ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಉಳಿದು ಚಪ್ಪಾಳೆ ತಟ್ಟಿದರು

ಜಿಲ್ಲೆಯಲ್ಲಿ 'ಜನತಾ ಕರ್ಫ್ಯೂ'ಗೆ ಉತ್ತಮ ಸ್ಪಂದನ
Last Updated 24 ಮಾರ್ಚ್ 2020, 10:28 IST
ಅಕ್ಷರ ಗಾತ್ರ

ರಾಮನಗರ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ಜಿಲ್ಲೆಯಲ್ಲಿ ಭಾನುವಾರ ಉತ್ತಮ ಸ್ಪಂದನ ವ್ಯಕ್ತವಾಯಿತು.

ಜನರು ಸ್ವಯಂ ಪ್ರೇರಿತರಾಗಿ ಕರ್ಫ್ಯೂ ಪಾಲಿಸಿದ್ದರಿಂದ ರಾಮನಗರ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಯಾರೂ ಮನೆಯಿಂದ ಹೊರಗೆ ಬರದೆ ಸ್ವಯಂ ಕರ್ಫ್ಯೂ ಹೇರಿಕೊಂಡಿದ್ದರು.

ಕೋವಿಡ್-19 ವೈರಸ್ ಹರಡದಂತೆ ತಡೆಯಲು ಸಾರ್ವಜನಿಕ ಸಂಯಮ ಅಗತ್ಯವಿರುವುದನ್ನು ಅರಿತು ಜಿಲ್ಲೆಯ ಜನರು ಸ್ವಯಂ ಪ್ರೇರಿತವಾಗಿ ‘ಜನತಾ ಕರ್ಫ್ಯೂ’ ಒಪ್ಪಿಕೊಂಡು ಸಂಪೂರ್ಣವಾಗಿ ಪಾಲನೆ ಮಾಡಿದರು.

ರಾಮನಗರದ ಮೈಸೂರು-ಬೆಂಗಳೂರು ಹೆದ್ದಾರಿ ಬದಿ, ಹಳೇ ಬಸ್ ನಿಲ್ದಾಣ ವೃತ್ತ, ರೈಲ್ವೆ ನಿಲ್ದಾಣ ರಸ್ತೆ, ಮಹಾತ್ಮಗಾಂಧಿ ರಸ್ತೆ, ಕಾಯಿಸೊಪ್ಪಿನ ಬೀದಿ, ಟ್ರೂಪ್ ಲೈನ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳ ಬದಿಯಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದರು.

ನಗರದ ಕೆಲವೆಡೆ ಮಾಂಸದ ಅಂಗಡಿ ಬಾಗಿಲು ತೆರೆದು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಪೊಲೀಸರು ಹಾಗೂ ಕೆಲ ನಾಗರಿಕರು ಅವುಗಳನ್ನು ಮುಚ್ಚಿಸಿದರು. ಚಿತ್ರಮಂದಿರಗಳು ಪ್ರದರ್ಶನ ರದ್ದುಪಡಿಸಿದ್ದವು. ಚಿನ್ನಬೆಳ್ಳಿ ಅಂಗಡಿಗಳು, ಬಟ್ಟೆ ಅಂಗಡಿಗಳು, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಕೆಲ ಪೆಟ್ರೋಲ್ ಬಂಕ್‌ಗಳಿಗೆ ಬೀಗ ಹಾಕಲಾಗಿತ್ತು.

ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ಗಳ ಸಂಚಾರ ಸ್ಥಗಿತಗೊಂಡಿದ್ದವು. ಆಟೋಗಳು ರಸ್ತೆಗೆ ಇಳಿಯಲಿಲ್ಲ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಸರ್ಕಾರಿ ರಜೆ ದಿನವಾದ ಕಾರಣ ಸರ್ಕಾರಿ ಕಚೇರಿ, ಬ್ಯಾಂಕ್‍ ಗಳಿಗೆ ಎಂದಿನಂತೆ ರಜೆ ಇತ್ತು. ಎಪಿಎಂಸಿಗಳಲ್ಲಿ ವಹಿವಾಟು ಸ್ಥಗಿತಗೊಂಡಿತ್ತು. ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗಳಿಗೂ ರಜೆ ಘೋಷಿಸಿದ್ದರಿಂದ ರೇಷ್ಮೆ ಬೆಳೆಗಾರರು ಮಾರುಕಟ್ಟೆಯತ್ತ ಮುಖ ಮಾಡಲಿಲ್ಲ. ಬೀದಿ ಬದಿ ವ್ಯಾಪಾರವೂ ಸ್ಥಗಿತಗೊಂಡಿತ್ತು.

ಜಿಲ್ಲಾಡಳಿತ ಚಲನಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ, ಜಾತ್ರೆ, ಕ್ರೀಡಾ ಚಟುವಟಿಕೆಗಳು, ಪಾರ್ಟಿ, ಮಾಲ್ ಜತೆಗೆ ಬೇಸಿಗೆ ಶಿಬಿರ, ಖಾಸಗಿ ಕೋಚಿಂಗ್ ತರಬೇತಿ ಕೇಂದ್ರ ಇತ್ಯಾದಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದರಿಂದ ಅಂತಹ ಯಾವುದೇ ಕಾರ್ಯಕ್ರಮಗಳು ನಡೆಯಲಿಲ್ಲ.
ಜನತಾ ಕರ್ಫ್ಯೂ ವೇಳೆ ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು. ಡಿವೈಎಸ್ ಪಿ, ಸರ್ಕಲ್ ಇನ್‌ ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್, ಸಹಾಯಕ ಇನ್ ಸ್ಪೆಕ್ಟರ್ ನೇತೃತ್ವದಲ್ಲಿ ಪೊಲೀಸ್ ಕಾನ್ ಸ್ಟೇಬಲ್‌ಗಳು ಗಸ್ತು ತಿರುಗುತ್ತಿದ್ದರು.
ಸರ್ಕಾರಿ ಆಸ್ಪತ್ರೆ, ನರ್ಸಿಂಗ್ ಹೋಮ್‍ಗಳು ಎಂದಿನಂತೆ ಬಾಗಿಲು ತೆರೆದಿದ್ದವು. ಆಂಬುಲೆನ್ಸ್‌ ಸಂಚಾರಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಔಷಧ ಅಂಗಡಿಗಳು ಕಾರ್ಯನಿರ್ವಹಿಸಿದವು.

ಚನ್ನಪಟ್ಟಣ ವರದಿ: ಜನತಾ ಕರ್ಫ್ಯೂವಿಗೆ ಚನ್ನಪಟ್ಟಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಪಟ್ಟಣದ ಅಂಗಡಿ ಮುಂಗಟ್ಟುಗಳು, ಪೆಟ್ರೋಲ್ ಬಂಕ್ ಗಳು, ಚಿತ್ರಮಂದಿರ ಕಾರ್ಖಾನೆಗಳು, ಹೋಟೆಲ್‌ಗಳು ಮುಚ್ಚಿ ಬೆಂಬಲ ಸೂಚಿಸಿದವು.
ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿದ್ದವು. ಬೆಳಿಗ್ಗೆ ತೆರೆದಿದ್ದ ಕೆಲವು ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು.
ಸರ್ಕಾರಿ ಬಸ್ ಗಳು, ಖಾಸಗಿ ಬಸ್, ಆಟೋಗಳು, ಸರಕು ಸಾಗಾಣೆ ವಾಹನಗಳು ರಸ್ತೆಗೆ ಇಳಿಯಲಿಲ್ಲ.ಗ್ರಾಮೀಣ ಪ್ರದೇಶದ ಮಂದಿಯೂ ಪಟ್ಟಣದ ಕಡೆಗೆ ಬರಲಿಲ್ಲ.

ಮಾಗಡಿ ವರದಿ:ಮುಂಜಾನೆಯಿಂದಲೇ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವ್ಯಾಪಾರ ವಹಿವಾಟು ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಅಂಗಡಿ ಮುಗ್ಗಟ್ಟುಗಳು, ಹೋಟೆಲ್, ವೈನ್‌ ಸ್ಟೋರ್‌ಗಳು ಮುಚ್ಚಿದ್ದವು. ಸರ್ಕಾರಿ ಆಸ್ಪತ್ರೆ, ಔಷಧಿ ಮಾರಾಟ ಮಳಿಗೆ, ಹಾಲು ಮಾರಾಟ ಕೇಂದ್ರಗಳು ಮಾತ್ರ ತೆರೆದಿದ್ದವು.

ಕನಕಪುರ ವರದಿ:ನಗರ ವ್ಯಾಪ್ತಿಯಲ್ಲಿ ಯಾವುದೆ ಅಂಗಡಿ ಮುಂಗಟ್ಟುಗಳು ತೆರೆಯದೆ ಎಲ್ಲವೂ ಮುಚ್ಚಿದ್ದವು. ಬಸ್‌ ನಿಲ್ದಾಣ ಸೇರಿದಂತೆ ಟ್ಯಾಕ್ಸಿ, ಖಾಸಗಿ ಬಸ್‌ ನಿಲ್ದಾಣ ಪೂರ್ಣ ನಿಶಬ್ದವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT