ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಧಾರೆ ಅಭಿಯಾನಕ್ಕೆ ಚಾಲನೆ; ಇದು ಚುನಾವಣೆ ಗಿಮಿಕ್ ಅಲ್ಲ ಎಂದ ಅನಿತಾ ಕುಮಾರಸ್ವಾಮಿ

ಜಿಲ್ಲೆಯ ಎಂಟು ಕಡೆಗಳಿಂದ ಪವಿತ್ರ ಜಲ ಸಂಗ್ರಹ: ಗಂಗಾ ರಥದ ಸಂಚಾರ
Last Updated 17 ಏಪ್ರಿಲ್ 2022, 6:41 IST
ಅಕ್ಷರ ಗಾತ್ರ

ರಾಮನಗರ: ರಾಜ್ಯದಲ್ಲಿನ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನದ ಆಶಯದೊಂದಿಗೆ ಜಾತ್ಯತೀತ ಜನತಾದಳವು ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಕನಕಪುರ ತಾಲ್ಲೂಕಿನ ಸಂಗಮ–ಮೇಕೆದಾಟು ಪ್ರದೇಶದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಶನಿವಾರ ಚಾಲನೆ ನೀಡಿದರು.

ಕಲಾ ತಂಡಗಳ ಹಿಮ್ಮೇಳ, ಪುರೋಹಿತರ ಮಂತ್ರಘೋಷ, ಗಂಗಾ ಪೂಜೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಅನಿತಾ ಅವರೊಂದಿಗೆ ಹತ್ತಾರು ಮಹಿಳೆಯರು ಕಾವೇರಿ ನದಿ ನೀರು ತುಂಬಿದ ಕಲಶಗಳನ್ನು ಹೊತ್ತು ತಂದು ಜಲಧಾರೆ ರಥದಲ್ಲಿನ ದೊಡ್ಡ ಕಲಶಕ್ಕೆ ಸುರಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರು ಮಾತನಾಡಿದರು. ಈ ವೇಳೆ, ಪೂಜಾ ಕುಣಿತ, ಪಟ ಕುಣಿತ ಗಮನ ಸೆಳೆದವು. ದಾರಿಯುದ್ದಕ್ಕೂ ಜೆಡಿಎಸ್ ಕಾರ್ಯಕರ್ತರು ಗಂಗಾ ರಥವನ್ನು ಸ್ವಾಗತಿಸಿದರು.

ಈ ವೇಳೆ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಬೇಕು. ಇವುಗಳಿಗೆ ಬಜೆಟ್‍ನಲ್ಲಿ ಹೆಚ್ಚುವರಿಯಾಗಿ ಹಣ ಮೀಸಲಿಡಬೇಕು. ಕುಡಿಯುವ ನೀರಿಗೂ ಆದ್ಯತೆ ನೀಡಬೇಕು. ನೀರಾವರಿ ಯೋಜನೆಗೆ ₹ 5.5 ಲಕ್ಷ ಕೋಟಿ ಬೇಕು ಎಂದು ಒತ್ತಾಯಿಸಿದರು.

ಇದು ಯಾವುದೇ ಚುನಾವಣೆ ಗಿಮಿಕ್ ಅಲ್ಲ. ನಮ್ಮದು ನೀರಾವರಿಗಾಗಿ ಹೋರಾಟ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ, ಎಲ್ಲ ನೀರಾವರಿ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಈ ಹಿಂದೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದ ಮಾತನ್ನು ಅವರು ಈಡೇರಿಸಿದ್ದಾರೆ ಎಂದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ನೀರಾವರಿ ಯೋಜನೆಗಳು ಸಾಕಾರಗೊಳ್ಳಲಿವೆ. ರಾಜ್ಯಕ್ಕೆ ಯಾವುದೇ ಅನ್ಯಾಯವಾದರೂ, ದೇವೇಗೌಡರು ಮುಂಚೂಣಿಯಲ್ಲಿ ಹೋರಾಟಕ್ಕೆ ನಿಲ್ಲುತ್ತಿದ್ದರು. ಪ್ರಧಾನಿಯಾಗಿದ್ದ ವೇಳೆ ದೇವೇಗೌಡರ ಆಡಳಿತ ಇಂದಿಗೂ ಮರೆಯಾಗಿಲ್ಲ. ಹೀಗಾಗಿ ನಮ್ಮ ಪಕ್ಷ ನಿರಂತರವಾಗಿ ಕೆಲಸ ಮಾಡುತ್ತಲೇ ಇದೆ ಎಂದರು.

ಶಾಸಕ ಅನ್ನದಾನಿ ಮಾತನಾಡಿ, ಕುಮಾರಸ್ವಾಮಿ ಅವರ ಪರಿಕಲ್ಪನೆಯೇ ವಿಭಿನ್ನ. ಎಲ್ಲರಿಗೂ ಸಮಾನ ನೀರಿನ ಹಕ್ಕು ಸಿಗಬೇಕು ಎಂಬುದೇ ಎಚ್‍ಡಿಕೆಯ ಕನಸು. ಕಾಂಗ್ರೆಸ್‍ನ ಪಾದಯಾತ್ರೆಗೂ ಮುನ್ನವೇ ನಮ್ಮ ಜಲಧಾರೆ ಶುರುವಾಗಿತ್ತು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಲಾಗಿತ್ತು. ಇದನ್ನು ಕಾಂಗ್ರೆಸ್ ಹೈಜಾಕ್ ಮಾಡಿಕೊಂಡಿತ್ತು ಎಂದು ದೂರಿದರು.

ಕಾವೇರಿ ನದಿ ನಮ್ಮ ರಾಜ್ಯದಲ್ಲಿ ಹುಟ್ಟಿದರೂ, ಮೊದಲು ನಮಗೆ ತೃಪ್ತಿಕರ ನೀರು ಸಿಗುತ್ತಿಲ್ಲ. ನ್ಯಾಯಯುತ ನೀರಿಗಾಗಿ ನಮ್ಮ ಹೋರಾಟ ನಡೆಯು ತ್ತಿದೆ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದರು.

ಶಾಸಕ ಎ. ಮಂಜುನಾಥ್, ವಿಧಾನ ಪರಿಷತ್‌ ಸದಸ್ಯ ರಮೇಶ್‌ ಗೌಡ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆ ಮೂಲಕ ರಥದ ಹಿಂಭಾಗದಲ್ಲಿ ಹೊರಟರು. ಗುನ್ನೂರು, ಉಯ್ಯಂಬಳ್ಳಿ, ದೊಡ್ಡಾಲಹಳ್ಳಿ, ಸೋರೆಕಾಯಿದೊಡ್ಡಿ, ಸಾತನೂರು ಮಾರ್ಗವಾಗಿ ಸಂಚರಿಸಿದ ರಥವು ಹೊನ್ನಿಗನಹಳ್ಳಿಯಲ್ಲಿ ರಾತ್ರಿ ವಾಸ್ತವ್ಯ ಹೂಡಿತು. ಮಧ್ಯಾಹ್ನ ಡಿಕೆಶಿ ಹುಟ್ಟೂರು ದೊಡ್ಡಾಲಹಳ್ಳಿಯಲ್ಲಿ ಬಹಿರಂಗ ಸಭೆ ನಡೆಯಿತು.

ಭಾನುವಾರದಿಂದ ಜಿಲ್ಲೆಯ ಹಾರೋಬೆಲೆ ಅಣೆಕಟ್ಟು, ಮುತ್ತತ್ತಿಯ ಕಾವೇರಿ ನದಿ, ಇಗ್ಗಲೂರು ಅಣೆಕಟ್ಟು, ಚನ್ನಪಟ್ಟಣದ ಕಣ್ವ ಜಲಾಶಯ, ಮಂಚನಬೆಲೆ ಜಲಾಶಯ, ವೈ.ಜಿ. ಗುಡ್ಡ ಜಲಾಶಯ, ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಸಂಗ್ರಹಿಸಿ, ಬೆಂಗಳೂರು ಕಡೆಗೆ ಗಂಗಾ ರಥ ತೆರಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT