ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಖುಷಿ: ಎಂ.ಟೆಕ್ ಪದವೀಧರನ ಸಮಗ್ರ ಕೃಷಿ

ಸಮಗ್ರ ಕೃಷಿಯಲ್ಲಿ ಯಶ ಕಂಡ ಪಾಲಾಭೋವಿದೊಡ್ಡಿಯ ಆದೀಶ್
Published 3 ಸೆಪ್ಟೆಂಬರ್ 2024, 5:13 IST
Last Updated 3 ಸೆಪ್ಟೆಂಬರ್ 2024, 5:13 IST
ಅಕ್ಷರ ಗಾತ್ರ

ರಾಮನಗರ: ಓದಿದ್ದು ಎಂ.ಟೆಕ್ ಸ್ನಾತಕೋತ್ತರ ಪದವಿ. ಆದರೆ, ಮನಸ್ಸು ವಾಲಿದ್ದು ಮಾತ್ರ ಕೃಷಿಯತ್ತ. ಓದಿದ ಕೋರ್ಸ್‌ ಕೈ ತುಂಬಾ ಸಂಬಳ ತರುತ್ತಿದ್ದರೂ ನೆಲದ ನಂಟು ಊರಿಗೆ ಸೆಳೆಯುತ್ತಲೇ ಇತ್ತು. ಕಡೆಗೆ ಕೆಲಸ ಬಿಟ್ಟು ಊರಿಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಂಡ ಅವರು , ಕೃಷಿಯಲ್ಲೇ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ.

ತಾಲ್ಲೂಕಿನ ಪಾಲಾಭೋವಿದೊಡ್ಡಿಯ ಪ್ರಗತಿಪರ ಕೃಷಿಕ ಆದೀಶ್ ಯಶೋಗಾಥೆ ಇದು. ತಮ್ಮ 4 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡುತ್ತಿರುವ ಅವರು, ವಿವಿಧ ಪ್ರಯೋಗಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಾ ಯುವಜನರಿಗೆ ಮಾದರಿಯಾಗಿದ್ದಾರೆ.

ಕೃಷಿಯೇ ಅಚ್ಚುಮೆಚ್ಚು: ‘ಚಿಕ್ಕಂದಿನಿಂದಲೂ ನನಗೆ ಕೃಷಿಯೇ ಅಚ್ಚುಮೆಚ್ಚು. ಓದುತ್ತಿದ್ದಾಗಲೂ ತಂದೆಗೆ ಕೃಷಿ ಕೆಲಸಗಳಿಗೆ ನೆರವಾಗುತ್ತಿದ್ದೆ. ಆದರೆ, ಏಕೈಕ ಪುತ್ರನಾಗಿದ್ದ ಪುತ್ರ ಕೃಷಿಗೆ ಸೀಮಿತವಾಗಬಾರದೆಂಬ ಕನಸು ಹೊತ್ತಿದ್ದ ತಂದೆ, ನನ್ನನ್ನು ಚನ್ನಾಗಿ ಓದಿಸಿದರು. ಅವರ ಆಸೆಯಂತೆ ಎಂಜಿನಿಯರ್‌ ಪದವಿ ಮತ್ತು ಎಂ.ಟೆಕ್ ಸ್ನಾತಕೋತ್ತರ ಪದವಿ ಮುಗಿಸಿದೆ’ ಎಂದು ಆದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಓದು ಮುಗಿದ ಆರಂಭದಲ್ಲಿ ಕೆಲವೆಡೆ ಮಾಡಿದೆ. ನಂತರ ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲನಾಗಿ ದುಡಿದೆ. ಮೂರು ವರ್ಷಗಳ ಹಿಂದೆ ತಂದೆ ನಿಧನರಾದ ಬಳಿಕ, ಕೃಷಿ ಕಡೆಗಿನ ತುಡಿತ ಹೆಚ್ಚಾಯಿತು. ಬಿಡುವಿಲ್ಲದ ಜಂಜಾಟದ ಬದುಕು ಸಾಕೆಂದು, ಆ ಕೆಲಸಕ್ಕೆ ಗುಡ್ ಬೈ ಹೇಳಿ ಊರಿಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಂಡೆ’ ಎಂದು ಹೇಳಿದರು.

ಬಹು ಬೆಳೆ:

‘ನಾಲ್ಕು ಎಕರೆ ಜಮೀನಿನಲ್ಲಿ 2 ಎಕರೆ ಲೀಸ್ ಭೂಮಿಯಾಗಿದ್ದು, ಎಲ್ಲದರಲ್ಲೂ ಕೃಷಿ ಚಟುವಟಿಕೆ ಮಾಡುತ್ತಿದ್ದೇನೆ. 3 ಎಕರೆ ನೀರಾವರಿಯಾಗಿದ್ದು, ಉಳಿದ 1 ಎಕರೆ ಒಣಭೂಮಿಯಾಗಿದೆ. ಹಿಪ್ಪುನೇರಳೆ, ಭತ್ತ, ಬೆಂಡೆಕಾಯಿ, ರಾಗಿ, ಮೆಣಸಿನಕಾಯಿ, ಸೊಪ್ಪು, ಬಾಳೆ, ತೆಂಗು ಹಾಗೂ ಹಣ್ಣಿನ ಗಿಡಗಳನ್ನು ಬೆಳೆದಿದ್ದೇನೆ’ ಎಂದು ತಮ್ಮ ಕೃಷಿ ಚಟುವಟಿಕೆಯ ಕುರಿತು ಹಂಚಿಕೊಂಡರು.

‘ಒಂದು ಎಕರೆಯಲ್ಲಿರುವ ತೆಂಗಿನ ತೋಟದಲ್ಲೇ ಬಟರ್‌ಫ್ರೂಟ್, ಸೀಬೆ, ಬಾಳೆ, ಸಪೋಟ, ನಿಂಬೆ ಗಿಡ ನೆಟ್ಟಿದ್ದೇನೆ. ತೋಟದಂಚಿನಲ್ಲಿ ಬಾಳೆಗಿಡಗಳನ್ನು ನೆಟ್ಟಿದ್ದು ಎಲ್ಲವೂ ಫಲ ಕೊಡುತ್ತಿವೆ. ಬೆಳಿಗ್ಗೆ 3 ಗಂಟೆಗೆ ಎದ್ದು ಹಣ್ಣು ಸೇರಿದಂತೆ ಫಸಲು ಬಂದಿರುವ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡಿ ಬರುವುದರೊಂದಿಗೆ ನನ್ನ ದಿನಚರಿ ಶುರುವಾದರೆ, ಸಂಜೆ ಮುಗಿಯುತ್ತದೆ’ ಎಂದರು.

‘ನನ್ನ ಪತ್ನಿ ವಕೀಲೆಯಾಗಿದ್ದು, ಅವರು ಸಹ ಕೃಷಿ ಕೆಲಸಗಳಲ್ಲಿ ನೆರವಾಗುತ್ತಾರೆ. ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕರು ಸಿಗುವುದು ಕಷ್ಟವಾಗಿರುವುದರಿಂದ, ನನ್ನ ಸಹೋದರ ಸಂಬಂಧಿಗಳು ಸಹ ಸಹಾಯ ಮಾಡುತ್ತಾರೆ. ನೀರು ಹಾಯಿಸುವುದು, ಫಸಲು ಕೀಳುವುದು, ಮಾರುಕಟ್ಟೆಗೆ ಸಾಗಾಟ, ಕಳೆ ಕೀಳುವುದು, ಔಷಧ ಸಿಂಪಡಣೆ ಸೇರಿದಂತೆ ಬಹುತೇಕ ಕೆಲಸಗಳನ್ನು ನಾವೇ ಮಾಡಿಕೊಳ್ಳುತ್ತೇವೆ’ ಎಂದು ತಿಳಿಸಿದರು.

ರಾಮನಗರ ತಾಲ್ಲೂಕಿನ ಪಾಲಾಭೋವಿದೊಡ್ಡಿಯ ಕೃಷಿಕ ಆದೀಶ್ ಅವರ ಜಮೀನಿನಲ್ಲಿರುವ ರಾಗಿ ಬೆಳೆ
ರಾಮನಗರ ತಾಲ್ಲೂಕಿನ ಪಾಲಾಭೋವಿದೊಡ್ಡಿಯ ಕೃಷಿಕ ಆದೀಶ್ ಅವರ ಜಮೀನಿನಲ್ಲಿರುವ ರಾಗಿ ಬೆಳೆ

‘ಶ್ರಮಕ್ಕೆ ತಕ್ಕ ಪ್ರತಿಫಲ’

‘ಲಾಭ–ನಷ್ಟ ಲೆಕ್ಕಾಚಾರ ಹಾಕಿಯೇ ಕೃಷಿ ಮಾಡಬೇಕು. ಬಹುಬೆಳೆ ಪದ್ದತಿಯಿಂದಾಗಿ ನಿತ್ಯ ಕೈಯಲ್ಲಿ ಹಣ ಹರಿದಾಡುತ್ತದೆ. ಮಾರುಕಟ್ಟೆಯಲ್ಲಿ ನಿತ್ಯ ರೈತರು ಹಾಗೂ ವ್ಯಾಪಾರಿಗಳೊಂದಿಗೆ ಓಡನಾಟವು ನಾನು ಅಪ್ಡೇಟ್ ಆಗಲು ನೆರವಾಗುತ್ತಿದೆ. ನಾಲ್ಕು ಎಕರೆಯಲ್ಲಿ ಕೃಷಿ ಮಾಡುತ್ತಿರುವ ನನಗೆ ಎಲ್ಲಾ ಕಳೆದು ವಾರ್ಷಿಕ ಸುಮಾರು ₹4 ಲಕ್ಷ ಸಂಪಾದನೆಯಾಗುತ್ತದೆ. ಶ್ರಮಕ್ಕೆ ತಕ್ಕ ಫ್ರತಿಫಲ ಸಿಗುತ್ತಿದೆ. ಸಾವಯವ ಕೃಷಿ ನನ್ನ ಗುರಿ. ಸದ್ಯ ಶೇ 50ರಷ್ಟು ಆ ಪದ್ಧತಿ ಅಳವಡಿಸಿಕೊಂಡಿದ್ದು ಮುಂದೆ ಪೂರ್ಣ ಪ್ರಮಾಣದಲ್ಲಿ ಮಾಡುವೆ. ಹೈನುಗಾರಿಕೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಮುಂದೆ ಸಾವಯವ ಉತ್ಪನ್ನಗಳ ಮಳಿಗೆತೆರೆದು ಜನರಿಗೆ ಉತ್ತಮ ಉತ್ಪನ್ನಗಳನ್ನು ಒದಗಿಸುವ ಗುರಿ ಇದೆ’ ಎಂದು ತಮ್ಮ ಯೋಜನೆಯನ್ನು ಆದೀಶ್ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT