ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹವಾಲು ಸಲ್ಲಿಸಲು ಮುಗಿಬಿದ್ದ ಜನರು

ಮೊದಲ ದಿನ ಮೂರು ಜಿ.ಪಂ. ಕ್ಷೇತ್ರದಲ್ಲಿ ನಡೆದ ಜನತಾ ದರ್ಶನ
Last Updated 17 ಜೂನ್ 2019, 16:02 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸೋಮವಾರ ತಾಲ್ಲೂಕಿನ ಮೂರು ಜಿ.ಪಂ. ಕ್ಷೇತ್ರಗಳಲ್ಲಿ ನಡೆಸಿದ ಜನತಾ ದರ್ಶನ ಕಾರ್ಯಕ್ರಮಕ್ಕೆ ಜನರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಯಿತು. ಮನವಿ ಸಲ್ಲಿಸಲು ಜನರು ಮುಗಿಬಿದ್ದರು.

ಮಧ್ಯಾಹ್ನ 3.45ಕ್ಕೆ ಅಕ್ಕೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ದಿನದ ಮೊದಲ ಜನತಾ ದರ್ಶನ ಕಾರ್ಯಕ್ರಮವು ನಡೆಯಿತು. ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಸಲುವಾಗಿ ಬೆಳಗ್ಗೆಯಿಂದಲೇ ಜನರು ನೂರಾರು ಸಂಖ್ಯೆಯಲ್ಲಿ ಜನರು ಬಂದಿದ್ದರು. ಅವರಲ್ಲಿ ಕೆಲವರಿಗೆ ಮಾತ್ರವೇ ಮನವಿ ಸಲ್ಲಿಸುವ ಅವಕಾಶ ದೊರೆಯಿತು. ಅಕ್ಕೂರು, ಬಾಣಗಳ್ಳಿ, ಸೋಗಾಲ, ಹಾರೋಕೊಪ್ಪ ಮೊದಲಾದ ಗ್ರಾಮ ಪಂಚಾಯಿತಿಗಳ ಜನರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕೆಲವು ಸಮಸ್ಯೆಗಳಿಗೆ ಅಲ್ಲಿಯೇ ಅಧಿಕಾರಿಗಳನ್ನು ವಿಚಾರಿಸಿದ ಕುಮಾರಸ್ವಾಮಿ ಶೀಘ್ರ ಪರಿಹಾರ ದೊರಕಿಸಿಕೊಡುವಂತೆ ಸೂಚಿಸಿದರು. ಮತ್ತೆ ಕೆಲವೊಮ್ಮೆ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿ ಸಮಸ್ಯೆ ಪರಿಹರಿಸುವ ಕುರಿತು ಚರ್ಚಿಸಿದರು.

ಕೋಡಂಬಳ್ಳಿ ಹಾಗೂ ಹೊಂಗನೂರು ಜಿ.ಪಂ, ಕ್ಷೇತ್ರಗಳಿಂದಲೂ ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮವು ನಡೆಯಿತು. ದಿನದ ಕಡೆಯ ಜನತಾ ದರ್ಶನ ಕಾರ್ಯಕ್ರಮ ಮುಗಿಯುವ ವೇಳೆಗೆ ರಾತ್ರಿ 9 ಗಂಟೆಯಾಗಿತ್ತು.

ಜಿಲ್ಲಾಧಿಕಾರಿ ಕೆ. ರಾಜೇಂದ್ರ ಹಾಗೂ ಜಿ.ಪಂ. ಸಿಇಒ ಮುಲ್ಲೈ ಮುಹಿಲನ್ ಅವರು ಪಕ್ಕದಲ್ಲಿದ್ದು ಜನರನ್ನು ನಿಯಂತ್ರಿಸಿದರು. ಅವರಿಗೆ ಸ್ಥಳೀಯ ಜಿಲ್ಲಾ ಪಂಚಾಯಿತಿ, ತಾ.ಪಂ ಜನಪ್ರತಿನಿಧಿಗಳು ಸಾಥ್ ನೀಡಿದರು.

ಗ್ರಾಮಗಳಲ್ಲಿ ಸಂಭ್ರಮ: ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಸಾಕಷ್ಟು ಕಡೆ ಬೀದಿಗಳಿಗೆ ತಳಿರು ತೋರಣ ಕಟ್ಟಿ, ಪಟಾಕಿ ಸಿಡಿಸಿ ಸ್ವಾಗತಿಸಲಾಯಿತು. ಗ್ರಾಮಗಳಲ್ಲಿ ಜನರು ನಿಂತಿದ್ದ ಕಡೆಯಲೆಲ್ಲ ತಾನೂ ವಾಹನ ನಿಲ್ಲಿಸಿ ಮುಖ್ಯಮಂತ್ರಿ ಜನರ ಕಷ್ಟ ಆಲಿಸಿದರು.

5 ಸಾವಿರಕ್ಕೂ ಹೆಚ್ಚು ದೂರು
ಮುಖ್ಯಮಂತ್ರಿಗಳ ಜನತಾ ದರ್ಶನದ ಕಾರ್ಯಕ್ರಮದ ಅಂಗವಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ 5 ಸಾವಿರಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ.

ಕಾರ್ಯಕ್ರಮದ ಪೂರ್ವಭಾವಿಯಾಗಿ ಇದೇ ತಿಂಗಳ 12ರಿಂದಲೇ ಜಿ.ಪಂ. ಕ್ಷೇತ್ರಗಳ ಕೇಂದ್ರಸ್ಥಾನಗಳಲ್ಲಿ ಜಿಲ್ಲಾಡಳಿತವು ದೂರು ಸ್ವೀಕಾರ ಕೇಂದ್ರಗಳನ್ನು ಆರಂಭಿಸಿತ್ತು. ಇದಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್‌ ಆಗಿ ನೇಮಿಸಿತ್ತು.

ಪ್ರತಿ ಜಿ.ಪಂ. ಕ್ಷೇತ್ರಕ್ಕೆ ಸರಾಸರಿ 1 ಸಾವಿರದಷ್ಟು ದೂರುಗಳು ಬಂದಿವೆ. ಇದರಲ್ಲಿ ಕೆಲವು ಉದ್ಯೋಗ, ವೃದ್ಧಾಪ್ಯ ವೇತನ, ವಿಧವಾ ಮತ್ತು ಅಂಗವಿಕಲರ ವೇತನಕ್ಕೆ ಸಂಬಂಧಿಸಿದ್ದಾಗಿವೆ. ಕೆಲವು ಕಡೆ ಗ್ರಾಮಸ್ಥರು ಜೊತೆಗೂಡಿ ನಿವೇಶನ, ಮನೆಗಳ ನಿರ್ಮಾಣ, ರಸ್ತೆ, ಚರಂಡಿ, ಆಸ್ಪತ್ರೆ, ಶಾಲೆ, ಕೆರೆ, ಗ್ರಂಥಾಲಯ, ದೇಗುಲಗಳ ಅಭಿವೃದ್ಧಿಗಾಗಿ ಒಟ್ಟಾಗಿ ದೂರು ಸಲ್ಲಿಸಿದರು. ಪಡಿತರ ವ್ಯವಸ್ಥೆಯಲ್ಲಿನ ಬಯೋಮೆಟ್ರಿಕ್‌ ಗೊಂದಲ, ಇಂಗ್ಲಿಷ್‌ ಶಾಲೆ ಮೊದಲಾದ ವಿಷಯಗಳ ಬಗ್ಗೆಯೂ ಮನವಿಗಳು ಬಂದವು.

**
ಅಂಗವಿಕಲರು, ಅಂಧರಿಂದಲೂ ಅಹವಾಲು
ಹೊಂಗನೂರಿನಲ್ಲಿ ರಾತ್ರಿ ನಡೆದ ಕಾರ್ಯಕ್ರಮದ ವೇಳೆ ಅಂಗವಿಕಲರ ಕುಟುಂಬವೊಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಉದ್ಯೋಗ ಮತ್ತು ಆಶ್ರಯ ಮನೆಗೆ ಬೇಡಿತು. ‘ಪತಿ, ಪತ್ನಿ ಹಾಗೂ ಮಗಳು ಮೂವರೂ ಅಂಗವಿಕಲರಾಗಿದ್ದೇವೆ. ಮಗ ಕೀರ್ತಿ ಐಟಿಐ ಮಾಡಿದ್ದು. ಅವನಿಗೊಂದು ಉದ್ಯೋಗ ಕೊಡಿಸಿ’ ಎಂದು ಅಂಗಲಾಚಿದರು. ಉದ್ಯೋಗಕ್ಕಾಗಿ ಇದೇ 19ರಂದು ತನ್ನ ಕಚೇರಿಗೆ ಬರುವಂತೆ ಸೂಚನೆ ನೀಡಿದ ಅವರು ಆಶ್ರಯ ಮನೆ ನಿರ್ಮಿಸಿಕೊಡಲು ಜಿಲ್ಲಾಧಿಕಾರಿಗೆ ಸೂಚಿಸಿದರು.

ಇದೇ ಸಂದರ್ಭ ಅಂಧ ವ್ಯಕ್ತಿಯೊಬ್ಬರು ತಾನು ಪಿಯುಸಿ ಓದಿದ್ದು, ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT