ಮಂಗಳವಾರ, ಫೆಬ್ರವರಿ 25, 2020
19 °C
ಕಳೆದ ಡಿ. 25ರಂದು ಸೃಷ್ಟಿಯಾಗಿದ್ದ ವಿವಾದ

ಕಪಾಲ ಬೆಟ್ಟ ವಿವಾದ ಮೆತ್ತಗಾದ ಸರ್ಕಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ರಾಮನಗರ: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕನಕಪುರ ತಾಲ್ಲೂಕಿನ ಕಪಾಲ ಬೆಟ್ಟದ ಜಮೀನು ಹಂಚಿಕೆ ಕುರಿತು ಸರ್ಕಾರ ಇನ್ನೂ ಜಿಲ್ಲಾಡಳಿತದಿಂದ ವರದಿ ಪಡೆದಿಲ್ಲ. ಆರಂಭದಲ್ಲಿ ತೀವ್ರ ಆಸಕ್ತಿ ತೋರಿದ್ದ ಸರ್ಕಾರ ಕ್ರಮೇಣ ಪ್ರಕರಣದ ವಿಚಾರದಲ್ಲಿ ಮೃದು ನಿಲುವು ತಾಳತೊಡಗಿದೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿಸಿದೆ.

ಕಳೆದ ಡಿಸೆಂಬರ್‌ 25ರಂದು ಕನಕಪುರ ಶಾಸಕ ಡಿ.ಕೆ. ಶಿವಕುಮಾರ್ ಯೇಸು ಪ್ರತಿಮೆ ನಿರ್ಮಾಣಕ್ಕೆ ಚಾಲನೆ ನೀಡುವ ಮೂಲಕ ವಿವಾದ ಸೃಷ್ಟಿಯಾಗಿತ್ತು. ಪ್ರತಿಮೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರವು ಹತ್ತು ಎಕರೆ ಗೋಮಾಳ ಭೂಮಿಯನ್ನು ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ನೋಂದಣಿ ಮಾಡಿಕೊಟ್ಟಿರುವುದು ನಂತರ ಬಹಿರಂಗವಾಗಿತ್ತು.
ಭೂಮಿ ಮಂಜೂರು ಮಾಡಿದ ಕಾರಣಕ್ಕೆ ಕನಕಪುರ ತಹಶೀಲ್ದಾರ್‌ ಆನಂದಯ್ಯ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಈ ಬಗ್ಗೆ ಜಿಲ್ಲಾಡಳಿತದಿಂದ ವರದಿ ಪಡೆದು ಜಮೀನು ವಾಪಸ್‌ ಪಡೆದುಕೊಳ್ಳುವುದಾಗಿ ಹೇಳಿತ್ತು.

ಸಂಘಟನೆಗಳೂ ಉಲ್ಟಾ: ಯೇಸು ಪ್ರತಿಮೆ ನಿರ್ಮಾಣ ವಿರೋಧಿಸಿ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಜನವರಿ 13ರಂದು ‘ಕನಕಪುರ ಚಲೋ’ ನಡೆದಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ಸರ್ಕಾರಕ್ಕೆ ಜ.25ರ ಗಡುವು ನೀಡಲಾಗಿತ್ತು. ಆದರೆ ಇದೇ 9ರಂದು ರಾಮನಗರದಲ್ಲಿ ನಡೆದ ಆರ್‌ಎಸ್‌ಎಸ್‌ ಪಥ ಸಂಚಲನದಲ್ಲಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್‌ ‘ನಾವು ಆ ರೀತಿ ಯಾವುದೇ ಗಡುವು ನೀಡಿಲ್ಲ. ಸರ್ಕಾರ ತನ್ನ ಕೆಲಸ ಮಾಡುತ್ತದೆ’ ಎಂದು ಹೇಳಿ ಅಚ್ಚರಿ ಮೂಡಿಸಿದ್ದರು.

ಪ್ರಕರಣದ ಕುರಿತು ಕನಕಪುರ ತಹಶೀಲ್ದಾರ್‌ ಅವರು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕಿದೆ. ಆದರೆ ಇನ್ನೂ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಮಾಹಿತಿ ಪಡೆಯಲು ರಾಮನಗರ ಜಿಲ್ಲಾಧಿಕಾರಿ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)