು ಮಾಡುವ ವಿಚಾರದ ಬಗ್ಗೆ ಚರ್ಚೆ ಮಾಡುವುದಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

‘ರಾಜಕೀಯವಾಗಿ ನಡೆಯುತ್ತಿರುವ ಈಗಿನ ಪ್ರಸಂಗಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಮೀಸಲಾತಿ ಕಲ್ಪಿಸುವುದು ಹಾಗೂ ನಿಗಮ ರಚನೆ ಮಾಡುವುದು ಅವರವರ ಇಚ್ಛೆ. ಪ್ರತಿ ಕುಟುಂಬಕ್ಕೂ ವಸತಿ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಕಲ್ಪಿಸುವುದು ಸರ್ಕಾರದ ಕೆಲಸ. ಸ್ವಾರ್ಥಕ್ಕಾಗಿ ಮಾಡುತ್ತಿರುವ ವಿವಾದಾತ್ಮಕ ವಿಚಾರಕ್ಕೆ ತಲೆಹಾಕುವುದಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು