ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾವೇರಿ | ಕಾನೂನಾತ್ಮಕ ಸಂಘಟಿತ ಹೋರಾಟವೇ ಪರಿಹಾರ: ನಿವೃತ್ತ ಐಪಿಎಸ್ ಚಂದ್ರಶೇಖರ್

Published 29 ಮೇ 2024, 7:01 IST
Last Updated 29 ಮೇ 2024, 7:01 IST
ಅಕ್ಷರ ಗಾತ್ರ

ರಾಮನಗರ: ‘ಕಾನೂನಾತ್ಮಕ ಸಂಘಟಿತ ಹೋರಾಟದಿಂದ ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ನ್ಯಾಯ ಸಿಗಲಿದೆ. ಅದಕ್ಕಾಗಿ ಹೋರಾಟಗಾರರು ಕಾನೂನು ಕೋಶವನ್ನು ರಚಿಸಿಕೊಂಡು ಹೋರಾಡಬೇಕು’ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ‘ಕಾವೇರಿ: ಒಂದು ಐತಿಹಾಸಿಕ ಹಿನ್ನೋಟ’ ಕೃತಿಯ ಲೇಖಕ ಸಿ. ಚಂದ್ರಶೇಖರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಅರ್ಚಕರಹಳ್ಳಿ ಬಳಿಯ ಬಿಜಿಎಸ್ ಅಂಧರ ಶಾಲೆಯಲ್ಲಿ ರೈತ ಸಂಘವು ಮಂಗಳವಾರ ಹಮ್ಮಿಕೊಂಡಿದ್ದ ‘ಕಾವೇರಿ ವಿವಾದ: ಹಿಂದೆ-ಇಂದು-ಮುಂದೆ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾವೇರಿ ಕುರಿತು ಸುಪ್ರೀಂ ಕೋರ್ಟ್ 2017ರಲ್ಲಿ ನೀಡಿರುವ ಐತೀರ್ಪು 2033ಕ್ಕೆ ಮುಕ್ತಾಯವಾಗಲಿದೆ. ಕಾವೇರಿ ವಿಚಾರದಲ್ಲಿ ನಮಗಾಗಿರುವ ಅನ್ಯಾಯವನ್ನು ಕಾನೂನು ಹೋರಾಟದ ಮೂಲಕವೇ ಸರಿಪಡಿಸಿಕೊಳ್ಳುವುದಕ್ಕೆ ಈಗಿನಿಂದಲೇ ತಯಾರಾಗಬೇಕು. ಅದಕ್ಕಾಗಿ ನಮಗೆ ಕಾನೂನು ಕೋಶದ ಅಗತ್ಯವಿದೆ. ಸುಪ್ರೀಂ ಕೋರ್ಟ್‍ನಲ್ಲಿ ವಾದ ಮಂಡಿಸಲು ಪರ ರಾಜ್ಯದ ವಕೀಲರ ಮೇಲಿನ ಅವಲಂಬನೆ ತಪ್ಪಬೇಕಿದೆ’ ಎಂದರು.

‘ಪ್ರತಿ ಸಲ ವಿವಾದ ಉಲ್ಬಣಗೊಂಡಾಗ ತಮಿಳುನಾಡು ಸರ್ಕಾರ ಕಾವೇರಿಗೆ ಸಂಬಂಧಿಸಿದ 1892 ಮತ್ತು 1924ರ ಒಪ್ಪಂದವನ್ನು ಉಲ್ಲೇಖಿಸುತ್ತದೆ. 1892ರಲ್ಲಿ ಒಪ್ಪಂದದಲ್ಲಿ ಮದ್ರಾಸ್ ಸರ್ಕಾರದ ಪೂರ್ವಾನುಮತಿ ಇಲ್ಲದೆ ಕಾವೇರಿ ಕೊಳ್ಳದಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳಬಾರದೆಂಬ ಷರತ್ತಿದೆ. ಒಪ್ಪಂದ ವಿರೋಧಿಸಲು ಕರ್ನಾಟಕಕ್ಕೆ ಹಿಂದೆ ಸಾಕಷ್ಟು ಅವಕಾಶವಿದ್ದರೂ ಮಾಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬ್ರಿಟಿಷ್ ಆಡಳಿತಾವಧಿಯ ಒಪ್ಪಂದವನ್ನು ಮುಂದಿಟ್ಟುಕೊಂಡು ತಮಿಳುನಾಡು ತನ್ನ ಹಕ್ಕು ಸ್ಥಾಪಿಸುತ್ತಾ ಬಂದಿದೆ. 1892ರ ಒಪ್ಪಂದ ಸೇರಿದಂತೆ ಕಾವೇರಿಗೆ ಸಂಬಂಧಿಸಿದ ಸ್ವಾತಂತ್ರ್ಯ ಪೂರ್ವ ಒಪ್ಪಂದಗಳ ಪ್ರಸ್ತುತತೆಯನ್ನು ಸುಪ್ರೀಂ ಕೋರ್ಟ್ ನಿರ್ಧರಿಸಿ ಸ್ಪಷ್ಟಪಡಿಸಬೇಕಿದೆ. ಕರ್ನಾಟಕ ಕೂಡ ಇದನ್ನು ಪ್ರಶ್ನಿಸಬೇಕಿದೆ’ ಎಂದು ಸಲಹೆ ನೀಡಿದರು.

ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಗೌಡ ಮಾತನಾಡಿ, ‘ಹಿಂದಿನ ತೀರ್ಪಿನ ಪ್ರಕಾರ ತಮಿಳುನಾಡಿಗೆ ಪ್ರತಿ ವರ್ಷ 205 ಟಿಎಂಸಿ ಅಡಿ ನೀರು ಬಿಡಬೇಕಿತ್ತು. ನಂತರ, 177 ಟಿಎಂಸಿ ಅಡಿಗೆ ನಿಗದಿಯಾಗಿದೆ. ಕಳೆದ 70 ವರ್ಷಗಳಲ್ಲಿ ಮಳೆ ಕೊರತೆಯಾದ 10 ವರ್ಷಗಳನ್ನು ಹೊರತುಪಡಿಸಿದರೆ, ಉಳಿದ ಅವಧಿಯಲ್ಲಿ ನಿಗದಿಗಿಂತ ಹೆಚ್ಚಿನ ನೀರನ್ನು ಬಿಟ್ಟಿದ್ದೇವೆ’ ಎಂದರು.

‘2022-23ನೇ ಸಾಲಿನಲ್ಲಿ ನಾವು 663 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೇವೆ. ಇದಕ್ಕೆ ಮುಖ್ಯ ಕಾರಣ, ಕಾವೇರಿ ನೀರನ್ನು ನಾವು ಸೂಕ್ತವಾಗಿ ಬಳಸಿಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಿಕೊಂಡಿಲ್ಲ. ಪ್ರವಾಹ ಬಂದಾಗಿನ ನೀರು ಸದ್ಬಳಕೆಗೆ ಜಲಾಶಯದ ಮೇಲ್ಭಾಗದಲ್ಲಿ ಹೈಲೆವಲ್ ಫ್ಲಡ್ ಕಾಲುವೆ ನಿರ್ಮಿಸಬೇಕು. ಹೆಚ್ಚುವರಿ ನೀರನ್ನು ಕಾಲುವೆ ಮೂಲಕ ಹರಿಸಿ, ಬರಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಸಬಹುದು’ ಎಂದು ಹೇಳಿದರು.

ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಕಾರ್ಯದರ್ಶಿ ಧರಣೀಶ್ ರಾಂಪುರ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಮಿತಿ ಅಧ್ಯಕ್ಷ ಸು.ತ. ರಾಮೇಗೌಡ, ರೈತ ಮುಖಂಡರಾದ ಬೋರಯ್ಯ, ನಾರಾಯಣಗೌಡ, ರಾಮೇಗೌಡ, ಶಿವಕುಮಾರ್, ವಾಸು, ನೇಗಿಲಯೋಗಿ ಟ್ರಸ್ಟ್‌ನ ಪಟೇಲ್‍ರಾಜು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕುಮಾರಸ್ವಾಮಿ ಹಾಗೂ ಇತರರು ಇದ್ದರು.

ಕಾವೇರಿ ಹೋರಾಟಕ್ಕೆ ಆದಿಚುಂಚನಗಿರಿ ಮಠವು ನೇತೃತ್ವ ವಹಿಸಿ ಮಾರ್ಗದರ್ಶನ ಮಾಡಬೇಕು. ಜೊತೆಗೆ ಬೇರೆ ಸಮುದಾಯಗಳ ಮಠಾಧೀಶರು ಹಾಗೂ ವಿವಿಧ ಸಮುದಾಯಗಳ ಸಂಘ–ಸಂಘಟನೆಗಳು ಕೂಡ ಕೈ ಜೋಡಿಸಬೇಕು
– ಸಿ. ಪುಟ್ಟಸ್ವಾಮಿ ರೈತ ಸಂಘದ ಮುಖಂಡ
ಕಾವೇರಿ ನೀರಿನ ಹೋರಾಟ ಸೇರಿದಂತೆ ರೈತಪರ ಹೋರಾಟಗಳನ್ನು ಮಠವು ಸದಾ ಬೆಂಬಲಿಸಲಿದೆ. ವ್ಯವಸ್ಥಿತ ಹೋರಾಟಕ್ಕೆ ನುರಿತವರ ಸಮಿತಿ ರಚಿಸಿ. ಅವರು ಕರೆ ಕೊಟ್ಟಾಗ ರೈತರು ಹೋರಾಟಕ್ಕೆ ಧುಮುಕಲು ತಯಾರಿರಬೇಕು
ಅನ್ನದಾನೇಶ್ವರನಾಥ ಸ್ವಾಮೀಜಿ ಆದಿಚುಂಚನಗಿರಿ ಶಾಖಾ ಮಠ ರಾಮನಗರ
ನಮ್ಮಲ್ಲಿ ನೀರು ಸಂಗ್ರಹವು ವ್ಯವಸ್ಥಿತವಾಗಿಲ್ಲ. ನಮ್ಮ ಪಾಲಿನ ನೀರಿಗೆ ತಕ್ಕಂತೆ 11 ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿ ಮಾಡಲು ಸಾಧ್ಯವಾಗಿಲ್ಲ. ತಮಿಳುನಾಡು 15 ಲಕ್ಷ ಹೆಕ್ಟೇರ್‌ಗೂ‌ ಮೀರಿ ನೀರಾವರಿ ಮಾಡಿಕೊಂಡಿದೆ
– ಸುನಂದಾ ಜಯರಾಂ ರೈತಪರ ಹೋರಾಟಗಾರ್ತಿ ಮಂಡ್ಯ

‘ಕೆಆರ್‌ಎಸ್ ಆಯಸ್ಸು 100 ವರ್ಷ ಎಂದಿದ್ದರು’

‘1930ರಲ್ಲಿ ನಿರ್ಮಾಣಗೊಂಡಿರುವ ಕೆಆರ್‌ಎಸ್‌ ಜಲಾಶಯದ ಆಯುಸ್ಸು 100 ವರ್ಷ ಎಂದು ಅಂದಿನ ಎಂಜಿನಿಯರ್‌ಗಳು ಹೇಳಿದ್ದರು. ಅದರಂತೆ ಜಲಾಶಯದ ಆಯಸ್ಸು ಇನ್ನೂ 7 ವರ್ಷವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜಲಾಶಯದ ಸಂರಕ್ಷಣೆ ಜೊತೆಗೆ ಅದರ ಆಯಸ್ಸು ಹೆಚ್ಚಳಕ್ಕೆ ಏನು ಕ್ರಮ ಕೈಗೊಂಡಿದೆ ಎಂಬುದು ಸ್ಪಷ್ಟವಿಲ್ಲ. ಈ ಬಗ್ಗೆ ಯೋಜನೆಯನ್ನು ರೂಪಿಸುವ ಅಗತ್ಯವಿದೆ’ ಎಂದು ಚಂದ್ರಶೇಖರ್ ಹೇಳಿದರು.

‘ಮೇಕೆದಾಟು ಯೋಜನೆಗೆ ನೂರೆಂಟು ಸವಾಲು’ ‘ರಾಜ್ಯದ ಮಹತ್ವಕಾಂಕ್ಷಿ ಮೇಕೆದಾಟು ಯೋಜನೆ ವಿಷಯವು ಸಿಡಬ್ಲ್ಯೂಸಿ ಸಭೆಯಲ್ಲಿ ಪ್ರಸ್ತಾಪವಾಗದಂತೆ ತಮಿಳುನಾಡಿನ ಅಧಿಕಾರಿಗಳು ನೋಡಿಕೊಂಡಿದ್ದರು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೇರಿದಂತೆ ಹಲವು ಆಯಕಟ್ಟಿನ ಹುದ್ದೆಗಳಲ್ಲಿ ತಮಿಳುನಾಡಿನವರೇ ಇರುವುದರಿಂದ ನಮಗೆ ಹಿನ್ನಡೆಯಾಗುತ್ತಿದೆ.

ನೂರೆಂಟು ಸವಾಲುಗಳನ್ನು ದಾಟಿ ಮೇಕೆದಾಟು ಅನುಷ್ಠಾನಗೊಳಿಸಬೇಕಿದೆ. ಹಾಗಾಗಿ ಪರ್ಯಾಯವಾಗಿ ಕಾವೇರಿಗೆ ಅಲ್ಲಲ್ಲಿ ಸಣ್ಣ ಜಲಾಶಯಗಳನ್ನು ನಿರ್ಮಿಸಿಕೊಂಡು ನೀರು ಸಂಗ್ರಹಿಸಿಕೊಳ್ಳುವತ್ತ ಗಮನ ಹರಿಸಬೇಕಿದೆ’ ಎಂದು ವೆಂಕಟೇಗೌಡ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT