ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನೂನು ಪ್ರಾಧಿಕಾರಕ್ಕೆ ಸ್ವಯಂಸೇವಕರ ನೇಮಕ

ಅಂಗನವಾಡಿ ಮೇಲೆ ಸೇವಕರಿಂದ ವಿಶೇಷ ನಿಗಾ; ಅರ್ಜಿ ಸಲ್ಲಿಸಲು ಜುಲೈ 20 ಕಡೆ ದಿನ
Published 9 ಜುಲೈ 2024, 4:59 IST
Last Updated 9 ಜುಲೈ 2024, 4:59 IST
ಅಕ್ಷರ ಗಾತ್ರ

ರಾಮನಗರ: ‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಗಳಿಗೆ ವಿವಿಧ ರೀತಿಯ ಕಾನೂನು ನೆರವು ನೀಡುವುದಕ್ಕಾಗಿ, ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗುತ್ತಿದೆ’ ಎಂದು ನಗರದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಪಿ.ಆರ್ ಹೇಳಿದರು.

‘ನಿವೃತ್ತ ನೌಕರರು, ಶಿಕ್ಷಕರು, ಹಿರಿಯ ನಾಗರಿಕರು, ಸಮಾಜ ಸೇವೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಉಪನ್ಯಾಸಕರು, ವೈದ್ಯರು, ಕಾನೂನು ವಿದ್ಯಾರ್ಥಿಗಳು, ರಾಜಕಿಯೇತರ ಸಂಘ–ಸಂಸ್ಥೆಗಳ ಸದಸ್ಯರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಸೇವಾ ಮನೋಭಾವ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ’ ಎಂದು ಕೋರ್ಟ್ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆ ಹಾಗೂ ಆಯಾ ತಾಲ್ಲೂಕುಗಳಲ್ಲಿ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸುವವರು ಕನಿಷ್ಠ ಎಸ್ಎಸ್‌ಎಲ್‌ಸಿ ಪಾಸಾಗಿರಬೇಕು. ವಸ್ತುಸ್ಥಿತಿ ಹಾಗೂ ಪರಿಸ್ಥಿತಿಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರಬೇಕು. ಕ್ರಿಮಿನಲ್ ಅಪರಾಧದ ಹಿನ್ನೆಲೆ ಇರಬಾರದು. ಸ್ವಯಂ ಸೇವಕರ ಹುದ್ದೆಗಳು ರಾಮನಗರದಲ್ಲಿ 100 ಇದ್ದು, ಉಳಿದ ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿಯಲ್ಲಿ ತಲಾ 25 ಹುದ್ದೆಗಳಿವೆ’ ಎಂದು ಹೇಳಿದರು.

‘ನೇಮಕಾತಿಯು ಮೂರು ವರ್ಷದ ಅವಧಿಗೆ ತಾತ್ಕಾಲಿಕವಾಗಿದ್ದು, ಯಾವುದೇ ಸಂಬಳವಿರುವುದಿಲ್ಲ. ಕೆಲಸಕ್ಕೆ ಅನುಗುಣವಾಗಿ ಕೇವಲ ₹500 ಗೌರವಧನ ನೀಡಲಾಗುವುದು. ಆಸಕ್ತರು ತಮ್ಮ ಸ್ವ ವಿವರ, ಇತ್ತೀಚಿನ ಪಾಸ್‌ಪೋರ್ಟ್ ಅಳತೆ ಭಾವಚಿತ್ರ, ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆ ಹಾಗೂ ಕಾರ್ಯನಿರ್ವಹಿಸುವ ಕುರಿತು ಸ್ವಇಚ್ಛಾ ಪತ್ರವನ್ನು ಜುಲೈ 20 ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು’ ಎಂದು ತಿಳಿಸಿದರು.

‘ಅರ್ಜಿಯ ಲಕೋಟೆ ಮೇಲೆ ಜಿಲ್ಲಾ ಅಥವಾ ತಾಲ್ಲೂಕು ‘ಅರೆಕಾಲಿಕ ಸ್ವಯಂಸೇವಕರ ನೇಮಕಾತಿಗಾಗಿ’ ಎಂದು ನಮೂದಿಸಿರಬೇಕು. ಅರ್ಜಿ ಸಲ್ಲಿಸಬೇಕಾದ ವಿಳಾಸ: ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯದ ಆವರಣ, ರಾಮನಗರ–562159. ಕಚೇರಿಗೆ ಖುದ್ದಾಗಿ ಬಂದು ಸಹ ಅರ್ಜಿ ಸಲ್ಲಿಸಬಹುದು’ ಎಂದು ಮಾಹಿತಿ ನೀಡಿದರು.

ಸ್ಥಳೀಯ ಸಂಸ್ಥೆಗಳಾದ ನಗರಸಭೆ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2024–25ನೇ ಸಾಲಿಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ 5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ. ತೆರಿಗೆದಾರರು ಇದರ ಪ್ರಯೋಜನ ಪಡೆಯಬೇಕು

– ಸವಿತಾ ಪಿ.ಆರ್ ಹಿರಿಯ ಸಿವಿಲ್ ನ್ಯಾಯಾಧೀಶೆ ರಾಮನಗರ

‘ಅಂಗನವಾಡಿಗಳಲ್ಲಿ ಅವ್ಯವಸ್ಥೆ’‌ ‘

ತಾಲ್ಲೂಕಿನ ಕೆಲ ಅಂಗನವಾಡಿಗಳಿಗೆ ಇತ್ತೀಚೆಗೆ ಭೇಟಿ ನೀಡಿದಾಗ ಅಲ್ಲಿ ಅವ್ಯವಸ್ಥೆ ಇರುವುದು ಗೊತ್ತಾಗಿದೆ. ಕಳಪೆ ಆಹಾರ ಅಶುದ್ಧ ನೀರು ಶೌಚಾಲಯದ ಸಮಸ್ಯೆ ಅವಧಿ ಮುಗಿದ ಆಹಾರ ಪದಾರ್ಥಗಳ ಬಳಕೆ ಕಟ್ಟಡ ಶಿಥಿಲವಾಗಿರುವುದು ಆಟಕ್ಕೆ ಸ್ಥಳದ ಅಭಾವ ಸ್ವಚ್ಛತೆ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಗಮನಕ್ಕೆ ಬಂದಿವೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು ಅವರೂ ಭೇಟಿ ನೀಡಿ ಪರಿಶೀಲಿಸಿದ್ದಾರೆ’ ಎಂದು ಸವಿತಾ ಪಿ.ಆರ್. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT