ಕನಕಪುರ (ರಾಮನಗರ): ‘ಕನಕಪುರದಲ್ಲಿ ಟಾರ್ಗೆಟ್ ರಾಜಕಾರಣ ನಡೆಯುತ್ತಿದೆ. ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿದೆ. ಇದಕ್ಕೆ ಕಾಲವೇ ಉತ್ತರ ಕೊಡಲಿದೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಡಿ.ಕೆ. ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜನ ತೀರ್ಮಾನ ಮಾಡಿದರೆ ಏನು ಬೇಕಾದರೂ ನಡೆಯುತ್ತದೆ. ಇದಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಫಲಿತಾಂಶವೇ ಸಾಕ್ಷಿ’ ಎಂದರು.
‘ಗ್ರಾಮಾಂತರದಲ್ಲಿಎನ್‌ಡಿಎ ಅಭ್ಯರ್ಥಿಯಾಗಿದ್ದ ಡಾ. ಸಿ.ಎನ್. ಮಂಜುನಾಥ್ ಅವರ ಗೆಲುವಿಗೆ ಕನಕಪುರದ ಪ್ರಬುದ್ಧ ಮತದಾರರ ಸಹಕಾರ ಅಮೂಲ್ಯವಾದುದು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕ್ಷೇತ್ರದಲ್ಲೇ ಮಂಜುನಾಥ್ ಅವರಿಗೆ 80 ಸಾವಿರಕ್ಕೂ ಅಧಿಕ ಮತಗಳು ಬಂದಿವೆ. ಈ ಮತಗಳು ಮುಂದೆ ಇನ್ನೂ ಹೆಚ್ಚಾಗಬಹುದು’ ಎಂದು ಹೇಳಿದರು.
'ಚುನಾವಣೆ ಸಂದರ್ಭದಲ್ಲಿ ಕೂಪನ್, ಕುಕ್ಕರ್, ಸೀರೆ ಹಂಚಿ ಮುಗ್ಧ ಮತದಾರರನ್ನು ದಾರಿ ತಪ್ಪಿಸುವ ಕಾಂಗ್ರೆಸ್‌ಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಇನ್ಮುಂದೆ ಅವರ ಆಟ ನಡೆಯಲ್ಲ. ನಮ್ಮ ಕಾರ್ಯಕರ್ತರು ಯಾವುದೇ ಭಯಪಡಬೇಕಿಲ್ಲ. ಅವರೊಂದಿಗೆ ನಾವಿದ್ದೇವೆ’ ಎಂದು ಧೈರ್ಯ ತುಂಬಿದರು.
ಬಿಟ್ಟು ಹೋಗಿಲ್ಲ:
‘ಕುಮಾರಸ್ವಾಮಿ ಅವರು ಜಿಲ್ಲೆ ಬಿಟ್ಟು ಹೋಗಿದ್ದಾರೆಂಬ ಭಾವನೆ ಯಾರಿಗೂ ಬೇಡ. ಅವರು ಎಂದಿಗೂ ಜಿಲ್ಲೆಯವರೇ ಆಗಿರಲಿದ್ದಾರೆ. ಮಂಡ್ಯದಲ್ಲಿ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿ ನಾನು ಸೋತರೂ, ಅಲ್ಲಿನ 5 ಲಕ್ಷ ಜನ ಮತ ಹಾಕಿದ್ದರು. ಆ ಕ್ಷೇತ್ರವನ್ನು ಉಳಿಸಿಕೊಳ್ಳುವುದಕ್ಕಾಗಿ ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಹೋಗುವ ಅನಿವಾರ್ಯತೆ ಬಂತು ಅಷ್ಟೆ’ ಎಂದರು.
‘ನನಗೆ ಈಗಲೇ ಶಾಸಕನಾಗಬೇಕೆಂಬ ಆಸೆ ಇಲ್ಲ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂಬ ಚರ್ಚೆ ಇದೆ. ಆದರೆ, ನನ್ನ ತಾತ ಎಚ್.ಡಿ. ದೇವೇಗೌಡರು ಕರೆದು, ಬೂತ್ ಮಟ್ಟದ ಸದಸ್ಯತ್ವ ನೋಂದಣಿ ಅಭಿಯಾನ ಶುರು ಮಾಡು ಎಂದು ಸೂಚನೆ ನೀಡಿದರು. ಅದನ್ನು ಯಶಸ್ವಿಯಾಗಿ ಮಾಡುತ್ತಾ, ಪಕ್ಷ ಕಟ್ಟಲು ಹೊರಟಿದ್ದೇನೆ. ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ವಿಷಯದಲ್ಲಿ ಬಿಜೆಪಿ–ಜೆಡಿಎಸ್ ಮಧ್ಯೆ ಗೊಂದಲವಿಲ್ಲ. ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಾಗಿ ಕೆಲಸ ಮಾಡಿ ಗೆಲ್ಲಿಸುತ್ತೇವೆ. ಎನ್‌ಡಿಎ ಅಭ್ಯರ್ಥಿಗೆ ಜನ ಆಶೀರ್ವಾದ ಮಾಡಲಿದ್ದಾರೆ.ನಿಖಿಲ್ ಕುಮಾರಸ್ವಾಮಿ, ಅಧ್ಯಕ್ಷ, ಜೆಡಿಎಸ್ ಯುವ ಘಟಕ
‘ಎಡಿಜಿಪಿ ಹೆಸರಲ್ಲಿ ಕಾಂಗ್ರೆಸ್‌ನವರೇ ಬರೆದಿರುವ ಪತ್ರ’
‘ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂದೆಯಲ್ಲಿ ಮುಳುಗಿದೆ. ಅಧಿಕಾರಿಗಳು ವರ್ಗಾವಣೆಗೆ ದುಡ್ಡು ಕೊಡಬೇಕು. ಅದನ್ನೇ ಕುಮಾರಣ್ಣ ಹೇಳಿದ್ದಾರೆ. ಇದನ್ನು ಜೀರ್ಣಿಸಿಕೊಳ್ಳದ ಕಾಂಗ್ರೆಸ್‌ನ ಕಾನೂನು ತಜ್ಞರು ಹಾಗೂ ಮುಖ್ಯಮಂತ್ರಿಯೇ ಎಡಿಜಿಪಿ ಹೆಸರಲ್ಲಿ ಕುಮಾರಣ್ಣನ ವಿರುದ್ಧ ಪತ್ರ ಬರೆದು ಆತನ ಸಹಿ ಹಾಕಿಸಿದ್ದಾರೆ. ಇದು ಎಡಿಜಿಪಿ ಹುದ್ದೆಗೆ ಗೌರವ ತರುವ ನಡೆಯಲ್ಲ’ ಎಂದು ನಿಖಿಲ್ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
‘ಯಾರು ಈ ಪತ್ರ ಬರೆದು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಕೈಯಲ್ಲಿ ಸಹಿ ಹಾಕಿಸಿದ್ದಾರೆಂಬುದು ಗೊತ್ತಿದೆ. ಸರ್ಕಾರ ಎಷ್ಟರ ಮಟ್ಟಿಗೆ ಅಧಿಕಾರ ದುರುಪಯೋಗ ಮತ್ತು ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದು ಇದರಲ್ಲೇ ಗೊತ್ತಾಗುತ್ತದೆ. ಎಚ್.ಡಿ. ದೇವೇಗೌಡರು ಮತ್ತು ಕುಮಾರಣ್ಣನವರು ತಮ್ಮ ಅಧಿಕಾರವಧಿಯಲ್ಲಿ ಎಂದಿಗೂ ಇಂತಹ ಮಾಡಿಲ್ಲ’ ಎಂದರು.
‘ಎಡಿಜಿಪಿ ಅಮಾನತು ಮಾಡಲಿ’
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಲೋಕಾಯುಕ್ತ ಎಡಿಜಿಪಿ ಬರೆದಿರುವ ಪತ್ರದಲ್ಲಿ ಬಳಸಿರುವ ಪದಗಳು ಖಂಡನೀಯ. ಅವರಿಗೆ ಏನಾದರೂ ನೋವಾಗಿದ್ದರೆ ಕೋರ್ಟ್‌ನಲ್ಲಿ ಪ್ರಶ್ನಿಸಬೇಕಿತ್ತು. ಎಚ್‌ಡಿಕೆ ಅವರನ್ನು ಪ್ರಾಣಿಗೆ ಹೋಲಿಸಿ ಬರೆದಿರುವ ಅಧಿಕಾರಿಯ ಪತ್ರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಎಡಿಜಿಪಿ ಅಧಿಕಾರಿಯೇ ಹೊರತು ಜನಪ್ರತಿನಿಧಿಯಲ್ಲ. ಸರ್ಕಾರ ಕೂಡಲೇ ಅವರನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಪಕ್ಷದಿಂದ ಬೀದಿಗಿಳಿದು ಹೋರಾಟ ಮಾಡಲಾಗುವುದು’ ಎಂದು ಮಾಜಿ ಶಾಸಕ ಸುರೇಶ್ ಗೌಡ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.