ಬಿಡದಿ: ಹನುಮಂತನಗರದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಗೆ ಪಾದಚಾರಿ ಮೇಲ್ಸೇತುವೆ ನಿರ್ಮಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯರು ಸಂಸದ ಡಿ.ಕೆ. ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಯು. ನರಸಿಂಹಯ್ಯ, ಕೆಪಿಸಿಸಿ ಸದಸ್ಯ ಬ್ಯಾಟ್ ಅಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ನರಸಿಂಹಯ್ಯ, ಸಿ.ಎಚ್. ಪುಟ್ಟಯ್ಯ ಸೇರಿದಂತೆ ಗ್ರಾಮಸ್ಥರು ಮಾಡಿದ ಕೋರಿಕೆ ಮೇರೆಗೆ ಹನುಮಂತನಗರ ಬಳಿ ಮಾರ್ಗಮಧ್ಯೆ ವಾಹನ ನಿಲ್ಲಿಸಿದ ಲೋಕಸಭಾ ಸದಸ್ಯರು ಮನವಿ ಪತ್ರ ಸ್ವೀಕರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಕುಮಾರ್ ಮಾತನಾಡಿ, ಪ್ರಸಿದ್ಧ ಕೋತಿ ಆಂಜನೇಯಸ್ವಾಮಿ ದೇವಾಲಯ, ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ, ಹನುಮಂತನಗರ ವಸತಿ ಪ್ರದೇಶ, ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿದೆ. ದೇವಾಲಯಕ್ಕೆ ಬರುವ ಭಕ್ತರು ಹಾಗೂ ಕೆಲಸದ ನಿಮಿತ್ತ ಪಂಚಾಯಿತಿ ಕಚೇರಿಗೆ ಬರುವ ಸಾರ್ವಜನಿಕರು ಹೆದ್ದಾರಿ ದಾಟಲು ಸಾಧ್ಯವಿರುವುದಿಲ್ಲ. ಸರ್ವೀಸ್ ರಸ್ತೆಯಲ್ಲಿ ಒಂದೂವರೆ ಕಿಲೋಮೀಟರ್ ದೂರ ಬರಬೇಕಾಗಿದೆ. ಆದ್ದರಿಂದ ಹನುಮಂತನಗರದ ಬಳಿ ಪಾದಚಾರಿ ಮೇಲ್ಸೇತುವೆಯ ಅಗತ್ಯವಿದೆ ಎಂದು ತಿಳಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಪುರಾಣ ಪ್ರಸಿದ್ಧ ಕೋತಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಪ್ರತಿದಿನ ನೂರಾರು ಭಕ್ತರು ಆಗಮಿಸುತ್ತಾರೆ. ಹಬ್ಬದ ವೇಳೆ ದೇಗುಲಗಳಲ್ಲಿ ಉತ್ಸವ ನಡೆಯುತ್ತದೆ. ಆಗ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಲ್ಲದೇ, ಜಿಲ್ಲೆಯಲ್ಲಿ ಅತಿದೊಡ್ಡ ಪಂಚಾಯಿತಿ ಆಗಿರುವ ಮಂಚನಾಯಕನಹಳ್ಳಿ ಪಂಚಾಯಿತಿ ಕಚೇರಿಗೆ ಸಮಸ್ಯೆ ಹೊತ್ತು ಬರುವ ಗ್ರಾಮೀಣರು ಕಿಲೋಮೀಟರ್ ಗಟ್ಟಲೆ ಸುತ್ತುತ್ತಿದ್ದಾರೆ ಎಂದರು.
ಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಹನುಮಂತನಗರದಲ್ಲಿ ಕಾರ್ಖಾನೆಗಳು ಹಾಗೂ ಗೌರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರು ಹಾಗೂ ದಿನಗೂಲಿ ಕಾರ್ಮಿಕರು ವಾಸವಿದ್ದಾರೆ. ಪ್ರತಿದಿನ ಕೆಲಸಗಳಿಗೆ ತೆರಳಲು ಸಾರಿಗೆ ಬಸ್ ಸೌಲಭ್ಯ ಬೇಕಿದೆ. ಹೈನುಗಾರರು ಇರುವುದರಿಂದ ಪ್ರತಿದಿನ ಬೆಳಿಗ್ಗೆ, ಸಂಜೆ ಡೇರಿಗೆ ಹಾಲು ಸಾಗಿಸಲು ತೊಂದರೆಯಾಗುತ್ತಿದೆ. ಹೀಗಾಗಿ ಜನರು ಓಡಾಟಕ್ಕೆ ಅನುಕೂಲವಾಗುವಂತೆ ಈ ಸ್ಥಳದಲ್ಲಿ ಸ್ಕೈವಾಕ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಬೇಕು ಎಂದು
ಕೋರಿದರು.
ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು, ಮುಖಂಡರಾದ ನಾರಾಯಣಸ್ವಾಮಿ, ನಾಗರಾಜು, ಗಿರೀಶ್, ಶಾಮಣ್ಣ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.