ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ | ನೋಡಲು ಹೈಟೆಕ್‌ ಆಸ್ಪತ್ರೆ; ಸಿಬ್ಬಂದಿ ಕೊರತೆ

₹50ಕೋಟೆ ವೆಚ್ಚದಲ್ಲಿ 5 ಅಂತಸ್ತುಗಳಲ್ಲಿ ಆಸ್ಪತ್ರೆ ನಿರ್ಮಾಣ
Published 1 ಜುಲೈ 2024, 8:20 IST
Last Updated 1 ಜುಲೈ 2024, 8:20 IST
ಅಕ್ಷರ ಗಾತ್ರ

ಕನಕಪುರ: ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಧುನಿಕ ಸೌಲಭ್ಯಗಳಿಂದ ನಿರ್ಮಾಣಗೊಂಡಿದೆ. ಆದರೆ, ಅಗತ್ಯ ಸಿಬ್ಬಂದಿ ಇಲ್ಲದೆ ಆರೋಗ್ಯ ಸೇವೆ ಮರೀಚಿಕೆ ಆಗಿಯೇ ಉಳಿದಿದೆ.

ಇನ್ಫೊಸಿಸ್‌ ಫೌಂಡೇಷನ್‌ನ ಸುಧಾಮೂರ್ತಿ ಕನಕಪುರ ತಾಲ್ಲೂಕಿನ ಜನರಿಗೆ ಕೊಡುಗೆಯಾಗಿ ಈ ಆಸ್ಪತ್ರೆಯನ್ನು ನೀಡಿದ್ದಾರೆ. ರಾಜ್ಯದ ಅತ್ಯುತ್ತಮ ಅಸ್ಪತ್ರೆ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾಯಿ ಮತ್ತು ಮಕ್ಕಳಿಗೆ ಎಲ್ಲ ರೀತಿಯ ಆರೋಗ್ಯ ಸೇವೆ ಇಲ್ಲಿಯೇ ಸಿಗಬೇಕು ಎನ್ನುವ ಉದ್ದೇಶದಿಂದ ನಿರ್ಮಾಣ ಮಾಡಲಾಗಿದೆ. ₹50ಕೋಟೆ ವೆಚ್ಚದಲ್ಲಿ 5 ಅಂತಸ್ತುಗಳಲ್ಲಿ ನಿರ್ಮಾಣ ಮಾಡಲಾಗಿದೆ.

ಸುಸಜ್ಜಿತ ಆಸ್ಪತ್ರೆ ಇದ್ದರೂ ವೈದ್ಯಕೀಯ ಸೇವೆ ಸಿಗದೆ ಜನರು ದಯಾನಂದ ಸಾಗರ್‌ ಆಸ್ಪತ್ರೆ, ಬೆಂಗಳೂರಿನ ವಾಣಿ ವಿಲಾಸ್‌ ಆಸ್ಪತ್ರೆಗೆ ಹೋಗಬೇಕಾಗಿದೆ. ಈ ಹಿಂದೆ 30 ಹಾಸಿಗೆ ಹೆರಿಗೆ ಆಸ್ಪತ್ರೆ ಇತ್ತು. ನಂತರದಲ್ಲಿ ಅದೇ ಜಾಗದಲ್ಲಿ ಈಗ ಹೊಸದಾಗಿ 100 ಹಾಸಿಗೆ ತಾಯಿ ಮತ್ತು ಮಕ್ಕಳ ಹೈಟೆಕ್‌ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದರೂ ವೈದ್ಯರು, ನೌಕರರು ಹಾಗೂ ಸಿಬ್ಬಂದಿ ಕೊರತೆ ಇದೆ.

ಕಟ್ಟಡ ಉದ್ಘಾಟನೆಗೊಂಡು ಒಂದು ವರ್ಷವಾದರೂ ಆಸ್ಪತ್ರೆ ಒಳಗಡೆ ಪೂರ್ಣ ಪ್ರಮಾಣದಲ್ಲಿ ಇಂಟೀರಿಯರ್‌ ಕೆಲಸ ಮುಗಿದಿಲ್ಲ. ತೀವ್ರ ನಿಗಾ ಘಟಕ ಪ್ರಾರಂಭಗೊಂಡಿಲ್ಲ. ಈ ಆಸ್ಪತ್ರೆಯಲ್ಲಿ ಒಬ್ಬರು ಮಕ್ಕಳ ವೈದ್ಯರು, ಒಬ್ಬರು ಪ್ರಸೂತಿ ತಜ್ಞರು, ಇವರಿಬ್ಬರು ಕಾಯಂ ವೈದ್ಯರನ್ನು ಬಿಟ್ಟರೆ, ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಮಾತ್ರ ಇದ್ದು ಇಡೀ ಆಸ್ಪತ್ರೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ.

ವಾರದ ದಿನಗಳಲ್ಲಿ ಬೆಳಿಗ್ಗೆ 9ರಿಂದ 4ರವರೆಗೆ, ಭಾನುವಾರ ಮಧ್ಯಾಹ್ನ ವರೆಗೆ ಮಾತ್ರ ವೈದ್ಯರು ಸಿಗುತ್ತಾರೆ. ಉಳಿದಂತೆ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ. ತುರ್ತುಪರಿಸ್ಥಿತಿಯಲ್ಲಿ ವೈದ್ಯರು ಸಿಗುವುದಿಲ್ಲ. ಭಾನುವಾರ ದಿನದಂದು ಮಕ್ಕಳು ಮತ್ತು ತಾಯಂದಿರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಯಾವ ಆಸ್ಪತ್ರೆಗೆ ಹೋಗಬೇಕು ಎಂಬುದೇ ತಾಲ್ಲೂಕಿನ ಜನರ ಚಿಂತೆ.

ಸರ್ಕಾರ ಗುಣಮಟ್ಟದ ಆರೋಗ್ಯ ಸೇವೆ ಮತ್ತು ಶಿಕ್ಷಣ ಉಚಿತವಾಗಿ ನೀಡಬೇಕು. ಅದರಲ್ಲೂ ಪ್ರಮುಖವಾಗಿ ಆರೋಗ್ಯ ಸೇವೆ ದಿನದ 24 ಗಂಟೆಯೂ ಸಿಗುವಂತೆ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು. 100 ಹಾಸಿಗೆಗೆ ಬೇಕಾದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಹಾಗೂ ಅಗತ್ಯ ಸವಲತ್ತು ಕಲ್ಪಿಸಿಕೊಡುವ ಮೂಲಕ ತಾಲ್ಲೂಕಿನ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕೆಂದು ಸ್ಥಳೀಯರ ಒತ್ತಾಯವಾಗಿದೆ.

ಒಳಗುತ್ತಿಗೆ 25, ಹೊರಗುತ್ತಿಗೆ 15 ಸಿಬ್ಬಂದಿ ಇದ್ದಾರೆ. ಈ ಆಸ್ಪತ್ರೆಗೆ 20 ವೈದ್ಯರು, 2 ರೇಡಿಯಾಲಿಜಿಸ್ಟ್‌, 5 ಆಂಬುಲೆನ್ಸ್‌, 15 ಮಂದಿ ಡ್ರೈವರ್‌, 5 ಫಾರ್ಮಾಸಿಸ್ಟ್‌, 5 ಲ್ಯಾಬ್‌ ಟೆಕ್ನಿಷಿಯನ್‌, 50 ಸ್ಟಾಪ್‌ ನರ್ಸ್‌ ಬೇಕಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT