ಶುಕ್ರವಾರ, 25 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ: ನಿರೀಕ್ಷೆ ಮೀರಿದ ಗೆಲುವು; ಜನಪರ ಕೆಲಸಗಳಿಗೆ ಒಲವು:ಡಾ.ಸಿ.ಎನ್.ಮಂಜುನಾಥ್

ಮೇಕೆದಾಟು ಯೋಜನೆಗೆ ತಾರ್ತಿಕ ಅಂತ್ಯ, ಆರೋಗ್ಯ, ಶಿಕ್ಷಣ ಸುಧಾರಣೆಗೆ ಒತ್ತು: ಡಾ. ಸಿ.ಎನ್. ಮಂಜುನಾಥ್
Published : 19 ಜೂನ್ 2024, 4:22 IST
Last Updated : 19 ಜೂನ್ 2024, 4:22 IST
ಫಾಲೋ ಮಾಡಿ
Comments
ಪ್ರ

ಇಂತಹದ್ದೊಂದು ದಾಖಲೆಯ ಗೆಲುವಿನ ನಿರೀಕ್ಷೆ ಇತ್ತೆ?

ಗೆಲ್ಲುತ್ತೇನೆ ಎಂಬ ಭರವಸೆ ಇತ್ತು. ಹೆಚ್ಚೆಂದರೆ 50 ಸಾವಿರದಿಂದ ಒಂದು ಲಕ್ಷದೊಳಗೆ ಲೀಡ್ ಬರಬಹುದು ಎಂದುಕೊಂಡಿದ್ದೆ. ಆದರೆ, ಕ್ಷೇತ್ರದ ಜನರು ನಿರೀಕ್ಷೆಗೂ ಮೀರಿ ದಾಖಲೆಯ ಗೆಲುವಿನ ಉಡುಗೊರೆ ಕೊಟ್ಟಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮಾಡಿ ನಿವೃತ್ತನಾಗಿ, ರಾಜಕೀಯಕ್ಕೆ ಪದಾರ್ಪಣೆ ಮಾಡಿದ ನನಗೆ ಗ್ರಾಮಾಂತರದ ಜನರು ತೋರಿರುವ ಪ್ರೀತಿ ಮತ್ತು ಇಟ್ಟಿರುವ ಭರವಸೆಗೆ ಮನದುಂಬಿದೆ.

ಪ್ರ

ನಿಮ್ಮ ಗೆಲುವಿಗೆ ಕಾರಣವಾದ ಅಂಶಗಳನ್ನು ಹೇಗೆ ವಿಶ್ಲೇಷಿಸುತ್ತೀರಿ?

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಚೆನ್ನಾಗಿ ಕೆಲಸ ಮಾಡಿತು. ಅಭ್ಯರ್ಥಿಯಾಗಿ ನನ್ನ ಹೆಸರನ್ನು ಘೋಷಿಸಿದಾಗ ಕಾರ್ಯಕರ್ತರಿಂದಷ್ಟೇ ಅಲ್ಲದೆ, ಸಾರ್ವಜನಿಕವಾಗಿಯೂ ದೊಡ್ಡಮಟ್ಟದಲ್ಲಿ ಸ್ವೀಕಾರ ಸಿಕ್ಕಿತು. ವೈದ್ಯಕೀಯ ಕ್ಷೇತ್ರದಲ್ಲಿ ನಾನು ಮಾಡಿದ ಸೇವೆ ಹಾಗೂ ನನ್ನ ಸರಳ ವ್ಯಕ್ತಿತ್ವವನ್ನು ಜನ ಗುರುತಿಸಿದರು. ಸ್ವಯಂಪ್ರೇರಿತರಾಗಿ ನನ್ನ ಬಗ್ಗೆ ಬಾಯಿಪ್ರಚಾರ ಮಾಡಿದರು. ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದರಿಂದ ಪಕ್ಷ ಮತ್ತು ಪಕ್ಷಾತೀತ ಮತಗಳು ಕ್ರೋಢಿಕರಣಗೊಂಡವು. ಅಂತಿಮವಾಗಿ ಅದು ಫಲಿತಾಂಶದಲ್ಲಿ ವ್ಯಕ್ತವಾಯಿತು. ಜನ ಮನಸ್ಸು ಮಾಡಿದರೆ ಎಂತಹ ಬದಲಾವಣೆ ಬೇಕಾದರೂ ತರಬಲ್ಲರು ಎಂಬುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ.

ಪ್ರ

ಕ್ಷೇತ್ರದಲ್ಲಿ ಎದುರಾಗಬಹುದಾದ ಅಭಿವೃದ್ಧಿ ರಾಜಕೀಯದ ಸವಾಲನ್ನು ಹೇಗೆ ನಿರ್ವಹಿಸುತ್ತೀರಿ?

ಚುನಾವಣೆ ಸಂದರ್ಭಕ್ಕಷ್ಟೇ ರಾಜಕೀಯ ಸೀಮಿತ. ಸಂಸದನಾಗಿ ಕ್ಷೇತ್ರದಲ್ಲಿ ಜನಪರ ಕಾರ್ಯಕ್ರಮಗಳ ಜಾರಿ ಹಾಗೂ ಕೇಂದ್ರ ಸರ್ಕಾರದಿಂದ ಆದಷ್ಟು ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡುವುದಷ್ಟೇ ನನ್ನ ಗುರಿ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುವೆ. ಸರ್ಕಾರದ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಸಹ ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ. ಯಾಕೆಂದರೆ ಇಲ್ಲಿ ವೈಯಕ್ತಿಕವಾದುದು ಏನೂ ಇಲ್ಲ. ಅಭಿವೃದ್ಧಿ ವಿಷಯದಲ್ಲಿ ಯಾರೇ ಕ್ರೆಡಿಟ್ ತೆಗೆದುಕೊಳ್ಳಲಿ. ಕ್ಷೇತ್ರದ ಜನರಿಗೆ ಉತ್ತಮ ಕೆಲಸಗಳಾಗಬೇಕು ಎಂಬುದಷ್ಟೇ ನನ್ನ ಆಶಯ.

ಪ್ರ

ಜಿಲ್ಲೆಯಲ್ಲಿ ಹೃದ್ರೋಗ ಆಸ್ಪತ್ರೆ ಸ್ಥಾಪನೆ ನಿರೀಕ್ಷಿಸಬಹುದೇ?

ಸಾಮಾನ್ಯವಾಗಿ ದೊಡ್ಡ ನಗರಗಳಲ್ಲಿ ಹೃದ್ರೋಗ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತದೆ. ಆದರೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಈಗ ಜನಸಾಮಾನ್ಯರ ಕಾಯಿಲೆಯಾಗಿರುವುದರಿಂದ ಜಿಲ್ಲಾ ಮಟ್ಟದಲ್ಲೂ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಅದಕ್ಕಾಗಿ, ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸಾ ಘಟಕ ಸ್ಥಾಪಿಸಲು ಪ್ರಯತ್ನಿಸಲಾಗುವುದು. ಈಗಾಗಲೇ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದಯಾಘಾತಕ್ಕೆ ಸಿಗುತ್ತಿರುವ ತುರ್ತು  ಚಿಕಿತ್ಸೆಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸಲಾಗುವುದು.

ಪ್ರ

ಮೇಕೆದಾಟು ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ನಿಮ್ಮ ಬದ್ಧತೆ ಏನು?

ಬೆಂಗಳೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮೇಕೆದಾಟು ಅಣೆಕಟ್ಟೆ ಯೋಜನೆ ಕಾರ್ಯಗತವಾಗಬೇಕಿದೆ. ಯೋಜನೆಯ ಅನುಮತಿಗೆ ಎದುರಾಗಿರುವ ತೊಡಕು ನಿವಾರಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಹಾಕುವೆ. ಯೋಜನೆ ಅಗತ್ಯದ ಕುರಿತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುವೆ. ಇದಕ್ಕೆ ಮೈತ್ರಿ ಸಂಸದರು ಸಹ ಜೊತೆಯಾಗಲಿದ್ದಾರೆ.

ಪ್ರ

ಜಿಲ್ಲೆಯ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದೇ?

ಕ್ಷೇತ್ರದಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕ ಹೆಚ್ಚಿಸಲು ಆದ್ಯತೆ ನೀಡುವೆ. ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವುದು, ಕೃಷಿಗೆ ಪೂರಕವಾಗಿ ಕೆರೆಗಳನ್ನು ತುಂಬಿಸುವುದರ ಕುರಿತು ಗಮನ ಹರಿಸುವೆ. ರೇಷ್ಮೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಕುರಿತು ರೈತರಿಗೆ ಅರಿವು ಮೂಡಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದೆ. ಸ್ಥಳೀಯ ರೇಷ್ಮೆಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಸಿಗುವಂತೆ ಮಾಡುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವೆ.

ಪ್ರ

ಕೈಗಾರಿಕಾಭಿವೃದ್ಧಿ ಕುರಿತು ನಿಮ್ಮ ಪ್ಲಾನ್ ಏನು?

ಜಿಲ್ಲೆಯು ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳನ್ನು ಹೊಂದಿದೆ. ರಾಜ್ಯ ಸರ್ಕಾರ ಈಗಾಗಲೇ ಬಿಡದಿ ಮೆಟ್ರೊ ವಿಸ್ತರಿಸುವ ಕುರಿತು ಯೋಚನೆ ಮಾಡಿದೆ. ಅದೇ ರೀತಿ, ಹಾರೋಹಳ್ಳಿಗೂ ವಿಸ್ತರಣೆ ಮಾಡುವ ಕುರಿತು ಗಮನ ಸೆಳೆಯುವೆ. ಇದರಿಂದ, ಈ ಭಾಗದ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ. ಜೊತೆಗೆ, ತಾಲ್ಲೂಕು ಮಟ್ಟದಲ್ಲೂ ಕೈಗಾರಿಕೆಗಳ ಸ್ಥಾಪಿಸಿ, ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸುವ ಕುರಿತು ಚರ್ಚೆ ನಡೆಸುವೆ.

ಪ್ರ

ಇತರ ಅಭಿವೃದ್ಧಿ ಆಲೋಚನೆಗಳೇನು?

ಬೆಂಗಳೂರು ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಉಪನಗರ ರೈಲು ಯೋಜನೆ ಜಾರಿಗೆ ಆದ್ಯತೆ. ನನೆಗುದಿಗೆ ಬಿದ್ದಿರುವ ನಿಮ್ಹಾನ್ಸ್ ಆಸ್ಪತ್ರೆಯ ಮತ್ತೊಂದು ಘಟಕ ಸ್ಥಾಪನೆ ಯೋಜನೆ ಕಾರ್ಯಗತಗೊಳಿಸುವುದು. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪೂರ್ಣಗೊಂಡಿರುವ ಕಾಮಗಾರಿ ಪೂರ್ಣಕ್ಕೆ ಸೂಚನೆ. ದೂರಕ್ಕೆ ಅನುಗುಣವಾಗಿ ಟೋಲ್ ಶುಲ್ಕ ವಸೂಲಿ ಮಾಡುವ ವ್ಯವಸ್ಥೆ ಜಾರಿಗೆ ಪ್ರಯತ್ನ ಮಾಡುವೆ. ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತವಾಗಿ ಮುಗಿಸಲು ಕ್ರಮ ಕೈಗೊಳ್ಳುವೆ.

ಪ್ರ

ನೀವು ಸಚಿವರಾಗುತ್ತೀರಿ ಎಂಬ ಜನರ ನಿರೀಕ್ಷೆ ಹುಸಿಯಾಯಿತಲ್ಲ?

ವೈದ್ಯಕೀಯ ಕ್ಷೇತ್ರದಲ್ಲಿ ನಾನು ಮಾಡಿರುವ ಸೇವೆ ಪರಿಗಣಿಸಿ ನಾನು ಗೆದ್ದರೆ ಮೋದಿ ಅವರ ಸಚಿವ ಸಂಪುಟದಲ್ಲಿ ನಾನು ಆರೋಗ್ಯ ಸಚಿವನಾಗಲಿದ್ದೇನೆ ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದು ನಿಜ. ಚುನಾವಣೆ ಸಂದರ್ಭದಲ್ಲೂ ಈ ವಿಷಯ ಹೆಚ್ಚು ಪ್ರಸ್ತಾಪವಾಗಿತ್ತು. ಮುಂದೆ ಪಕ್ಷದ ವರಿಷ್ಠರು ರಾಷ್ಟ್ರಮಟ್ಟದ ಸೇವೆಗೆ ಅವಕಾಶ ಕೊಟ್ಟರೆ ಮಾಡುವೆ. ಇಲ್ಲದಿದ್ದರೆ ಸಂಸದನಾಗಿ ಕ್ಷೇತ್ರದಲ್ಲಿ ನನ್ನ ಕೈಲಾದಷ್ಟು ಬದಲಾವಣೆ ತರುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT