ಶನಿವಾರ, ಫೆಬ್ರವರಿ 29, 2020
19 °C
ಕೇತಿಗಾನಹಳ್ಳಿಯಲ್ಲಿ ₹10 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ

ಇಲಾಖೆಗಳಲ್ಲಿ ಭ್ರಷ್ಟಾಚಾರ ಏರಿಕೆ: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ರಾಮನಗರ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಜನತೆ ಪರಿತಪಿಸುತಿದ್ದಾರೆ. ರೈತರು ಕಚೇರಿಗಳಿಗೆ ಅಲೆದರೂ ಕೆಲಸ ಆಗುತ್ತಿಲ್ಲ ಎಂದು ಶಾಸಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. 

ಪುರಸಭೆ ವ್ಯಾಪ್ತಿಯ ಕೇತಿಗಾನಹಳ್ಳಿಯಲ್ಲಿ ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ 10 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ಕಗ್ಗಲ್ಲಬೀರೇಶ್ವರ ದೇವಾಲಯದ ಬಳಿ ವೇದಿಕೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ ಮಾಡಿ ಅವರು ಮಾತನಾಡಿದರು. ‘ಯಾವುದೇ ಪಕ್ಷದ ಹಂಗಿಲ್ಲದೆ ರಾಜ್ಯದಲ್ಲಿ ಐದು ವರ್ಷಗಳ ಕಾಲ ಸರ್ಕಾರ ನನ್ನ ಕೈಯಲ್ಲಿದ್ದಿದ್ದರೆ ಅಭಿವೃದ್ಧಿ ಮಾಡಿ ತೋರಿಸುತ್ತಿದ್ದೆ’ ಎಂದರು.

"ನನ್ನ ರಾಜಕೀಯ ಜೀವನದಲ್ಲಿ ಅವಧಿಯಲ್ಲಿ ಎರಡು ಬಾರಿ ಸಿ.ಎಂ ಆಗಿದ್ದಾಗ ಕರ್ಮಭೂಮಿ ಕೇತುಗಾನಹಳ್ಳಿ ಗ್ರಾಮ ಮತ್ತು ಪುರಸಭೆಯ 23 ವಾರ್ಡ್ ಗಳ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇನ್ನು ಒಂದು ವರ್ಷದ ಅವಧಿ ಅಧಿಕಾರ ಇದ್ದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತಿತ್ತು' ಎಂದರು.

ರೈತರ ಸಾಲ ಮನ್ನಾದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿಲ್ಲ. ಇದಕ್ಕೆ ಬೇಕಿದ್ದ ₹25 ಸಾವಿರ ಕೋಟಿಯನ್ನು 14 ತಿಂಗಳ ಅವಧಿಯಲ್ಲಿ ಅಧಿಕಾರಿಗಳ ಸಹಕಾರದಿಂದ ವಿವಿಧ ಮೂಲಗಳಿಂದ ಸಂಗ್ರಹಿಸಿದ್ದೇನೆ ಎಂದರು.

ಜಮ್ಮು ಕಾಶ್ಮೀರದಲ್ಲಿ ಪ್ರಜೆಗಳ ವಾಕ್ ಸ್ವಾತಂತ್ರ ಕಸಿದುಕೊಂಡು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಹರಿಹಾಯ್ದರು.

ಶಾಸಕ ಎ.ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಡದಿ ಪುರಸಭೆ ಸೇರಿದಂತೆ ಮಾಗಡಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಕುಮಾರಸ್ವಾಮಿ ಅವರು ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಪಲ್ಸ್ ಪೋಲಿಯೊ ದಿನದ ಅಂಗವಾಗಿ ಮಗುವಿಗೆ ಸಾಂಕೇತಿಕವಾಗಿ ಪೋಲಿಯೊ ಲಸಿಕೆ  ಹಾಕಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಕಾಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಪೂಜಾರಿಪಾಳ್ಯ, ಬಿಡದಿ ಪುರಸಭೆ ನಿಕಟಪೂರ್ವ ಅಧ್ಯಕ್ಷೆ ವೆಂಕಟೇಶಮ್ಮ ರಾಮಕೃಷ್ಣಯ್ಯ, ಉಪಾಧ್ಯಕ್ಷೆ ಲಕ್ಷ್ಮೀದೇವಿ ರವಿಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಉಮೇಶ್, ಸದಸ್ಯರಾದ ಆರ್.ದೇವರಾಜು, ರಾಕೇಶ್, ಸಂತೋಷ್, ಸಿ.ಲೋಕೇಶ್, ಮಹಿಪತಿ, ಪಲ್ಲವಿ, ಮುಖಂಡರಾದ ಅವರಗೆರೆ ರವಿಕುಮಾರ್, ಸೋಮೇಗೌಡ, ಶೇಷಪ್ಪ, ಮೀಸೆ ರಾಮಕೃಷ್ಣಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು