ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲದಲ್ಲೇ ಕೊಳೆತ ಮಾವು, ಹಲಸು

ನೆರವಿಗೆ ಬಾರದ ಜನಪ್ರತಿನಿಧಿಗಳು: ಮಾಗಡಿ ತಾಲ್ಲೂಕಿನ ಬೆಳೆಗಾರರ ಆಕ್ರೋಶ
Last Updated 31 ಮೇ 2021, 2:32 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನಲ್ಲಿ ಲಾಕ್‌ಡೌನ್‌ ಜಾರಿಯಿಂದಾಗಿ ಮಾವು, ಹೂವು, ಬಾಳೆಹಣ್ಣು, ತರಕಾರಿ ಬೆಳೆದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಗೋಳು ಕೇಳುವವರಿಲ್ಲದಂತಾಗಿದೆ. ಬೆಳೆಗಾರರಿಗೆ ನಷ್ಟ ಉಂಟಾಗಿದ್ದು, ಸಂಬಂಧಪಟ್ಟ ಇಲಾಖೆಗಳು ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ

‘ಜನಪ್ರತಿನಿಧಿಗಳಿಗೆ ಸಂಕಟದಲ್ಲಿ ಇರುವ ಅನ್ನದಾತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟರೆ ರಚನಾತ್ಮಕವಾಗಿ ಯೋಜನೆ ರೂಪಿಸುತ್ತಿಲ್ಲ. ಜಾಗತಿಕ ಕೋವಿಡ್‌ ಸೋಂಕು ರೈತರನ್ನು ಪ್ರಪಾತಕ್ಕೆ ತಳ್ಳಿದೆ. ಕಟಾವಿಗೆ ಬಂದಿರುವ ಬಾಳೆ, ಹಲಸು, ಮಾವಿನ ಹಣ್ಣನ್ನು ಕೀಳುವುದಕ್ಕೆ ಕೃಷಿ ಕೂಲಿಕಾರ್ಮಿಕರು ಬರುತ್ತಿಲ್ಲ. ಮರದಲ್ಲಿಯೇ ಹಣ್ಣುಗಳು ಕೊಳೆಯಲಾರಂಭಿಸಿವೆ’ ಎಂದು ಭಾನುವಾರದ ವಿಠಲಾಪುರದ ಪ್ರಗತಿಪರ ರೈತ ಚಂದ್ರಶೇಖರ್ ಭಟ್ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

ಮರದಿಂದ ಕಿತ್ತು ಮಾರುಕಟ್ಟೆಗೆ ಕೊಂಡೊಯ್ಯಲು ವಾಹನ ಸಂಚಾರವಾಗಲಿ, ಮಾರುಕಟ್ಟೆಯ ಸವಲತ್ತುಗಳಾಗಲಿ ಇಲ್ಲ. ಕಷ್ಟಪಟ್ಟು ಬೆಳೆದು ಫಸಲು ಕಣ್ಣೆದುರಿನಲ್ಲಿಯೇ ಕೊಳೆಯುವುದನ್ನು ನೋಡಲಾಗದೆ ತಳಮಳ ಉಂಟಾಗುತ್ತಿದೆ. ತಾಲ್ಲೂಕಿನಲ್ಲಿ ಮಾವು, ಹೂವು, ಹಲಸು, ಬಾಳೆಹಣ್ಣು ಬೆಳೆಗಾರರಿಗೆ ಸರ್ಕಾರಿ ಅಧಿಕಾರಿಗಳಿಂದ ಯಾವುದೇ ಸಹಾಯ ದೊರೆತಿಲ್ಲ. ರೈತರು ಮೂಕವೇದನೆ ಅನುಭವಿಸುತ್ತಿದ್ದೇವೆ ಎಂದರು.

ಸಾಲ ಮಾಡಿ ಬೆಳೆ ಬೆಳೆಯುವ ರೈತರ ಭವಣೆ ನೀಗುವುದು ಕನಸಿನ ಮಾತಾಗಿದೆ. ಹಿಂದೆ ಮಾವು ಮತ್ತು ಹಲಸಿನ ಹಣ್ಣುಗಳನ್ನು ಖಾಸಗಿ ವ್ಯಕ್ತಿಗಳು ಒಟ್ಟಾರೆ ರೈತರಿಂದ ಖರೀದಿಸಿ, ಮುಂಬೈಗೆ ಕಳಿಸುತ್ತಿದ್ದರು. ಮಾವಿನ ತೋಟಗಳನ್ನು ಮೊದಲೇ ಖರೀದಿಸಿ, ರೈತರ ನೆರವಿಗೆ ಮುಂದಾಗಿದ್ದರು. ಲಾಕ್‌ಡೌನ್‌ನಿಂದಾಗಿ ಖಾಸಗಿ ವ್ಯಕ್ತಿಗಳು ಈ ವರ್ಷ ಮಾವು, ಹಲಸು, ಬಾಳೆ ಹಣ್ಣನ್ನು ಖರೀದಿಸುತ್ತಿಲ್ಲ ಎಂದರು.

ಎಪಿಎಂಸಿ ಮಾರುಕಟ್ಟೆ ಇಲ್ಲದೆ ರೈತರು ಬೆಳೆದ ಬೆಳೆಗಳನ್ನು ಕೊಳ್ಳುವ ದಳ್ಳಾಳಿಗಳಿಗೆ ಅವರ ಕೇಳಿದಷ್ಟು ಬೆಲೆಗೆ ಕೊಡುವುದು ನಡೆದಿದೆ. ರಾಜಧಾನಿಗೆ ಕೇವಲ ಕೂಗಳತೆಯ ದೂರದಲ್ಲಿ ಇರುವ ಮಾಗಡಿ ತಾಲ್ಲೂಕಿನಲ್ಲಿ ರೈತರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲು ಜನಪ್ರತಿನಿಧಿಗಳು ಕಾಳಜಿ ವಹಿಸಿಲ್ಲ ಎಂದ ಅವರು,10 ಹಲಸಿನ ಮರಗಳು, 15 ಮಾವಿನ ಮರಗಳು, ಮಲ್ಲಿಗೆ, ಕಾಕಡ, ಕನಕಾಂಬರ ಇತರೆ ಹಣ್ಣು, ಹೂವಿನ ಫಸಲು ನಷ್ಟವಾಗಿದೆ ಎಂದು ನೋವು ತೋಡಿಕೊಂಡರು.

ತಾಲ್ಲೂಕಿನಲ್ಲಿ ಸಹಸ್ರಾರು ರೈತರು ಮಾವು, ಬಾಳೆ, ಹಲಸು ಮತ್ತು ಹೂವು ಕೀಳದೆ ಹೊಲದಲ್ಲಿಯೇ ಬಿಟ್ಟಿದ್ದಾರೆ. ಸರ್ಕಾರ ತರಕಾರಿ ಬೆಳೆಗಾರರಿಗೆ ಘೋಷಿಸಿ ರುವ ಪ್ಯಾಕೇಜ್‌ ರೈತರಿಗೆ ನೀಡುವ ಭಿಕ್ಷೆಯಂತಿದೆ ಎಂದು
ತಿಳಿಸಿದರು.

ಪ್ರಗತಿಪರ ರೈತರಾದ ರಸ್ತೆಪಾಳ್ಯ ರಮೇಶ್‌ ಮಾತನಾಡಿ, ಕಲ್ಲಂಗಡಿ, ಕರಬೂಜ, ಸಪೋಟಾ, ಪಪ್ಪಾಯಿ, ಸೀಬೆ, ನಿಂಬೆಹಣ್ಣು ಬೆಳೆದ ರೈತರನ್ನು ಕೇಳುವವರಿಲ್ಲದೆ ಮೂಕವೇದನೆ ಅನುಭವಿಸುತ್ತಿದ್ದೇವೆ ಎಂದರು.

ಕುಂಬಳಕಾಯಿ ಗಂಗಣ್ಣ, ಹೂವಿನ ಬೆಳೆಗಾರ ಕಲ್ಯದ ಉಮೇಶ್‌, ಶಂಕರ್‌, ಶಾನುಭೋಗನಹಳ್ಳಿ ರಾಮಚಂದ್ರಯ್ಯ, ಜಯರಾಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT