ಶುಕ್ರವಾರ, ಜನವರಿ 28, 2022
24 °C

ಕನಕಪುರ: ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ಕನ್ನಡ ಭಾಷೆಯ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಡಾ.ರಾಜ್‌ಕುಮಾರ್‌ ಅವರು ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ತಾವು ಮಾಡಿರುವ ಸಹಾಯವನ್ನು ಯಾರಿಗೂ ತಿಳಿಯದಂತೆ ಮಾಡಿದ್ದಾರೆ. ಅವರ ದಾರಿಯಲ್ಲಿ ನಾವು ಸಾಗೋಣ’ ಎಂದು ಹೆಲ್ಪಿಂಗ್‌ ಸಮಾರಿಟನ್ಸ್‌ ಫೌಂಡೇಷನ್‌ ಅಧ್ಯಕ್ಷ ಸಾಮ್ಯಯಲ್‌ ಹೇಳಿದರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ಅರಳಾಳುಸಂದ್ರ ಗ್ರಾಮದಲ್ಲಿರುವ ಕೀರ್ತನಾ ವಿದ್ಯಾನಿಕೇತನ ಶಾಲೆಯಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಹಾಗೂ ಪುನೀತ್‌ ರಾಜ್‌ಕುಮಾರ್‌ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ನಾವು ಏನಾದರು ಸಹಾಯ ಮಾಡಿದರೆ ಅದು ನಾಲ್ಕು ಜನರಿಗೆ ತಿಳಿಯಬೇಕು, ಜನರು ನಮ್ಮನ್ನು ಗುರಿತಿಸಬೇಕು. ನಾವು ಮಾಡಿದ ಸಹಾಯದಿಂದ ನಮಗೆ ಏನಾದರೂ ಲಾಭ ಆಗಬೇಕು ಎಂಬ ಲೆಕ್ಕಾಚಾರದಲ್ಲಿ ಇಂದು ಜನರು ಸಹಾಯ ಮಾಡುತ್ತಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಯಾರು ಊಹಿಸದಷ್ಟು ಸಹಾಯ ಮಾಡಿದ್ದಾರೆ. ಅದು ಯಾರಿಗೂ ಗೊತ್ತಾಗದ ರೀತಿಯಲ್ಲಿ ಎಂಬುದನ್ನು ನಾವು ಇಲ್ಲಿ ಗಮನಿಸಬೇಕಿದೆ’ ಎಂದರು.

‘ಡಾ.ರಾಜ್‌ಕುಮಾರ್‌ ಮತ್ತು ಪುನೀತ್‌ರಾಜ್‌ಕುಮಾರ್‌ ತಮ್ಮ ಕಣ್ಣುಗಳ ದಾನದಿಂದ ಜನರ ಕಣ್ಣು ತೆರೆಸಿದ್ದಾರೆ. ಆ ಕಾರಣದಿಂದ ಇಂದು ಸಾವಿರಾರು ಸಂಖ್ಯೆಯಲ್ಲಿ ತಮ್ಮ ಕಣ್ಣುಗಳನ್ನು ದಾನ ಮಾಡಲು ಜನರು ಮುಂದೆ ಬರುತ್ತಿದ್ದಾರೆ. ಮಣ್ಣಲ್ಲಿ ಮಣ್ಣಾಗುವ ಈ ಕಣ್ಣುಗಳನ್ನು ನಾವು ದಾನ ಮಾಡಿ ಬೇರೆಯವರಿಗೆ ಬೆಳಕಾಗೋಣ’ ಎಂದು ತಿಳಿಸಿದರು.

ಹಾರೋಹಳ್ಳಿ ರೋಟರಿ ಮಾಜಿ ಅಧ್ಯಕ್ಷ ಮಹಮ್ಮದ್‌ ಏಜಾಸ್‌ ಮಾತನಾಡಿ, ‘ನಮ್ಮ ಜೀವನದಲ್ಲಿ ನಮ್ಮ ಆಚಾರ ವಿಚಾರಗಳು, ನಾವು ನಡೆದುಕೊಳ್ಳುವ ರೀತಿ ಮುಖ್ಯವಾಗುತ್ತದೆ. ಏನಾದರೂ ಆಗು ಆದರೆ ಅದಕ್ಕೆ ಮೊದಲು ನೀ ಮಾನವನಾಗು ಎಂಬಂತೆ ಮೊದಲು ನಾವು ಮನುಷ್ಯತ್ವವನ್ನು ಬೆಳೆಸಿಕೊಳ್ಳಬೇಕು. ನಾವು ಹುಟ್ಟಿದ ಮಣ್ಣಿಗೆ ಋಣಿಯಾಗಿರಬೇಕು. ಆ ಮಣ್ಣಿನ ಆಚಾರ ವಿಚಾರಗಳನ್ನು ಪಾಲಿಸಬೇಕು, ಭಾಷಾಭಿಮಾನವನ್ನು ಬೆಳಸಿಕೊಳ್ಳಬೇಕು’ ಎಂದು ಹೇಳಿದರು.

ಶಾಲಾ ಮಕ್ಕಳು ಕನ್ನಡ ರಾಜ್ಯೋತ್ಸವ, ಪುನೀತ್ ಸ್ಮರಣೆ ಮತ್ತು ಮಕ್ಕಳ ದಿನಾಚರಣೆ ಪ್ರಯುಕ್ತ ವೇ‍ಷಭೂಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ಕಾರ್ಯಕ್ರಮ, ಪುನೀತ್‌ ರಾಜ್‌ಕುಮಾರ್‌ ಹಾಡುಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಏಕಾಭಿನಯ, ಪೂಜಾ ಕುಣಿತ, ಕಂಸಾಳೆ ನೃತ್ಯ ಕಾರ್ಯಕ್ರಮ ಜರುಗಿದವು.

ಕೀರ್ತನಾ ಶಾಲೆಯ ವ್ಯವಸ್ಥಾಪಕ ಮಹೇಶ್‌, ಕೃಷ್ಣಮೂರ್ತಿ, ಹೆಲ್ಪಿಂಗ್‌ ಸಮರಿಂತಸ್‌ ಫೌಂಡೇಶನ್‌ ನ ರಾಘವ್‌, ರಮ್ಯಾ, ಭವ್ಯ, ವಿಜಿ, ಮುಬಾರಕ್‌, ಫೌಝಿಯಾ ಸುಲ್ತಾನ್‌, ಕೀರ್ತನಾ ವಿದ್ಯಾನಿಕೇತನ ಶಾಲೆಯ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು