ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024 | ಸೋತಿದ್ದೇನೆಯೇ ಹೊರತು ಸತ್ತಿಲ್ಲ: ನಿಖಿಲ್ ಕುಮಾರಸ್ವಾಮಿ

Published 1 ಏಪ್ರಿಲ್ 2024, 17:30 IST
Last Updated 1 ಏಪ್ರಿಲ್ 2024, 17:30 IST
ಅಕ್ಷರ ಗಾತ್ರ

ರಾಮನಗರ: ‘ನಾನು ಸೋತಿದ್ದೇನೆಯೇ ಹೊರತು ಸತ್ತಿಲ್ಲ. ದುಷ್ಟರನ್ನು ಎದುರಿಸಿ ಹೇಗೆ ಚುನಾವಣೆ ಮಾಡಬೇಕು ಎಂಬುದು ಗೊತ್ತಿದೆ. ಅದಕ್ಕಾಗಿ ನಾನು ನಿರಂತರ ಹೋರಾಟ ಮಾಡುತ್ತೇನೆ. ನಾನೇನಾದರೂ ಚುನಾವಣೆಗೆ ನಿಲ್ಲುವುದಿದ್ದರೆ ಅದು ರಾಮನಗರದಲ್ಲಿ ಮಾತ್ರ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಗುಡುಗಿದರು.

ನಗರದ ಮಂಜುನಾಥ ಕನ್ವೆನ್ಷನ್ ಹಾಲ್ ಆವರಣದಲ್ಲಿ ಸೋಮವಾರ ರಾತ್ರಿ ನಡೆದ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಸಭೆಯಲ್ಲಿ ಮಾತನಾಡಿದ ಅವರು, ‘ಜನಸೇವೆಗೆ ಭಗವಂತ ನನಗೂ ಅವಕಾಶ ಮಾಡಿಕೊಡುತ್ತಾನೆ. ಅದಕ್ಕಾಗಿ ನಾನು ಕಾಯುತ್ತೇನೆ’ ಎಂದರು.

‘ಗಿಫ್ಟ್ ಕಾರ್ಡ್ ಕೊಟ್ಟು ನನ್ನನ್ನು ಸೋಲಿಸಿದ ರಾಮನಗರದ ಪುಣ್ಯಾತ್ಮ ಶಾಸಕರೇ, ಆ ಕಾರ್ಡ್‌ಗೆ ಏನೂ ಬಂದಿಲ್ಲ ಎಂದು ಜನ ನಿಮ್ಮನ್ನು ಈಗಲೂ ಬೈಯ್ದುಕೊಳ್ಳುತ್ತಿದ್ದಾರೆ. ಕಡೆ ಪಕ್ಷ ಅವರಿಗೆ ರೇಷನ್ ಕಿಟ್ ಆದರೂ ಕೊಡಿ’ ಎಂದು ವ್ಯಂಗ್ಯವಾಡಿದರು. ಆಗ ಮುಖಂಡರೊಬ್ಬರು ಅವರಿಗೆ ಗಿಫ್ಟ್ ಕಾರ್ಡ್ ತೋರಿಸಲು ಹತ್ತಿರಕ್ಕೆ ತೆಗೆದುಕೊಂಡು ಬಂದಾಗ, ‘ಪಾಪದ ಕಾರ್ಡ್ ನಾನ್ಯಾಕೆ ಕೈಯಲ್ಲಿ ಮುಟ್ಟಲಿ’ ಎಂದು ನಿರಾಕರಿಸಿದರು.

‘ಜನ ಕೇಳದಿದ್ದರೂ ಉಚಿತವಾಗಿ ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಕಾಂಗ್ರೆಸ್‌ನವರು, ಪಕ್ಷಕ್ಕೆ ಮತ ಹಾಕದಿದ್ದರೆ ಯೋಜನೆಗಳನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹೃದಯವಂತ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಾರ್ಯಕರ್ತರು ಗೆಲ್ಲಿಸುವ ಮೂಲಕ, ವಿಧಾನಸಭಾ ಚುನಾವಣೆಯಲ್ಲಿ ನನಗಾದ ಸೋಲಿನ ಸೇಡು ತೀರಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ಮಂಡ್ಯದಲ್ಲಿ ಸ್ಥಳೀಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಕುಮಾರಸ್ವಾಮಿ ಅವರು ನಿರ್ಧರಿಸಿದ್ದರು. ಆದರೆ, ನನಗಾದ ಸೋಲು ತೀರಿಸಿಕೊಳ್ಳಲು, ಪಕ್ಷ ಮತ್ತು ಕಾರ್ಯಕರ್ತರನ್ನು ಉಳಿಸಲು, ಅಭಿವೃದ್ಧಿಯಲ್ಲಾಗಿರುವ ಅನ್ಯಾಯ ಸರಿಪಡಿಸಲು ಕುಮಾರಸ್ವಾಮಿ ಅವರು ರಾಮನಗರ ಬಿಟ್ಟು ಅಲ್ಲಿಗೆ ಹೋಗಿದ್ದಾರೆ. ರಾಜ್ಯ ಕಟ್ಟುವ ಎಚ್‌ಡಿಕೆ ಕನಸಿಗೆ ಕನಸಿಗೆ ಬಿಜೆಪಿ ನಾಯಕರು ಮುಂದೆ ಶಕ್ತಿ ತುಂಬಲಿದ್ದಾರೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎ.‌ ಮಂಜುನಾಥ್, ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ರುದ್ರೇಶ್, ಮುಖಂಡ ಗೌತಮ್ ಗೌಡ ಮಾತನಾಡಿದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ದರ್ಶನ್ ರೆಡ್ಡಿ, ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಎ.ಪಿ. ರಂಗನಾಥ್, ನರಸಿಂಹಮೂರ್ತಿ, ರುದ್ರದೇವರು ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಇದ್ದರು.

ಡಿಕೆಶಿ ನೋಟು, ಡಾಕ್ಟರ್‌ಗೆ ವೋಟು ಎಂಬುದು ಕ್ಷೇತ್ರದಲ್ಲಿ ಈ ಸಲದ ಚುನಾವಣೆಯ ಘೋಷ ವಾಕ್ಯ. ರಾಜಕೀಯ ವ್ಯಾಪಾರದಿಂದ ಹಣ ಮಾಡಿರುವ ಅವರು, ಎಷ್ಟೇ ಹಣ ಹಂಚಿದರೂ ಗೆಲ್ಲುವುದಿಲ್ಲ
– ಸಿ.ಪಿ. ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ
‘ಕಾಂಗ್ರೆಸ್ ಕುತಂತ್ರದಿಂದ ಸೋತೆವು’
2019ರಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಧರ್ಮ ಹೇಗೆ ಪಾಲನೆಯಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಮಾಜಿ ಪ್ರಧಾನಿಯಾದ ನನ್ನ ತಾತ ತುಮಕೂರಿನಲ್ಲಿ ಮತ್ತು ಏನು ಅರಿಯದ ಯುವಕನಾದ ನಾನು ಮಂಡ್ಯದಲ್ಲಿ ಸೋಲಲು ಕಾಂಗ್ರೆಸ್‌ನವರ ಕುತಂತ್ರವೇ ಕಾರಣ. ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ಕಾಂಗ್ರೆಸ್‌ನವರು ಈ ಸಲ ಚುನಾವಣೆಯಲ್ಲಿ ಯಾರ‍್ಯಾರಿಗೆ ಟಿಕೆಟ್ ಕೊಟ್ಟಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಸಚಿವರು, ಶಾಸಕರ ಮಕ್ಕಳು, ಪತ್ನಿಗೆ ಟಿಕೆಟ್‌ ಕೊಟ್ಟಿರುವ ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

‘ಮತ ಮಗಳಿದ್ದಂತೆ; ಯೋಗ್ಯರಿಗೆ ಕೊಡಿ’

‘ನಿಮ್ಮ ಮತವು ಮಗಳಿದ್ದಂತೆ. ಅದನ್ನು ಯೋಗ್ಯರಿಗೆ ಕೊಡಿ. ಅದರಿಂದ ದೇಶ ಬೆಳಗುತ್ತದೆ. ಪ್ರಜಾಪ್ರಭುತ್ವ ಉಳಿಯುತ್ತದೆ. ರಾಮನಗರ ಜಿಲ್ಲೆಯು ಕುಮಾರಸ್ವಾಮಿ ಅವರು ಇಲ್ಲಿನ ಜನರಿಗೆ ಕೊಟ್ಟಿರುವ ದೊಡ್ಡ ಗ್ಯಾರಂಟಿ. ಎಂಜಿನಿಯರಿಂಗ್ ಕಾಲೇಜು, ಆರೋಗ್ಯ ವಿಶ್ವವಿದ್ಯಾಲಯ, ಕಾನೂನು ಕಾಲೇಜು ಸೇರಿದಂತೆ ಶಾಶ್ವತವಾಗಿ ಉಳಿದಿರುವ ಹಲವು ಸಂಸ್ಥೆಗಳು ಕುಮಾರಣ್ಣನ ಕೊಡುಗೆಯಾಗಿವೆ. ಬಳಸಿಕೊಂಡವರನ್ನು ಬಿಟ್ಟರೂ ಬೆಳೆಸಿದವರನ್ನು ಮರೆಯಬಾರದು’ ಎಂದು ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT