ನಿರೀಕ್ಷೆ ಮೀರಿದ ಗೆಲುವಿಗೆ ಮನದುಂಬಿದೆ
ರಾಮನಗರ: ‘ಮತದಾರರು ಇಷ್ಟೊಂದು ದೊಡ್ಡ ಗೆಲುವಿನ ಉಡುಗೊರೆ ನೀಡುತ್ತಾರೆಂದು ನಾನೂ ನಿರೀಕ್ಷಿರಲಿಲ್ಲ. ತೀವ್ರ ಪೈಪೋಟಿ ಇರುವುದರಿಂದ 50 ಸಾವಿರದಿಂದ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವೆ. ಪಕ್ಷಾತೀತ ಮತದಾರರು ಮನಸ್ಸು ಮಾಡಿದರೆ 2 ಲಕ್ಷ ಮತಗಳ ಮುನ್ನಡೆ ಬರಬಹುದು ಎಂದು ಊಹಿಸಿದ್ದೆ. ಆದರೆ ಕ್ಷೇತ್ರದ ಜನರು ನನ್ನ ಊಹೆಯನ್ನು ಮೀರಿದ ಗೆಲುವನ್ನು ದಯಪಾಲಿಸಿದ್ದಾರೆ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಹೇಳಿದರು. ತಮ್ಮ ಗೆಲುವು ಖಚಿತವಾಗುತ್ತಿದ್ದಂತೆ ನಗರದ ಹೊರವಲಯದ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಪತ್ನಿ ಅನಸೂಯ ಅವರೊಂದಿಗೆ ಮಂಗಳವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಈ ನನ್ನ ಗೆಲುವು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮುಖಂಡರು ಕಾರ್ಯಕರ್ತರು ಹಾಗೂ ಮತದಾರರ ಶ್ರಮದ ಫಲವಾಗಿದೆ. ಹಾಗಾಗಿ ಈ ಗೆಲುವನ್ನು ಅವರಿಗೆ ಅರ್ಪಿಸುವೆ. ನಾನು ಹೋದ ಕಡೆಯೆಲ್ಲಾ ಮೈತ್ರಿಕೂಟದ ಕಾರ್ಯಕರ್ತರಷ್ಟೇ ಅಲ್ಲದೆ ಪಕ್ಷಾತೀತ ಬಂಧುಗಳು ಸಹ ನನ್ನನ್ನು ಕಂಡು ಬೆಂಬಲ ವ್ಯಕ್ತಪಡಿಸಿ ಮತ ಹಾಕಿದ್ದಾರೆ. ಅವರೆಲ್ಲರಿಗೂ ನಾನು ಋಣಿ’ ಎಂದರು. ‘ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಲೇಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಗದರ್ಶನ ಮಾಡಿದರು. ಗೃಹ ಸಚಿವ ಅಮಿತ್ ಶಾ ಅವರು ಚನ್ನಪಟ್ಟಣಕ್ಕೆ ಬಂದು ರೋಡ್ ಷೋ ನಡೆಸಿ ಪ್ರಚಾರ ನಡೆಸಿದರು. ಜೆಡಿಎಸ್‌ನ ರಾಷ್ಟ್ರೀಯ ನಾಯಕ ಎಚ್.ಡಿ. ದೇವೇಗೌಡ ಅವರು ಪ್ರಚಾರ ಮಾಡಿದರು. ರಾಜ್ಯ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ನಿಖಿಲ್ ಕುಮಾರಸ್ವಾಮಿಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನನಗೆ ಮಾರ್ಗದರ್ಶನ ಮಾಡಿ ಗೆಲುವಿಗೆ ಕಾರಣರಾಗಿದ್ದಾರೆ. ಎರಡೂ ಪಕ್ಷಗಳ ಹಾಲಿ ಮತ್ತ ಮಾಜಿ ಶಾಸಕರು ಮುಖಂಡರ ಶ್ರಮವನ್ನು ಮರೆಯುವಂತಿಲ್ಲ’ ಎಂದು ನೆನೆದರು. ‘ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಣೆಯಾದಾಗಿನಿಂದ ಎರಡೂ ಪಕ್ಷಗಳ ಮುಖಡರು ಹಾಗೂ ಕಾರ್ಯಕರ್ತರು ಹಗಲು–ರಾತ್ರಿ ನನ್ನ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. ನಾನು ಪ್ರಚಾರಕ್ಕೆ ಹೋದಲ್ಲೆಲ್ಲಾ ಮತದಾರರು ನನಗೆ ತುಂಬು ಹೃದಯದ ಪ್ರೀತಿಯನ್ನು ಧಾರೆ ಎರೆದಿದ್ದಾರೆ. ಹೈ ವೋಲ್ಟೇಜ್ ಕ್ಷೇತ್ರದಲ್ಲಿ ನನಗೆ ಐತಿಹಾಸಿಕ ಗೆಲುವು ತಂದು ಕೊಟ್ಟಿದ್ದಾರೆ’ ಎಂದು ಕೃತಜ್ಞತೆ ಸಲ್ಲಿಸಿದರು.