ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗೆನೇಕಲ್ ಜಲಪಾತದ ಬಳಿ ವಿಷ ಕುಡಿದ ಪ್ರೇಮಿಗಳು: ಯುವಕ ಸಾವು, ಯುವತಿ ಗಂಭೀರ

Published 12 ಸೆಪ್ಟೆಂಬರ್ 2023, 15:26 IST
Last Updated 12 ಸೆಪ್ಟೆಂಬರ್ 2023, 15:26 IST
ಅಕ್ಷರ ಗಾತ್ರ

ಕನಕಪುರ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಲ್ಲೂಕಿನ ಚಾಮುಂಡಿಪುರದ ಪ್ರೇಮಿಗಳಿಬ್ಬರು ತಮಿಳನಾಡಿನ ಹೊಗೆನೇಕಲ್ ಜಲಪಾತದ ಬಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಯುವಕ ಉಮೇಶ್ (23) ಕೊನೆಯುಸಿರೆಳೆದಿದ್ದು, ಯುವತಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಒಂದೇ ಗ್ರಾಮದವರಾದ ಇಬ್ಬರೂ ಅಂತರ್ಜಾತಿಯವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಉಮೇಶ್ ಇರುಳಿಗ ಹಾಗೂ ಪಿಯುಸಿ ಓದುತ್ತಿರುವ ಯುವತಿ ಲಂಬಾಣಿ ಸಮುದಾಯಕ್ಕೆ ಸೇರಿದವರಾಗಿದ್ದು, ಸೆ. 9ರಿಂದ ನಾಪತ್ತೆಯಾಗಿದ್ದರು. ಈ ಕುರಿತು, ಯುವತಿ ಕುಟುಂಬದವರು ಕೋಡಿಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಯುವತಿ ಪತ್ತೆಗಾಗಿ ಪೊಲೀಸರು ಎಲ್ಲಾ ಠಾಣೆಗಳಿಗೂ ಮಾಹಿತಿ ನೀಡಿದ್ದರು.

ಇಂದು ಬೆಳಿಗ್ಗೆ ಹೊಗೆನೇಕಲ್ ಜಲಪಾತದ ಬಳಿ ಪ್ರೇಮಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅನುಮಾನದ ಮೇರೆಗೆ ಅಲ್ಲಿಗೆ ಹೋಗಿ ಪರಿಶೀಲಿಸಿದಾಗ, ಇವರೇ ಎಂಬುದು ಖಚಿತವಾಯಿತು.

ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಉಮೇಶ್ ಮೃತಪಟ್ಟಿದ್ದಾರೆ. ತೀವ್ರ ಅಸ್ಪಸ್ಥಗೊಂಡಿರುವ ಯುವತಿಗೆ ಧರ್ಮಪುರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಪ್ರೇಮಿಗಳು ಮನೆ ಬಿಟ್ಟು ಹೋದ ಬಳಿಕ, ಇವರಿಗಾಗಿ ಎರಡೂ ಕುಟುಂಬದವರು ಹುಡುಕಾಡಿದ್ದರು. ಎಲ್ಲೂ ಸಿಗದಿದ್ದಾಗ ಯುವತಿ ಮನೆಯವರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಈ ವಿಷಯ ಯುವಕನಿಗೆ ಗೊತ್ತಾಗಿ, ತಮ್ಮ ಅಂತರ್ಜಾತಿ ಪ್ರೀತಿಯನ್ನು ಕುಟುಂಬದವರು ಒಪ್ಪಿಕೊಳ್ಳುವುದಿಲ್ಲ. ಯುವತಿಗೆ ಇನ್ನೂ ಹದಿನೆಂಟು ವರ್ಷವಾಗಿಲ್ಲದಿರುವುದರಿಂದ ತನಗೆ ಸಂಕಷ್ಟ ಎದುರಾಗುತ್ತದೆ ಅಂದುಕೊಂಡಿದ್ದಾನೆ. ಇದರಿಂದಾಗಿ, ಆತ್ಮಹತ್ಯೆ ನಿರ್ಧಾರ ಕೈಗೊಂಡಿರುವ ಅನುಮಾನವಿದ್ದು, ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT