ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ವಿಷಯದಲ್ಲಿ ಭಾವೈಕ್ಯಕ್ಕೆ ಧಕ್ಕೆ: ಎಚ್.ಡಿ. ಕುಮಾರಸ್ವಾಮಿ ವಿಷಾದ

Last Updated 15 ಏಪ್ರಿಲ್ 2022, 4:29 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಇಡೀ ವಿಶ್ವದಲ್ಲೇ ಶ್ರೇಷ್ಠವಾದ ಸಂವಿಧಾನ ಹೊಂದಿರುವ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಧರ್ಮದ ವಿಷಯದಲ್ಲಿ ಕೆಲವು ಸಂಘಟನೆಗಳಿಂದ ಸಾಮರಸ್ಯ ಹಾಳಾಗುತ್ತಿದ್ದು, ಭಾವೈಕ್ಯತೆಗೆ ಧಕ್ಕೆಯಾಗುತ್ತಿದೆ’ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ವಿಷಾದಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಸಾಮರಸ್ಯ ಹಾಳು ಮಾಡುತ್ತಿರುವ ಕಾರ್ಯ ಮುಂದುವರೆಯಬಾರದು. ಯಾವುದೋ ಒಂದು ವರ್ಗ, ಸಮುದಾಯವನ್ನು ತುಳಿಯುವ ಕೆಲಸ ಮಾಡಬಾರದು. ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸಬೇಕು. ಅಂತಹ ವ್ಯವಸ್ಥೆ ಎಂದೆಂದಿಗೂ ಸೃಷ್ಟಿಯಾಗಬೇಕು’ ಎಂದು ಪ್ರತಿಪಾದಿಸಿದರು.

‘ಶೂದ್ರವರ್ಗ ಬದುಕಲು ಕಷ್ಟವಾದ ಕಠಿಣ ಪರಿಸ್ಥಿತಿ ಇದ್ದಾಗ ಸ್ವತಃ ತಾವೇ ಅದನ್ನು ಅನುಭವಿಸಿ ಮುಂದೆ ಇದನ್ನು ತಡೆದು ಸಮಾನತೆ ತರಬೇಕು ಎಂದು ಅಂಬೇಡ್ಕರ್ ಜೀವನದುದ್ದಕ್ಕೂ ಹೋರಾಟ ಮಾಡಿದರು. ಸಂವಿಧಾನದಲ್ಲಿ ಎಲ್ಲರೂ ಸಮಾನರೆಂದು ಎಲ್ಲರಿಗೂ ಸಮನಾಗಿ ಅವಕಾಶ ಸಿಗಬೇಕು ಎಂದು ಪ್ರತಿಪಾದಿಸಿದರು. ಶೋಷಿತ ವರ್ಗಗಳ ದನಿಯಾಗಿದ್ದ ಅವರಿಗೆ ಕೇವಲ ಪುಷ್ಪಾರ್ಚನೆ ಮಾಡಿದರೆ, ಸ್ಮರಣೆ ಮಾಡಿದರೆ ಗೌರವ ಸಲ್ಲಿಸಿದಂತಾಗುವುದಿಲ್ಲ. ಅವರ ಆಶಯಗಳನ್ನು ಈಡೇರಿಸಲು ಕಿಂಚಿತ್ತಾದರೂ ಶ್ರಮಿಸಬೇಕು’ ಎಂದರು.

ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಲ್ಲಿ ಭವನ ನಿರ್ಮಾಣವಾಗಿದೆ. ಆದರೆ ಅದನ್ನು ಸಮರ್ಪಕವಾಗಿ ಪೂರ್ಣಗೊಳಿಸದಿರುವುದು ನಾಚಿಕೆಯ ವಿಚಾರ. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದ್ದರೆ ಇಷ್ಟೊತ್ತಿಗೆ ಬಳಕೆಯಾಗಬೇಕಿತ್ತು. ಇನ್ನಾದರೂ ಎಚ್ಚೆತ್ತುಕೊಳ್ಳಿ, ಬಿಡುಗಡೆಯಾಗಿರುವ ಅನುದಾನವನ್ನು ಬಳಸಿಕೊಂಡು ಭವನವನ್ನು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಾಹಿತಿ ಡಾ.ಕಾಳೇಗೌಡ ನಾಗವಾರ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಅಂಬೇಡ್ಕರ್ ಜನ್ಮದಿನವನ್ನು ಇಡೀ ವಿಶ್ವವೇ ವಿಶ್ವ ಜ್ಞಾನ ದಿನ ಎಂದು ಕರೆಯುತ್ತಿದೆ. ಆದರೆ ನಾವು ಇನ್ನೂ ಜಾತಿ, ಭೇದ ಅಸ್ಪೃಶ್ಯತೆ ಆಚರಣೆಯಲ್ಲಿದ್ದೇವೆ. ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಸೇರಿದಂತೆ ನೂರಾರು ಮಹಾನ್ ವ್ಯಕ್ತಿಗಳು ಸಮಾನತೆಗಾಗಿ ಹೋರಾಡುತ್ತಲೇ ಬಂದಿದ್ದರೂ ಇದುವರೆಗೂ ಅದಕ್ಕೆ ಮುಕ್ತಿ ಸಿಕ್ಕಿಲ್ಲ ಎಂದು ವಿಷಾದಿಸಿದರು.

ದ್ವಿತೀಯ ಪಿಯುಸಿ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಪ್ರಶಾಂತ್, ಸದಸ್ಯ ಶ್ರೀನಿವಾಸಮೂರ್ತಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ನಾಗೇಶ್, ತಹಶೀಲ್ದಾರ್ ನಾಗೇಶ್, ಪೌರಾಯುಕ್ತ ಶಿವನಂಕಾರಿಗೌಡ, ಇಒ ಚಂದ್ರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT