ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಘಟನೆ ಕೊರತೆಯಿಂದ ಸಿಗದ ಸೌಲಭ್ಯ’-ಧನಶೇಖರ್

Last Updated 6 ಮೇ 2022, 4:27 IST
ಅಕ್ಷರ ಗಾತ್ರ

ಹುಣಸಗಿ: ಅಸಂಘಟಿತ ಕಾರ್ಮಿಕರು ಸಂಘಟನೆಯ ಕೊರತೆಯಿಂದಾಗಿ ಇಂದಿಗೂ ಸೌಲಭ್ಯ ಪಡೆದುಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕ ಯೂನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಧನಶೇಖರ್ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಸಂಘಟಿತ ವಲಯ ಹಾಗೂ ಅಸಂಘಟಿತ ವಲಯದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಶೇ 93 ರಷ್ಟು ಜನತೆ ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ ಕೃಷಿ, ಕಟ್ಟಡ ಕಾರ್ಮಿಕ ಸೇರಿದಂತೆ 127 ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಂದಲೇ ದೇಶದ ವಾರ್ಷಿಕ ಆದಾಯ ಶೇ 65 ರಷ್ಟು ಹೆಚ್ಚಿದೆ. ಎಲ್ಲ ಕಾರ್ಮಿಕರು ಒಂದೇ ಸೂರಿನಡಿ ಸಂಘಟಿತರಾಗುವ ಮೂಲಕ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಒಂದಾಗುವದು ಅಗತ್ಯವಿದೆ ಎಂದು ಹೇಳಿದರು.

ಕಟ್ಟಡ ನಿರ್ಮಾಣ ಸೇರಿದಂತೆ ಇತರ ಕೆಲಸಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಹಾಗೂ ಅವರ ಕುಟುಂಬಕ್ಕಾಗಿಯೇ ಸರ್ಕಾರಗಳು ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಾರ್ಮಿಕರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ ಎಂದು ವಿವರಿಸಿದರು.

₹10 ಲಕ್ಷಕ್ಕಿಂತ ಹೆಚ್ಚು ಹಣದಿಂದ ಮನೆ ಹಾಗೂ ಇತರ ಕೆಲಸಗಳ ನಿರ್ಮಾಣಕ್ಕೆ ಕಾರ್ಮಿಕರನ್ನು ಬಳಕೆ ಮಾಡುತ್ತಿದ್ದರೆ ಅಂತಹ ಸಂದರ್ಭದಲ್ಲಿ ಶೇ 1ರಷ್ಟು ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಇಲಾಖೆಯಲ್ಲಿ ಮೀಸಲು ಇಡಲಾಗುತ್ತಿದೆ ಎಂದು ಸೌಲಭ್ಯಗಳ ಕುರಿತು ವಿವರವಾಗಿ ತಿಳಿಸಿದರು.

ಕಾರ್ಮಿಕ ಇಲಾಖೆಯ ಅಧಿಕಾರಿ ಗಂಗಾಧರ ಮಾತನಾಡಿ, ನಮ್ಮ ಇಲಾಖೆಯ ಅಡಿಯಲ್ಲಿ ಕಟ್ಟಡ ಸೇರಿದಂತೆ ಇತರ ಕಾರ್ಮಿಕರಲ್ಲಿ ವಿವಿಧ ಯೋಜನೆಯಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಆದರೆ ಎಲ್ಲರೂ ಸರಿಯಾದ ರೀತಿಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲಾತಿ ಸಲ್ಲಿಸಿ ಸೌಲಭ್ಯ ಪಡೆಯಬೇಕು ಎಂದು ಸಲಹೆ ನೀಡಿದರು.

ಸಾನಿಧ್ಯ ವಹಿಸಿದ್ದ ಗುಳಬಾಳ ರಾಮಲಿಂಗೇಶ್ವರ ಮಠದ ಮರಿ ಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ನಿತ್ಯವೂ ಕಷ್ಟಪಷ್ಟು ದುಡಿಮೆ ಮಾಡುತ್ತಿರಿ. ಆದರೆ ಬಂದ ಹಣವನ್ನು ಹಾಗೇ ವ್ಯರ್ಥ ಖರ್ಚು ಮಾಡುತ್ತಿರಿ. ಆದ್ದರಿಂದ ದುಡಿದ ಹಣದಲ್ಲಿ ಕೆಲ ಭಾಗವನ್ನು ಉಳಿತಾಯ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಗ್ರೇಡ್-2 ತಹಶಿಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಿದರು. ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಚತ್ರುನಾಯಕ ಚವಾಣ್ ಅಧ್ಯಕ್ಷತೆ ವಹಿಸಿದ್ದರು.

ಮುಖಂಡರಾದ ವಿರೇಶ ಚಿಂಚೋಳಿ, ಬಸವರಾಜ ಮಲಗಲ ದಿನ್ನಿ, ಶರಣು ದಂಡಿನ್, ಗುರುಲಿಂಗಪ್ಪ ಸಜ್ಜನ, ಸಂಗಣ್ಣ ವೈಲಿ, ವಿರುಪಾಕ್ಷಿ ಸ್ಥಾವರಮಠ, ಬಸಣ್ಣ ದೇಸಾಯಿ, ಶಂಕರ್ ದೇಸಾಯಿ, ಭೀಮಣ್ಣ ದೊರಿ, ಅನೀಫ್ ಸಾಬ ಬೆಣ್ಣುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT