ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಸೂಪರ್‌ ಸಿಎಂ ಅಲ್ಲ: ಬಿ.ವೈ. ವಿಜಯೇಂದ್ರ ಸ್ಪಷ್ಟನೆ

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟನೆ
Last Updated 8 ಫೆಬ್ರುವರಿ 2021, 2:30 IST
ಅಕ್ಷರ ಗಾತ್ರ

ಮಾಗಡಿ: ‘ವೀರಶೈವ ಮಠಾಧೀಶರು ಮತ್ತು ನಮ್ಮ ಸಮಾಜದವರ ಬೆಂಬಲದಿಂದ ಹಲವು ಅಡೆತಡೆಗಳ ನಡುವೆಯೂ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಸಿದ್ದಲಿಂಗೇಶ್ವರರ ಮೂರನೇ ವರ್ಷದ ಜಯಂತ್ಯುತ್ಸವ ಮತ್ತು ಶಿವಕುಮಾರ ಸ್ವಾಮೀಜಿ ಅವರ ಎರಡನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾಧ್ಯಮಗಳು ನನ್ನನ್ನು ಸೂಪರ್ ಸಿಎಂ ಎಂದು ಬಿಂಬಿಸುತ್ತಿವೆ. ಆದರೆ, ನಾನೂ ಮುಖ್ಯಮಂತ್ರಿ ಹುದ್ದೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ನಾನು ಒಬ್ಬ ಬಿಜೆಪಿ ಕಾರ್ಯಕರ್ತ ಅಷ್ಟೇ’ ಎಂದು ಸ್ಪಷ್ಟಪಡಿಸಿದರು.

ರೈತರ ಕಣ್ಣೀರು ಒರೆಸಲು ಹಳ್ಳಿಗಳನ್ನು ಸುತ್ತಿದ್ದ ಯಡಿಯೂರಪ್ಪ ಅವರು ಒಂದು ಜಾತಿಗೆ ಸೀಮಿತರಾಗದೆ ಎಲ್ಲಾ ಜಾತಿಯ ಮಠಮಾನ್ಯಗಳಿಗೆ ಅನುದಾನ ನೀಡಿದರು. ಬಡವರ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆ, 108 ಆಂಬುಲೆನ್ಸ್ ಸೇವೆ ಒದಗಿಸಿದ್ದಾರೆ ಎಂದು ಹೇಳಿದರು.

ತಂದೆಯವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೆಲವರು ಕಪಿಚೇಷ್ಠೆ ಮಾಡಿ ರಾಜೀನಾಮೆ ಕೊಡಿಸಿದರು. ಕುತಂತ್ರಿಗಳ ಷಡ್ಯಂತರ ಭೇದಿಸಲು ಅಂದೆ ಪ್ರತಿಜ್ಞೆ ಕೈಗೊಂಡೆ. ಯಡಿಯೂರಪ್ಪ ಅವರ ಮೇಲೆ 30 ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದರು. ನಾನು ಕಾನೂನು ಪದವೀಧರ. ಪ್ರಾಕ್ಟೀಸ್ ಮಾಡಿಲ್ಲ. ಆದರೂ ಎಲ್ಲಾ ಕೇಸ್‌ಗಳನ್ನು ತೊಡೆದು ಹಾಕಿದೆ. ನನ್ನ ತಂದೆಯವರು ಶ್ರೀಗಳು ತಲೆತಗ್ಗಿಸುವಂತಹ ಕೆಲಸ ಮಾಡಿಲ್ಲ ಎಂದರು.

ಶಿವಕುಮಾರ ಸ್ವಾಮೀಜಿ ಜನಿಸಿದ್ದ ವೀರಾಪುರದ ಮತ್ತು ಬಾಲಗಂಗಾಧರನಾಥ ಸ್ವಾಮೀಜಿ ಅವರ ಬಾನಂದೂರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಅವರು ಹಣ ಮಂಜೂರು ಮಾಡಿದ್ದಾರೆ. ಮೇಕೆದಾಟು ಮತ್ತು ಶ್ರೀರಂಗ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ನೀರಾವರಿಗೆ ಅನುಕೂಲ ಮಾಡಲಾಗುವುದು ಎಂದು ತಿಳಿಸಿದರು.

ಕೆಂಪೇಗೌಡ ಸರ್ಕಲ್‌ನಿಂದ ವೀರಶೈವ ಲಿಂಗಾಯತ ಸಮುದಾಯದವರು ಕೆ.ಪಿ. ಮಹದೇವ ಶಾಸ್ತ್ರಿ ನೇತೃತ್ವದಲ್ಲಿ ಭಾರಿ ಗಾತ್ರದ ಸೇಬು ಹಣ್ಣಿನ ಹಾರವನ್ನು ಕ್ರೇನ್ ಮೂಲಕ ವಿಜಯೇಂದ್ರ ಅವರ ಕೊರಳಿಗೆ ಹಾಕಿಸಿ ಗೌರವಿಸಿದರು. ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠಾಧೀಶ ಸಿದ್ದಲಿಂಗ ಸ್ವಾಮೀಜಿ, ಮೇಲಣಗವಿ ಮಠದ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎ. ಮಂಜುನಾಥ, ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಶಂಕರ್‌ ಬಿದರಿ, ಕೆಆರ್‌ಐಡಿಎಲ್‌ ಅಧ್ಯಕ್ಷ ಎಂ. ರುದ್ರೇಶ್‌ ಇದ್ದರು.

ಅಕ್ಕನ ಬಳಗದವರು ವಚನ ಗಾಯನ ನಡೆಸಿಕೊಟ್ಟರು. ಕಲ್ಯಾಬಾಗಿಲು ವಿನಾಯಕ ದೇವಾಲಯದಿಂದ ಕೆಂಪೇಗೌಡ ಸರ್ಕಲ್, ಡ್ಯೂಮ್ ಲೈಟ್ ಸರ್ಕಲ್‌ವರೆಗೆ ಸಿದ್ದಲಿಂಗೇಶ್ವರ ಸ್ವಾಮಿಯ ಅಲಂಕೃತ ಪುತ್ಥಳಿಯ ಮೆರವಣಿಗೆ ನಡೆಯಿತು. ಬಸವಣ್ಣ ಪ್ರತಿಮೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವೀರಶೈವ ಲಿಂಗಾಯತ ಸಮಾಜದವರು
ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT