ಭಾನುವಾರ, ಅಕ್ಟೋಬರ್ 2, 2022
18 °C
ಉತ್ತಮ ಶಿಕ್ಷಣ, ಆರೋಗ್ಯ ಸೇವೆ; ಆಗಬೇಕಿದೆ ರಸ್ತೆ ವಿಸ್ತರಣೆ

ರಾಮನಗರ: ಸುತ್ತಲೂ ಹಸಿರು ಹೊದ್ದ ಲಕ್ಷ್ಮಿಪುರ

ಆರ್. ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಸುತ್ತಲೂ ಹಸಿರು ಸಿರಿಯಿಂದ ಆವೃತವಾಗಿರುವ ಲಕ್ಷ್ಮಿಪುರ ಗ್ರಾಮವು ಕೂಟಗಲ್ ಹೋಬಳಿಯ ಕೇಂದ್ರದ ಪ್ರಮುಖ ಗ್ರಾಮಗಳಲ್ಲಿ ಒಂದು.

ಲಕ್ಷ್ಮಿಪುರ ಗ್ರಾಮಕ್ಕೆ ತನ್ನದೇ ಆದ ಐತಿಹ್ಯವಿದೆ. ನಾಡಪ್ರಭು ಕೆಂಪೇಗೌಡರ ಸಹೋದರಿಯ ಊರು ಇದಾಗಿತ್ತು ಎಂದು ಹೇಳಲಾಗುತ್ತದೆ. ಇಂದಿಗೂ ಕೃಷಿಯೇ ಇಲ್ಲಿನ ಪ್ರಧಾನ ಕಸುಬು. ತೆಂಗು, ರೇಷ್ಮೆ, ಮಾವು ಬೆಳೆಗಳ ಮೂಲಕ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಸುತ್ತಲಿನ ಬೆಟ್ಟಗುಡ್ಡ, ತೊರೆಗಳು ಈ ಊರನ್ನು ಇನ್ನಷ್ಟು ಸುಂದರವಾಗಿಸಿವೆ.

ಗ್ರಾಮ ಪಂಚಾಯಿತಿ ಕೇಂದ್ರವೂ ಆಗಿರುವ ಲಕ್ಷ್ಮಿಪುರದಲ್ಲಿ 1500ಕ್ಕೂ ಹೆಚ್ಚು ಜನರು ವಾಸವಿದ್ದು, ಇವರಲ್ಲಿ 1250 ಮತದಾರರು ಇದ್ದಾರೆ. ಜನರಿಗೆ ಬೇಕಾದ ಮೂಲ ಸೌಕರ್ಯಗಳು ಒಂದೊಂದೇ ಅಭಿವೃದ್ಧಿ ಆಗುತ್ತಿವೆ. ಶಿಕ್ಷಣಕ್ಕೆ ಈ ಊರು ಸುತ್ತಲಿನ ಹಳ್ಳಿಗಳಲ್ಲಿ ಹೆಸರಾಗಿದ್ದು, ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳು ಉತ್ತಮ ದಾಖಲಾತಿ ಹೊಂದಿವೆ. ಜನತಾ ರೂರಲ್ ಪ್ರೌಢಶಾಲೆ ಹೆಸರು ಮಾಡಿದೆ. ಪದವಿಪೂರ್ವ ಕಾಲೇಜು ಇಲ್ಲಿದ್ದು, ಉತ್ತಮ ಫಲಿತಾಂಶ ಹಾಗೂ ದಾಖಲಾತಿ ಕಾರಣಕ್ಕೆ ಜಿಲ್ಲೆಯ ಗಮನ ಸೆಳೆದಿದೆ.

ಧಾರ್ಮಿಕತೆಯ ಕೇಂದ್ರ: ಗ್ರಾಮಕ್ಕೆ ಹೊಂದಿಕೊಂಡಂತೆ ಸಿದ್ದಲಿಂಗೇಶ್ವರ ಬೆಟ್ಟ ಇದ್ದು, ಕಾರ್ತೀಕ ಮಾಸದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಬೆಟ್ಟದ ಮೇಲಿನ ತಿಳಿನೀರು ಕುಡಿಯುವುದೇ ಸೊಗಸು. ಇಲ್ಲಿನ ಸನ್ನಿಧಿಯನ್ನು ಸಿದ್ಧಗಂಗೆಯ ಶಿವಕುಮಾರ ಶ್ರೀಗಳು ಪುನರ್ ಪ್ರತಿಷ್ಠಾಪನೆ ಮಾಡಿದ್ದು ವಿಶೇಷ. ಇದಲ್ಲದೆ ಮಲ್ಲೇಶ್ವರ ಸ್ವಾಮಿ ದೇಗುಲವನ್ನು ಈಚೆಗೆ ದಾನಿಗಳ ನೆರವಿನಿಂದ ಅಭಿವೃದ್ಧಿ ಮಾಡಲಾಗಿದೆ. ಆಂಜನೇಯ, ಮಾರಮ್ಮ, ಗಿಡುಗ ಮುತ್ತುರಾಯ, ಮುನೇಶ್ವರ.. ಹೀಗೆ ನಾನಾ ದೇಗುಲಗಳಿಂದ ಕೂಡಿದ ಈ ಗ್ರಾಮ ಧಾರ್ಮಿಕತೆಯ ಕೇಂದ್ರವಾಗಿದೆ.

ಉತ್ತಮ ಆಸ್ಪತ್ರೆಯೂ ಇಲ್ಲಿದ್ದು, ಸುತ್ತಲಿನ ಹಳ್ಳಿಗಳಿಂದ ಇಲ್ಲಿಗೆ ಜನರು ಬರುತ್ತಾರೆ. ಸದ್ಯ ಇಲ್ಲಿ ವ್ಯವಸ್ಥಿತ ಪ್ರಯೋಗಾಲಯ ಸ್ಥಾಪನೆಗೂ ಸಿದ್ಧತೆ ನಡೆದಿದೆ. ಜೊತೆಗೆ ಪಶು ವೈದ್ಯಕೀಯ ಆಸ್ಪತ್ರೆಯೂ ಇದೆ. ವ್ಯವಸ್ಥಿತವಾದ ಗ್ರಾ.ಪಂ. ಕಟ್ಟಡ ತಲೆ ಎತ್ತಿದೆ.

ನರೇಗಾ ಯೋಜನೆ ಅಡಿ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳು ಆಗಿವೆ. ಮುಖ್ಯವಾಗಿ ನಾಲೆಗಳ ಅಭಿವೃದ್ಧಿ ಹಾಗೂ ಕೆರೆಯ ಹೂಳು ತೆಗೆಸಿದ್ದು, ಸ್ಮಶಾನದ ಅಭಿವೃದ್ಧಿ ಕಾಮಗಾರಿಯೂ ಪ್ರಗತಿಯಲ್ಲಿದೆ. ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಆಗಿದ್ದು, ಅಧ್ಯಯನ ಆಸಕ್ತರ ಕನಸಿಗೆ ನೀರೆರೆಯುತ್ತಿದೆ. ಇದಲ್ಲದೆ ಹೈಟೆಕ್ ಅಂಗನವಾಡಿ ನಿರ್ಮಾಣಕ್ಕೂ ಮುಂದಾಗಿದ್ದೇವೆ ಎನ್ನುತ್ತಾರೆ ಇಲ್ಲಿನ ಗ್ರಾ.ಪಂ. ಅಧ್ಯಕ್ಷೆ ಸರಿತಾ ಶ್ರೀಧರ್.

ಕೊರತೆಗಳೇನು?: ರಾಮನಗರ–ಮಾಗಡಿ ಹೆದ್ದಾರಿ ಈ ಗ್ರಾಮವನ್ನು ಹಾದು ಹೋಗಿದೆ. ಗ್ರಾಮದ ವ್ಯಾಪ್ತಿಯಲ್ಲಿ ಈ ರಸ್ತೆ ತೀರ ಕಿರಿದಾಗಿರುವ ಕಾರಣ ವಾಹನಗಳ ಓಡಾಟಕ್ಕೆ ತೊಂದರೆ ಆಗಿದೆ. ಜನರಿಗೆ ತೊಂದರೆ ಆಗದಂತೆ ರಸ್ತೆ ವಿಸ್ತರಣೆ ಆಗಬೇಕಿದೆ. ಈಚೆಗೆ ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ನಡೆದಿದ್ದು, ಅದು ಅಷ್ಟು ವ್ಯವಸ್ಥಿತವಾಗಿ ನಡೆದಿಲ್ಲ ಎಂಬುದು ಸ್ಥಳೀಯರ ದೂರು. ಕಾಮಗಾರಿಯಿಂದ ಹದಗೆಟ್ಟ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ. ಜೊತೆಗೆ ಚರಂಡಿ ಹೂಳೆತ್ತುವ, ಸ್ವಚ್ಚತೆಗೆ ಆದ್ಯತೆ ನೀಡುವ ಕೆಲಸ ಜರೂರಾಗಿ ನಡೆಯಬೇಕು. ಬಡಜನರಿಗೆ ನಿವೇಶನ, ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ಆಗಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು