ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ವಿರುದ್ಧ ಟೀಕೆಗೆ ಜೆಡಿಎಸ್ ಖಂಡನೆ

ಪರಿಷತ್ ಸ್ಥಾನ ನೀಡಲು ಲಂಚ ಪಡೆದಿಲ್ಲ; ರಾಮನಗರವನ್ನು ಕುಮಾರಸ್ವಾಮಿ ನಿರ್ಲಕ್ಷಿಸಿಲ್ಲ
Last Updated 23 ಫೆಬ್ರುವರಿ 2021, 14:11 IST
ಅಕ್ಷರ ಗಾತ್ರ

ರಾಮನಗರ: ‘ಕಾಂಗ್ರೆಸ್ ಮುಖಂಡರು ಇನ್ನಾದರೂ ಎಚ್‌.ಡಿ. ಕುಮಾರಸ್ವಾಮಿ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವುದನ್ನು ಬಿಡುವುದು ಒಳಿತು’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘1994ರಲ್ಲಿ ರಾಮನಗರಕ್ಕೆ ಎಚ್.ಡಿ. ದೇವೇಗೌಡರನ್ನು ಕರೆತಂದಿದ್ದು ಇಲ್ಲಿನ ಮುಖಂಡರು. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯ ಆಗಿದ್ದರು. ನಂತರದಲ್ಲಿ ಇಲ್ಲಿಯೇ 48 ಎಕರೆ ತೋಟ ಖರೀದಿಸಿ ಕೃಷಿ ಆರಂಭಿಸಿದರು. ನ್ಯಾಯಯುತ ಬೆಲೆ ಕೊಟ್ಟೇ ಕೊಂಡುಕೊಂಡಿದ್ದಾರೆ. ಈ ಬಗ್ಗೆಯೂ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಕುಮಾರಸ್ವಾಮಿ ಅವರನ್ನು ಟೀಕಿಸುವ ಮುನ್ನ 1994ರ ಮುಂಚೆ ರಾಮನಗರ ಹೇಗಿತ್ತು. ಈಗ ಹೇಗಿದೆ ಎನ್ನುವುದನ್ನು ವಿರೋಧಿಗಳು ಮನನ ಮಾಡಿಕೊಳ್ಳುವುದು ಒಳಿತು. ಈಗ ಸಚಿವರೇ ಹೆಲಿಕಾಪ್ಟರ್‌ಗಳಲ್ಲಿ ಓಡಾಡುತ್ತಿದ್ದಾರೆ. ಹೀಗಿರುವಾಗ ಎಚ್‌ಡಿಕೆ ಹಿಂದೆ ಹವಾಯಿ ಚಪ್ಪಲಿಯಲ್ಲಿ ಓಡಾಡುತ್ತಿದ್ದವರು ಈಗ ರೇಂಜ್‌ ರೋವರ್ ಕಾರಿನಲ್ಲಿ ಓಡಾಡುತ್ತಾರೆ ಎಂದು ಟೀಕಿಸುವುದು ಎಷ್ಟು ಸರಿ. ಎರಡು ಬಾರಿ ಮುಖ್ಯಮಂತ್ರಿ ಆದವರಿಗೆ ಅಷ್ಟು ಶಕ್ತಿ ಇಲ್ಲವೇ?’ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಅತ್ಯಂತ ಸರಳ ಹಾಗೂ ಜನರ ಕೈಗೆ ಸಿಗುವ ಮುಖ್ಯಮಂತ್ರಿ ಎಂದರೆ ಅದು ಎಚ್‌ಡಿಕೆ ಮಾತ್ರ ಎಂದರು.

‘ಕುಮಾರಸ್ವಾಮಿ ಅಪ್ಸರ್‌ ಆಗಾರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಲು 5 ಕೋಟಿ ಪಡೆದುಕೊಂಡಿದ್ದಾರೆ ಎನ್ನುವುದು ಸುಳ್ಳು. ದೇವೇಗೌಡರು ರಾಮನಗರಕ್ಕೆ ಬಂದಾಗ ಅಪ್ಸರ್ ಆಗಾ ಅವರ ತಂದೆಗೆ ಮಾತು ಕೊಟ್ಟಿದ್ದರು. ಅದರಂತೆ ಪರಿಷತ್‌ ಸದಸ್ಯರಾಗಿ ನೇಮಕ ಮಾಡಿದ್ದಾರೆಯೇ ಹೊರತು ಹಣಕ್ಕಾಗಿ ಇಲ್ಲ. ಈ ಬಗ್ಗೆ ಶೀಘ್ರದಲ್ಲೇ ಆಗಾ ಕುಟುಂಬದವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಲಿದ್ದಾರೆ’ ಎಂದು ಸ್ಪಷ್ಟನೆ ನೀಡಿದರು.

‘ರಾಮನಗರ ವಿಚಾರದಲ್ಲಿ ಎಚ್‌ಡಿಕೆ ಮತ್ತವರ ಕುಟುಂಬಕ್ಕೆ ವಿಶೇಷ ಅಕ್ಕರೆ ಇದೆ. ‘ಇದು ನನ್ನ ಕರ್ಮಭೂಮಿ’ ಎಂದು ಎಚ್‌ಡಿಕೆ ಹೇಳುತ್ತಲೇ ಬಂದಿದ್ದಾರೆ. ರಾಮನಗರದ ಈಗಿನ ಅಭಿವೃದ್ಧಿಗೆ ಕುಮಾರಸ್ವಾಮಿ ಕಾರಣ. ಶಾಸಕರ ಅನುದಾನದ ಜೊತೆಗೆ ಬೇರೆ ಬೇರೆ ಯೋಜನೆಗಳಿಂದ ಹಣ ತಂದು ಇಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಜಿಲ್ಲಾ ಕೇಂದ್ರ ಮಾಡಿ ಇಲ್ಲಿನ ಜನರಿಗೆ ಅಧಿಕಾರಿಗಳು ಸಿಗುವಂತೆ ಮಾಡಿದ್ದು ಇದೇ ಕುಮಾರಸ್ವಾಮಿ’ ಎಂದರು.

ಕಾಂಗ್ರೆಸ್‌ನಿಂದಲೇ ಭ್ರಷ್ಟಾಚಾರ: ಜೆಡಿಎಸ್ ರಾಜ್ಯ ವಕ್ತಾರ ಉಮೇಶ್‌ ಮಾತನಾಡಿ ‘ನಗರಸಭೆಯಲ್ಲಿ ಕಳೆದ ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಬಹುತೇಕ ಸಂದರ್ಭದಲ್ಲಿ ಇಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಅವರು ಭ್ರಷ್ಟಾಚಾರ ಮಾಡಿದ ಕಾರಣಕ್ಕೆ ಇಂದು ಈ ಅವ್ಯವಸ್ಥೆ ತಲೆದೂರಿದೆ’ ಎಂದು ಆರೋಪಿಸಿದರು.

‘ಎಚ್‌ಡಿಕೆ ಕುಟುಂಬದವರು ತೊರೆಕಾಡನಹಳ್ಳಿಯಿಂದ ಇಲ್ಲಿಗೆ ನೀರಾವರಿ ಯೋಜನೆ ಮಾಡದಿದ್ದರೆ ಇವತ್ತು ರಾಮನಗರಕ್ಕೆ ಸರಿಯಾಗಿ ಕುಡಿಯುವ ನೀರು ಸಿಗುತ್ತಿರಲಿಲ್ಲ. ಬಡಜನರು ಮನೆ ಕಟ್ಟಲು ಕಟ್ಟಿರುವ ₨5100 ವಂತಿಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ಬಳಿಯೇ ಇದೆ. ಹಳೆಯ 240 ಮನೆ ಜೊತೆಗೆ ಕೊತ್ತೀಪುರದಲ್ಲಿ 880 ಮನೆಗಳ ನಿರ್ಮಾಣಕ್ಕೆ ಯೋಜಿಸಲಾಗಿದೆ’ ಎಂದರು.

ಜೆಡಿಎಸ್ ಜಿಲ್ಲಾ ಪದವೀಧರ ಘಟಕದ ಅಧ್ಯಕ್ಷ ಜಿ.ಟಿ. ಕೃಷ್ಣ ಮಾತನಾಡಿ ‘2018ರಲ್ಲಿ ಎಚ್‌ಡಿಕೆ ಮುಖ್ಯಮಂತ್ರಿ ಆಗಿದ್ದಾಗ ಕುಮಾರಣ್ಣ ಹೈಟೆಕ್‌ ಮಾರುಕಟ್ಟೆ ಘೋಷಿಸಿದ್ದರು. ವಿರೋಧಿಸುವವರು ಆಗ ಯಾಕೆ ಸುಮ್ಮನಿದ್ದರು. ಯಾವುದೇ ವಿರೋಧ ಮಾಡದೇ ಏಕಾಏಕಿ ಬಂದ್ ಮಾಡಿದ್ದು ಏಕೆ’ ಎಂದು ಪ್ರಶ್ನಿಸಿದರು. ‘ಮಾರುಕಟ್ಟೆಗೆ ರೇಷ್ಮೆ ಬೆಳೆಗಾರರ ಬೆಂಬಲ ಇದೆ’ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಚಿಕ್ಕವೀರೇಗೌಡ, ಗೂಳಿ ಕುಮಾರ್, ಬೋರೇಗೌಡ, ರಾಮಕೃಷ್ಣಯ್ಯ, ಜಕೀವುಲ್ಲಾ, ಜಯಕುಮಾರ್ ಮತ್ತಿತರರು ಇದ್ದರು.

ಹಳೆ ಮಾರುಕಟ್ಟೆ ಸ್ಥಳಾಂತರ ಇಲ್ಲ
‘₨75 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಆಗುವುದು ಖಚಿತ. ಆದರೆ ಈಗ ಇರುವ ರಾಮನಗರ ಹಾಗೂ ಚನ್ನಪಟ್ಟಣ ಗೂಡು ಮಾರುಕಟ್ಟೆಗಳು ಹಾಗೆಯೇ ಉಳಿಯಲಿವೆ’ ಎಂದು ಉಮೇಶ್‌ ಹೇಳಿದರು. ‘ಹೈಟೆಕ್ ಮಾರುಕಟ್ಟೆಗಾಗಿ ರಾಮನಗರದಲ್ಲೂ ಸ್ಥಳ ಹುಡುಕಲಾಗುತ್ತಿದೆ. ಜಾಗ ಸಿಕ್ಕಲ್ಲಿ ಇಲ್ಲಿಯೇ ಮಾರುಕಟ್ಟೆ ನಿರ್ಮಾಣ ಆಗುವ ಸಾಧ್ಯತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT