ಭಾನುವಾರ, ಜೂನ್ 26, 2022
21 °C
ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್‌ ನೇತೃತ್ವದಲ್ಲಿ ಸಭೆ

ರಾಮನಗರ: ‘ಸಾವಿಗೆ ಸ್ಥಳೀಯ ಆಡಳಿತವೂ ಹೊಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ನಗರದ ಐಜೂರಿನಲ್ಲಿ ಮ್ಯಾನ್‌ಹೋಲ್‌ಗೆ ಇಳಿದು ಮೂವರು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಗುತ್ತಿಗೆದಾರರು, ಅಧಿಕಾರಿಗಳು ಸೇರಿದಂತೆ ಎಲ್ಲ ತಪ್ಪಿತಸ್ಥರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್‌ ತಿಳಿಸಿದರು.

ಘಟನೆ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳು, ಸಫಾಯಿ ಕರ್ಮಚಾರಿ ಸಮಿತಿ ಸದಸ್ಯರೊಟ್ಟಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಗುತ್ತಿಗೆದಾರರ ನಿರ್ಲಕ್ಷ್ಯ ಎಂದಾದರೂ ಅದಕ್ಕೆ ಸ್ಥಳೀಯ ಆಡಳಿತವೂ ಹೊಣೆ ಎಂದು ಸುಪ್ರೀಂ ಕೋರ್ಟ್‌ ತನ್ನ ಆದೇಶವೊಂದರಲ್ಲಿ ತಿಳಿಸಿದೆ. ಘಟನೆ ಸಂಬಂಧ ಪೊಲೀಸರು ವಿವಿಧ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ. ಕೇವಲ ಎಫ್‌ಐಆರ್ ದಾಖಲಿಸುವುದು ಮಾತ್ರವಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೂ ಪ್ರಕರಣವನ್ನು ಫಾಲೋ ಅಪ್‌ ಮಾಡಬೇಕು. ಈ ವಿಚಾರದಲ್ಲಿ ಸಫಾಯಿ ಕರ್ಮಚಾರಿ ಸಮಿತಿಗಳ ಪಾತ್ರವೂ ಪ್ರಮುಖವಾಗಿದೆ ಎಂದರು.

ಪ್ರಕರಣದಲ್ಲಿ ಗುತ್ತಿಗೆದಾರರ ಬೇಜವಾಬ್ದಾರಿ ಜೊತೆಗೆ ಕಾರ್ಮಿಕರ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ. ಸಫಾಯಿ ಕರ್ಮಚಾರಿಗಳು ಹೆಚ್ಚಿಗೆ ಕೂಲಿ ಆಮಿಷಕ್ಕೆ ಆಸೆ ಪಟ್ಟು ಮ್ಯಾನ್‌ಹೋಲ್‌ಗಳಿಗೆ ಇಳಿಯಬಾರದು. ಎಷ್ಟೇ ಹಣ ಕೊಡುತ್ತೇನೆ ಎಂದರೂ ಈ ಕಾರ್ಯಕ್ಕೆ ಒಪ್ಪಬಾರದು. ಈ ವಿಚಾರದಲ್ಲಿ ಕಾರ್ಮಿಕರಿಗೆ ಶಿಕ್ಷಣ–ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಮಾತನಾಡಿ, ‘ಘಟನೆ ಸಂಬಂಧ ಜಿಲ್ಲಾಧಿಕಾರಿ ಅವರು ಈಗಾಗಲೇ ತನಿಖೆ ಆರಂಭಿಸಲಿದ್ದು, ಸರ್ಕಾರ ಹಾಗೂ ಆಯೋಗಕ್ಕೆ ವರದಿ ನೀಡಲಿದ್ದಾರೆ. ಕಾರ್ಮಿಕರ ಕುಟುಂಬದವರಿಗೆ ತತ್ಕಾಲದ ಪರಿಹಾರ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತಿ ಮೂಡಿಸಲಾಗುವುದು’ ಎಂದರು.

ಹೆಚ್ಚಿನ ಪರಿಹಾರ ನೀಡಿ: ಕಾರ್ಮಿಕರ ಸಮಸ್ಯೆ ಕುರಿತು ‘ಪ್ರಜಾವಾಣಿ’ ವರದಿ ಉಲ್ಲೇಖಿಸಿ ಮಾತನಾಡಿದ ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ನಾಗರಾಜು, ‘ಈಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇಂತಹ ಯಾವುದೇ ಪ್ರಕರಣ ವರದಿ ಆಗಿರಲಿಲ್ಲ. ಜಿಲ್ಲಾಡಳಿತಕ್ಕೆ ಇದೊಂದು ಕಪ್ಪುಚುಕ್ಕೆಯಾಗಿದೆ. ಆರೋಪಿಗಳ ವಿರುದ್ಧ ಎಂ.ಎಸ್‌. ಕಾಯ್ದೆ 9/6 ಅಡಿ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

ಸಮಿತಿಯ ಮತ್ತೊಬ್ಬ ಸದಸ್ಯ ಶಿವಕುಮಾರಸ್ವಾಮಿ ಮಾತನಾಡಿ, ‘ಸಂತ್ರಸ್ತ ಕುಟುಂಬಗಳಿಗೆ ತಲಾ ₹ 50 ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಕಾಮಗಾರಿ ನಡೆಸಿದ ಗುತ್ತಿಗೆದಾರರ ಪರವಾನಗಿ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಸಮಿತಿ ಸದಸ್ಯರಾದ ನಾಗರಾಜು, ಓಬಳೇಶ್ ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್, ರಾಜ್ಯ ಆಯೋಗದ ಕಾರ್ಯದರ್ಶಿ ರಮಾ, ನಗರಸಭೆ ಪೌರಾಯುಕ್ತ ನಂದಕುಮಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು