ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Elections | ಬೆಂಗಳೂರು ಗ್ರಾಮಾಂತರ: ಡಾ. ಮಂಜುನಾಥ್ ಇನ್ನಿಂಗ್ ಶುರು!

ಜಯದೇವ ಆಸ್ಪತ್ರೆಯಿಂದ ಬೆಂಗಳೂರು ಗ್ರಾಮಾಂತರ ರಾಜಕೀಯ ಕಣಕ್ಕೆ
Published 14 ಮಾರ್ಚ್ 2024, 4:17 IST
Last Updated 14 ಮಾರ್ಚ್ 2024, 4:17 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ. ಸಿ.ಎನ್. ಮಂಜುನಾಥ್ ಅವರು ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಬುಧವಾರ ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕ್ಷೇತ್ರದ ಅಭ್ಯರ್ಥಿಯಾಗಿ ಮಂಜುನಾಥ್ ಹೆಸರನ್ನು ಘೋಷಿಸಲಾಗಿದೆ.

ಇದರೊಂದಿಗೆ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರ ಅಳಿಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರ ಬಾವನಾಗಿರುವ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಮಂಜುನಾಥ್ ಅವರ ರಾಜಕೀಯ ಇನ್ನಿಂಗ್ ಶುರುವಾಗಿದೆ.

ರಾಜ್ಯದ ಏಕೈಕ ಕಾಂಗ್ರೆಸ್ ಸಂಸದರಾಗಿರುವ ಡಿ.ಕೆ. ಸುರೇಶ್ ಪ್ರತಿನಿಧಿಸುವ ಕ್ಷೇತ್ರವು, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಘಟಾನುಘಟಿ ನಾಯಕರ ರಾಜಕೀಯ ನೆಲೆಯೂ ಆಗಿದೆ. ಜಿಲ್ಲೆಯ ಕನಕಪುರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸುರೇಶ್ ಅವರ ತವರಾದರೆ, ಚನ್ನಪಟ್ಟಣವು ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಗೆದ್ದಿರುವ ಕ್ಷೇತ್ರ. ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಅವರ ಕರ್ಮಭೂಮಿಯೂ ಹೌದು.

ಪ್ರಬಲ ಡಿ.ಕೆ. ಸಹೋದರರನ್ನು ಎದುರಿಸಲು ಮೈತ್ರಿ ಪಕ್ಷಗಳು ಅಳೆದು ತೂಗಿ ಹೊಸ ಮುಖವನ್ನು ಕಣಕ್ಕಿಳಿಸಿದ್ದಾರೆ. ಮಂಜುನಾಥ್ ಅವರು ದೊಡ್ಡ ರಾಜಕೀಯ ಹಿನ್ನೆಲೆ ಇರುವ ಕುಟುಂಬದ ಅಳಿಯನಾದರೂ, ಅವರ ಹೆಸರು ಎಂದಿಗೂ ರಾಜಕೀಯಕ್ಕೆ ತಳಕು ಹಾಕಿಕೊಂಡಿರಲಿಲ್ಲ. ಜಯದೇವ ಆಸ್ಪತ್ರೆ ನಿರ್ದೇಶಕನಾಗಿ ಮಾಡಿದ ಕೆಲಸಗಳಿಂದಲೇ ಖ್ಯಾತಿ ಗಳಿಸಿದವರು. ಅವರನ್ನು ಅಭ್ಯರ್ಥಿ ಮಾಡಿರುವುದರ ಹಿಂದೆ ದೊಡ್ಡಮಟ್ಟದ ರಾಜಕೀಯ ಲೆಕ್ಕಾಚಾರವಿದೆ ಎನ್ನುತ್ತವೆ ಜೆಡಿಎಸ್ ಮೂಲಗಳು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಕ್ಷೇತ್ರದಲ್ಲಿ ಡಿ.ಕೆ. ಸಹೋದರರು ಹಿಂದೆಂದಿಗಿಂತಲೂ ಹೆಚ್ಚು ಪ್ರಬಲರಾಗಿದ್ದಾರೆ. ಅವರಿಗೆ ಸರಿಸಮಾನಾಗಿ ಪೈಪೋಟಿ ನೀಡಲು ರಾಜಕೀಯವಾಗಿ ಸಕ್ರಿಯತೆಯಷ್ಟೇ ಸಾಲದು. ಮೈತ್ರಿ ಬಲದ ಜೊತೆಗೆ, ರಾಜಕೀಯ ಕುಟುಂಬವೊಂದರ ಹಿನ್ನೆಲೆ ಮತ್ತು ಸೇವಾ ಕ್ಷೇತ್ರದ ಜನಪ್ರಿಯತೆ ಮತದಾರರನ್ನು ಸೆಳೆಯಲಿದೆ. ಆ ಕಾರಣಕ್ಕಾಗಿ ಮಂಜುನಾಥ್ ಅವರನ್ನೇ ಕಣಕ್ಕಿಳಿಸಲು ಬಿಜೆಪಿ ಹೆಚ್ಚಿನ ಒಲವು ತೋರಿತು. ದೇವೇಗೌಡರ ಕುಟುಂಬವೂ ಆ ನಿಟ್ಟಿನಲ್ಲಿ ಮಂಜುನಾಥ್ ಮನವೊಲಿಸಿತು ಎನ್ನುತ್ತವೆ ಬಿಜೆಪಿ ಮೂಲಗಳು.

ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದ ಯೋಗೇಶ್ವರ್‌: ಮೈತ್ರಿ ಏರ್ಪಟ್ಟಾಗಿನಿಂದಲೂ ಕ್ಷೇತ್ರದ ಟಿಕೆಟ್‌ ಮೇಲೆ ವಿಧಾನ ಪರಿಷತ್ ಸದಸ್ಯರಾದ ಬಿಜೆಪಿಯ ಸಿ.ಪಿ. ಯೊಗೇಶ್ವರ್ ಕಣ್ಣಿಟ್ಟಿದ್ದರು. ಇದೇ ಕಾರಣಕ್ಕೆ ಮೈತ್ರಿ ಬಳಿಕ, ರಾಜಕೀಯ ದ್ವೇಷ ಮರೆತು ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಒಡನಾಟ ಹೆಚ್ಚಿಸಿಕೊಂಡಿದ್ದರು.

ತಮಗೆ ಟಿಕೆಟ್ ಖಚಿತ ಎಂಬ ವಿಶ್ವಾಸದಲ್ಲಿದ್ದ ಯೋಗೇಶ್ವರ್, ಬಿಜೆಪಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಡಿ.ಕೆ. ಸಹೋದರರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಅವರ ಹೆಸರು ಘೋಷಣೆಯೊಂದೇ ಬಾಕಿ ಎಂಬ ಮಟ್ಟಕ್ಕೆ ರಾಜಕೀಯ ಬೆಳವಣಿಗೆಗಳಾಗಿದ್ದವು. ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಡಾ. ಮಂಜುನಾಥ್ ಅವರ ಹೆಸರು ಕ್ಷೇತ್ರದಲ್ಲಿ ಮುನ್ನೆಲೆಗೆ ಬರತೊಡಗಿತು.

ಆರಂಭದಲ್ಲಿ ರಾಜಕೀಯ ಪ್ರವೇಶದ ಕುರಿತು ನಿರಾಕರಿಸಿದ್ದ ಡಾ. ಮಂಜುನಾಥ್, ನಂತರ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ಇದರ ಜೊತೆಗೆ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ಬಾಯಲ್ಲಿ ಅವರ ಹೆಸರು ಹರಿದಾಡತೊಡಗಿತು. ಇದರ ಮಧ್ಯೆ ಯೋಗೇಶ್ವರ್ ಹೆಸರು ಹಿಂದಕ್ಕೆ ಸರಿಯಿತು.

ಅಂತಿಮವಾಗಿ ಬೆಂಗಳೂರಿನಲ್ಲಿ ಕುಮಾರಸ್ವಾಮಿ ಅವರು ಪಕ್ಷದ ಮುಖಂಡರ ಸಭೆ ನಡೆಸಿದ್ದಾಗ ಮಂಜುನಾಥ್ ಅವರು ಕಣಕ್ಕಿಳಿಯಲು ಒಪ್ಪಿದರು. ಅದಾದ ಎರಡು ದಿನಗಳ ಬಳಿಕ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಂಜುನಾಥ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ.

‘ವ್ಯಕ್ತಿ ಕೇಂದ್ರೀತ ಚುನಾವಣೆಯ ಕಣ’

ಮಂಜುನಾಥ್ ಸ್ಪರ್ಧೆಯಿಂದಾಗಿ ಕ್ಷೇತ್ರದ ಚುನಾವಣೆಯು ಪಕ್ಷಕ್ಕಿಂತ ವ್ಯಕ್ತಿ ಕೇಂದ್ರಿತವಾಗಿ ಮಾರ್ಪಡಲಿದೆದೆ. ಸುರೇಶ್ ಅವರ ಬಗ್ಗೆ ನೆಗೆಟಿವ್ ಆಗಿ ಮಾತನಾಡಲು ಮೈತ್ರಿಕೂಟ ಮತ್ತು ಇತರ ಪಕ್ಷಗಳಿಗೆ ನೂರಾರು ವಿಷಯಗಳಿವೆ. ಆದರೆ ಮಂಜುನಾಥ್ ಅವರ ಬಗ್ಗೆ ಒಂದು ಪದವೂ ಸಿಗದು. ಕ್ಷೇತ್ರದಲ್ಲಿ ಸುರೇಶ್ ವಿರುದ್ಧ ಇರುವ ಅಗೋಚರ ವಿರೋಧಿ ಅಲೆಯು ಮಂಜುನಾಥ್‌ ಪರವಾಗಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಲಿದೆ. ಪಕ್ಷಾತೀತವಾಗಿಯೂ ಅವರು ಜನರನ್ನು ಸೆಳೆಯಲಿದ್ದಾರೆ. ಇದು ಅವರು ಗೆಲುವಿನ ದಡ ಸೇರಿಸಲು ನೆರವಾಗುತ್ತವೆ ಎನ್ನುತ್ತಾರೆ ಜಿಲ್ಲೆಯ ಹಿರಿಯ ರಾಜಕಾರಣಿಯೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT